ಬೆಳಗಾವಿ: ಲೋಕಸಭೆಯ ಅತ್ಯಂತ ಕಿರಿಯ ಸಂಸದೆಯರಲ್ಲಿ ಒಬ್ಬರಾದ ಚಿಕ್ಕೋಡಿ(Chikkodi) ಕ್ಷೇತ್ರದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರ ನಿಶ್ಚಿತಾರ್ಥ ಸಮಾರಂಭವು ಅತ್ಯಂತ ಸರಳವಾಗಿ ಮತ್ತು ಸಂಪ್ರದಾಯಬದ್ಧವಾಗಿ ನೆರವೇರಿದೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿಯಾಗಿರುವ ಪ್ರಿಯಾಂಕಾ ಅವರು ರಾಯಚೂರು ಮೂಲದ ಚಾರ್ಟರ್ಡ್ ಅಕೌಂಟೆಂಟ್ ಗೌತಮ್ ಪಾಟೀಲ್ ಅವರೊಂದಿಗೆ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಗೋಕಾಕ್ನ ಪ್ರತಿಷ್ಠಿತ ಕ್ಲಬ್ ರಸ್ತೆಯಲ್ಲಿರುವ ಸತೀಶ್ ಜಾರಕಿಹೊಳಿ ಅವರ ‘ಹಿಲ್ ಗಾರ್ಡನ್’ ನಿವಾಸದಲ್ಲಿ ಶುಭ ಸಮಾರಂಭ ಜರುಗಿತು. ಕೇವಲ ಕುಟುಂಬದ ಆಪ್ತರು ಹಾಗೂ ನಿಕಟವರ್ತಿಗಳ ಸಮ್ಮುಖದಲ್ಲಿ ಜೋಡಿ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ನಿಶ್ಚಿತಾರ್ಥದ ವಿಧಿವಿಧಾನಗಳು ಸಂಪನ್ನಗೊಂಡವು. ಇದನ್ನೂ ಓದಿ: ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕಿದ್ದಾರೆ: ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಧನ್ವೀರ್ ತಂದೆಯಿಂದ ದೂರು
ಗೌತಮ್ ಪಾಟೀಲ್ ಯಾರು?
ಪ್ರಿಯಾಂಕಾ ಜಾರಕಿಹೊಳಿ ಅವರ ಕೈಹಿಡಿಯಲಿರುವ ಗೌತಮ್ ಪಾಟೀಲ್ ವೃತ್ತಿಯಲ್ಲಿ ಸಿಎ (Chartered Accountant) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ರಾಯಚೂರು ಜಿಲ್ಲೆಯ ದೇವದುರ್ಗ ಮೂಲದವರಾಗಿದ್ದು, ಇವರ ತಂದೆ ನಿವೃತ್ತ ಆರ್ಟಿಒ (RTO) ಅಧಿಕಾರಿಯಾಗಿದ್ದಾರೆ. ಸದ್ಯ ಗೌತಮ್ ಅವರ ಕುಟುಂಬದ ಹೆಚ್ಚಿನ ವಿವರಗಳನ್ನು ಜಾರಕಿಹೊಳಿ ಕುಟುಂಬ ಸಾರ್ವಜನಿಕವಾಗಿ ಹಂಚಿಕೊಂಡಿಲ್ಲ.
ರಾಜಕೀಯ ಪ್ರಭಾವಿ ಕುಟುಂಬವಾದರೂ ಯಾವುದೇ ಆಡಂಬರವಿಲ್ಲದೆ ಕಾರ್ಯಕ್ರಮ ನಡೆಸಲಾಯಿತು. ಸಮಾರಂಭದಲ್ಲಿ ಕೆಎಂಎಫ್ ಅಧ್ಯಕ್ಷ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಸೇರಿದಂತೆ ಜಾರಕಿಹೊಳಿ ಕುಟುಂಬದ ಹಿರಿಯರು, ಸಂಬಂಧಿಕರು ಭಾಗವಹಿಸಿ ನೂತನ ಜೋಡಿಗೆ ಶುಭ ಹಾರೈಸಿದರು.

