ಗದಗ: ಸರ್ಕಾರದಿಂದ ಅನುದಾನ ಬಿಡುಗಡೆಯಾಗದೆ, ಗುತ್ತಿಗೆದಾರರ ಒತ್ತಡಕ್ಕೆ ಬೇಸತ್ತು ನಾಲ್ಕು ಪುಟಗಳ ಡೆತ್ನೋಟ್ ಬರೆದಿಟ್ಟು ನಿಗೂಢವಾಗಿ ನಾಪತ್ತೆಯಾಗಿದ್ದ ಗದಗ(Gadag) ಕೆಆರ್ಐಡಿಎಲ್ (KRIDL) ಸಹಾಯಕ ಕಾರ್ಯಪಾಲಕ ಎಂಜಿನಿಯರ್ (AEE) ಪರ್ವೇಜ್ ಧಾರವಾಡ ನಾಪತ್ತೆ ಪ್ರಕರಣಕ್ಕೆ ಕೊನೆಗೂ ಮಹತ್ವದ ಅಂತ್ಯ ಸಿಕ್ಕಿದೆ.
ಬರೋಬ್ಬರಿ 40 ದಿನಗಳ ಕಾಲ ಪೊಲೀಸರ ಕಣ್ಣಿಗೆ ಬೀಳದೆ ಐದು ರಾಜ್ಯಗಳಲ್ಲಿ ಅಲೆದಾಡುತ್ತಿದ್ದ ಅಧಿಕಾರಿಯನ್ನು ರಾಜ್ಯ ಪೊಲೀಸ್ ತಂಡ ಮಹಾರಾಷ್ಟ್ರದ ಮುಂಬೈನಲ್ಲಿ (Mumbai) ಪತ್ತೆಹಚ್ಚಿ ವಶಕ್ಕೆ ಪಡೆದಿದೆ.
ಪೊಲೀಸರು ತಮ್ಮ ಲೊಕೇಶನ್ ಪತ್ತೆಹಚ್ಚಬಾರದು ಎಂಬ ಉದ್ದೇಶದಿಂದ ಅಧಿಕಾರಿ ಪರ್ವೇಜ್ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದರು. ಯಾವುದೇ ಎಟಿಎಂ ಅಥವಾ ಡಿಜಿಟಲ್ ಪಾವತಿಗಳನ್ನು ಬಳಸದೆ ನಗದು ಹಣದಲ್ಲೇ ಬದುಕು ಸಾಗಿಸುತ್ತಿದ್ದರು. ಇದು ತನಿಖಾ ತಂಡಕ್ಕೆ ಜಾಡು ಹಿಡಿಯಲು ಭಾರೀ ಸವಾಲಾಗಿ ಪರಿಣಮಿಸಿತ್ತು.
ಸೆಪ್ಟೆಂಬರ್ 12ರಂದು ಬೆಂಗಳೂರಿನ ಕೆಆರ್ಐಡಿಎಲ್ ಎಂಡಿ (MD) ಅವರಿಗೆ ಪತ್ರ ಬರೆದಿದ್ದ ಪರ್ವೇಜ್, “ಸರ್ಕಾರ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಕೆಲಸ ಮುಗಿಸಿದ ಗುತ್ತಿಗೆದಾರರ ಕಿರುಕುಳದಿಂದ ತೀವ್ರ ಮಾನಸಿಕ ಹಿಂಸೆಯಾಗಿದೆ. ನನ್ನ ಸಾವಿಗೆ ನಾನೇ ಕಾರಣ” ಎಂದು 4 ಪುಟಗಳ ಡೆತ್ನೋಟ್ ಬರೆದಿಟ್ಟಿದ್ದರು. ಮರುದಿನ (ಸೆ.13) ಬೆಂಗಳೂರಿನಲ್ಲಿ ಮೀಟಿಂಗ್ ಇದೆ ಎಂದು ಕುಟುಂಬಸ್ಥರಿಗೆ ಹೇಳಿ ಗದಗದಿಂದ ರೈಲು ಹತ್ತಿದ್ದ ಅಧಿಕಾರಿ, ಎರಡು ದಿನಗಳ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿ ಕಣ್ಮರೆಯಾಗಿದ್ದರು. ಸೆಪ್ಟೆಂಬರ್ 16ರಂದು