ಆಲೂಗಡ್ಡೆ ಮತ್ತು ಹೂಕೋಸು ಬಳಸಿ ಮಾಡುವ ಆಲೂ ಗೋಬಿ (Aloo Gobi) ಉತ್ತರ ಭಾರತದ ಜನಪ್ರಿಯ ಖಾದ್ಯಗಳಲ್ಲಿ ಒಂದು. ಮಸಾಲೆಗಳ ರುಚಿ, ಆಲೂಗಡ್ಡೆಯ ಸಾಫ್ಟ್ನೆಸ್ ಮತ್ತು ಹೂಕೋಸಿನ ಕಾಂಬಿನೇಷನ್ ಈ ಪಲ್ಯವನ್ನು ಇನ್ನಷ್ಟು ರುಚಿಕರವಾಗಿಸುತ್ತದೆ. ಚಪಾತಿ, ಪೂರಿ ಅಥವಾ ಬಿಸಿಬಿಸಿ ಅನ್ನದ ಜೊತೆ ಇದನ್ನು ಸವಿಯಬಹುದು. ಮನೆಯಲ್ಲಿರುವ ಸಾಮಾನ್ಯ ಪದಾರ್ಥಗಳನ್ನು ಬಳಸಿ ರೆಸ್ಟೋರೆಂಟ್ ಶೈಲಿಯಲ್ಲಿ ಆಲೂ ಗೋಬಿ ಮಾಡುವ ಸುಲಭ ವಿಧಾನ ಇಲ್ಲಿದೆ.
ಬೇಕಾಗುವ ಪದಾರ್ಥಗಳು
ಆಲೂಗಡ್ಡೆ – 2 (ದೊಡ್ಡ ಚೂರುಗಳಾಗಿ ಕತ್ತರಿಸಿದ್ದು)
ಹೂಕೋಸು – 1 ಸಣ್ಣದು (ಮಧ್ಯಮ ಗಾತ್ರದ ಚೂರುಗಳಾಗಿ ಕತ್ತರಿಸಿದ್ದು)
ಈರುಳ್ಳಿ – 1 (ಸಣ್ಣದಾಗಿ ಹೆಚ್ಚಿದ್ದು)
ಟೊಮೆಟೊ – 2 (ಸಣ್ಣದಾಗಿ ಹೆಚ್ಚಿದ್ದು)
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಹಸಿಮೆಣಸಿನಕಾಯಿ – 2 (ಸೀಳಿದ್ದು)
ಜೀರಿಗೆ – 1 ಟೀ ಸ್ಪೂನ್
ಅರಿಶಿನ ಪುಡಿ – ¼ ಟೀ ಸ್ಪೂನ್
ಅಚ್ಚಖಾರದ ಪುಡಿ – 1 ಟೀ ಸ್ಪೂನ್
ಧನಿಯಾ ಪುಡಿ – 1 ಟೀ ಸ್ಪೂನ್
ಗರಂ ಮಸಾಲಾ ಪುಡಿ – ½ ಟೀ ಸ್ಪೂನ್
ಎಣ್ಣೆ ಅಥವಾ ತುಪ್ಪ – 3 ರಿಂದ 4 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು – ಸ್ವಲ್ಪ (ಸಣ್ಣದಾಗಿ ಹೆಚ್ಚಿದ್ದು)
ಉಪ್ಪು – ರುಚಿಗೆ ತಕ್ಕಷ್ಟು
ನೀರು – ¼ ಕಪ್
ಮಾಡುವ ವಿಧಾನ
ಮೊದಲು ಹೂಕೋಸನ್ನು ಮಧ್ಯಮ ಗಾತ್ರದ ಚೂರುಗಳಾಗಿ ಕತ್ತರಿಸಿ, ಉಪ್ಪು ಬೆರೆಸಿದ ಬಿಸಿ ನೀರಿನಲ್ಲಿ ಸುಮಾರು 5 ನಿಮಿಷ ನೆನೆಸಿಡಿ. ನಂತರ ನೀರನ್ನು ಬಸಿದುಕೊಳ್ಳಿ. ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ದೊಡ್ಡ ಚೂರುಗಳಾಗಿ ಕತ್ತರಿಸಿಕೊಳ್ಳಿ.