ಗದಗ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು 5 ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ಚುರುಕುಗೊಳಿಸಿದ್ದರು. ಅಧಿಕಾರಿಯ ಚಲನವಲನದ ಜಾಡು ಹಿಡಿದ ಪೊಲೀಸರಿಗೆ ಬೆಚ್ಚಿಬೀಳಿಸುವ ಮಾಹಿತಿ ಲಭ್ಯವಾಗಿತ್ತು. ಬೆಂಗಳೂರಿನಿಂದ ಆಂಧ್ರಪ್ರದೇಶದ ವಿಜಯವಾಡಕ್ಕೆ ತೆರಳಿದ್ದ ಅಧಿಕಾರಿ, ಅಲ್ಲಿಂದ ಮಧ್ಯಪ್ರದೇಶದ ಭೋಪಾಲ್ಗೆ ತೆರಳಿದ್ದರು. ಭೋಪಾಲ್ ರೈಲ್ವೆ ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಇವರ ಚಲನವಲನ ಸೆರೆಯಾಗಿತ್ತು. ಬಳಿಕ ಲೋಕಲ್ ರೈಲಿನ ಮೂಲಕ ಉಜ್ಜಯಿನಿಗೆ ತೆರಳಿದ್ದರು.
ಪೊಲೀಸರು ಅಲ್ಲಿನ ಮಹಾಕಾಳೇಶ್ವರ ದೇವಸ್ಥಾನ ಹಾಗೂ ಶಾಹಿ ಮಸೀದಿಯ ಬಳಿ ಶೋಧ ನಡೆಸಿದರೂ ಸಿಕ್ಕಿರಲಿಲ್ಲ. ನಂತರ ರಾಜಸ್ಥಾನದ ಪ್ರಸಿದ್ಧ ಅಜ್ಮೀರ ಶರೀಫ್ ದರ್ಗಾಕ್ಕೆ ತೆರಳಿದ್ದ ಸುಳಿವು ಸಿಕ್ಕು ಪೊಲೀಸರು ಅತ್ತ ಧಾವಿಸಿದ್ದರು. ಅಲ್ಲಿಂದ ಮಹಾರಾಷ್ಟ್ರದ ಮೀರಜ್ ಮೂಲಕ ಮುಂಬೈ ಸೇರಿಕೊಂಡಿದ್ದ ಪರ್ವೇಜ್ನನ್ನು ಪೊಲೀಸರು ಕೊನೆಗೂ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಮುಂಬೈನಲ್ಲಿ ವಶಕ್ಕೆ ಪಡೆಯಲಾಗಿರುವ ಪರ್ವೇಜ್ ಅವರನ್ನು ಬೆಂಗಳೂರು ಮುಖ್ಯ ಕಚೇರಿಗೆ ಕೊಂಡೊಯ್ಯಲಾಗುತ್ತದೆಯೇ ಅಥವಾ ಗದಗ ಠಾಣೆಗೆ ಕರೆತರಲಾಗುತ್ತದೆಯೇ ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ. ಇಷ್ಟು ದಿನ ಯಾರ ಸಂಪರ್ಕದಲ್ಲಿದ್ದರು? ಹಣಕಾಸಿನ ನೆರವು ಯಾರು ನೀಡಿದ್ದರು? ಎಂಬಿತ್ಯಾದಿ ಸತ್ಯಾಸತ್ಯತೆಗಳು ವಿಚಾರಣೆಯ ನಂತರವೇ ಬಯಲಾಗಬೇಕಿದೆ. ಒಟ್ಟಿನಲ್ಲಿ 40 ದಿನಗಳಿಂದ ಪೊಲೀಸರ ನಿದ್ದೆಗೆಡಿಸಿ, ಕುಟುಂಬಸ್ಥರಲ್ಲಿ ಜೀವಭಯ ಮೂಡಿಸಿದ್ದ ಎಇಇ ಪತ್ತೆಯಾಗಿರುವುದು ಕುಟುಂಬಸ್ಥರು ಹಾಗೂ ಇಲಾಖೆಗೆ ನೆಮ್ಮದಿ ತಂದಿದೆ.