ಈಗ ಒಂದು ಬಾಣಲೆಯಲ್ಲಿ 2 ಟೇಬಲ್ ಸ್ಪೂನ್ ಎಣ್ಣೆ ಬಿಸಿ ಮಾಡಿ. ಅದಕ್ಕೆ ಆಲೂಗಡ್ಡೆ ಮತ್ತು ಹೂಕೋಸು ಸೇರಿಸಿ ಮಧ್ಯಮ ಉರಿಯಲ್ಲಿ ಸ್ವಲ್ಪ ಗೋಲ್ಡನ್ ಬಣ್ಣ ಬರುವವರೆಗೆ ಹುರಿಯಿರಿ. ತರಕಾರಿಗಳು ಸ್ವಲ್ಪ ಬೆಂದ ನಂತರ ಅವುಗಳನ್ನು ಬೇರೆ ತಟ್ಟೆಗೆ ತೆಗೆದಿಡಿ.
ಅದೇ ಬಾಣಲೆಗೆ ಉಳಿದ ಎಣ್ಣೆ ಹಾಕಿ ಬಿಸಿ ಮಾಡಿ. ಜೀರಿಗೆ ಸೇರಿಸಿ ಚಟಪಟ ಸದ್ದಾಗುವವರೆಗೆ ಹುರಿಯಿರಿ. ನಂತರ ಹೆಚ್ಚಿದ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಸೇರಿಸಿ ಈರುಳ್ಳಿ ಹೊಂಬಣ್ಣಕ್ಕೆ ಬರುವವರೆಗೆ ಹುರಿಯಿರಿ.
ಈರುಳ್ಳಿ ಬೆಂದ ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ನಂತರ ಟೊಮೆಟೊ ಸೇರಿಸಿ ಮೃದುವಾಗುವವರೆಗೆ ಬೇಯಿಸಿ. ಈಗ ಅರಿಶಿನ ಪುಡಿ, ಅಚ್ಚಖಾರದ ಪುಡಿ, ಧನಿಯಾ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಮೊದಲೇ ಹುರಿದಿಟ್ಟುಕೊಂಡ ಆಲೂಗಡ್ಡೆ ಮತ್ತು ಹೂಕೋಸನ್ನು ಮಸಾಲೆಗೆ ಸೇರಿಸಿ ಚೆನ್ನಾಗಿ ಕಲಸಿ. ಇದಕ್ಕೆ ¼ ಕಪ್ ನೀರು ಹಾಕಿ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 5 ರಿಂದ 7 ನಿಮಿಷ ಬೇಯಿಸಿ. ಮಧ್ಯೆ ಒಮ್ಮೆ ಕಲಸುವುದರಿಂದ ಮಸಾಲೆ ತರಕಾರಿಗಳಿಗೆ ಚೆನ್ನಾಗಿ ಹಿಡಿಯುತ್ತದೆ.
ತರಕಾರಿಗಳು ಪೂರ್ತಿಯಾಗಿ ಬೆಂದ ಬಳಿಕ ಗರಂ ಮಸಾಲಾ ಪುಡಿ ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ರುಚಿಕರವಾದ ಆಲೂ ಗೋಬಿ ಸವಿಯಲು ಸಿದ್ಧ.
ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಈ ರೆಸ್ಟೋರೆಂಟ್ ಸ್ಟೈಲ್ ಆಲೂ ಗೋಬಿ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ. ಚಪಾತಿ, ಪೂರಿ ಅಥವಾ ಅನ್ನದ ಜೊತೆ ಬಿಸಿಬಿಸಿಯಾಗಿ ಸವಿಯಿರಿ.


