ವಾಷಿಂಗ್ಟನ್: ನೊಬೆಲ್(Nobel) ಶಾಂತಿ ಪ್ರಶಸ್ತಿಯ ಮೇಲಿನ ತಮ್ಮ ವ್ಯಾಮೋಹದ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಇದೀಗ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಯೂ(Pulitzer Prize) ತಮಗೆ ಸಿಗಬೇಕಿತ್ತು ಎಂದು ಹೇಳುವ ಮೂಲಕ ಹೊಸ ಚರ್ಚೆಗೆ ಗ್ರಾಸವಾಗಿದ್ದಾರೆ.
ದಕ್ಷಿಣ ಕೆರೊಲಿನಾದಲ್ಲಿ ನಡೆದ ಪಕ್ಷದ ರ್ಯಾಲಿಯೊಂದರಲ್ಲಿ ಮಾತನಾಡಿದ ಅವರು, ತಮಗೆ ಈ ಎರಡೂ ಪ್ರಶಸ್ತಿಗಳು ಸಿಗದಂತೆ ವಂಚಿಸಲಾಗಿದೆ ಮತ್ತು ತಮ್ಮ ಬರವಣಿಗೆಗೆ ಪುಲಿಟ್ಜರ್ ಗೌರವ ದಕ್ಕಬೇಕಿತ್ತು ಎಂದು ಪ್ರತಿಪಾದಿಸಿದ್ದಾರೆ.
ಅಮೆರಿಕದ ಮಧ್ಯಂತರ ಚುನಾವಣಾ ಪ್ರಚಾರದ ಅಂಗವಾಗಿ ಪೆಂಡಲ್ಟನ್ನ ಟಿ. ಎಡ್ ಗ್ಯಾರಿಸನ್ ಅರೆನಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ರಷ್ಯಾ ತನಿಖೆಯ ವರದಿಗಾರಿಕೆಗಾಗಿ ಪುಲಿಟ್ಜರ್ ಪ್ರಶಸ್ತಿ ಪಡೆದ ಪತ್ರಕರ್ತರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ನನಗೆ ನೊಬೆಲ್ ಪ್ರಶಸ್ತಿ ಸಿಗಲಿಲ್ಲ, ಪುಲಿಟ್ಜರ್ ಪ್ರಶಸ್ತಿಯೂ ಬರಲಿಲ್ಲ. ನಿಜ ಹೇಳಬೇಕೆಂದರೆ, ನನ್ನ ಬರವಣಿಗೆಗಾಗಿ ನನಗೇ ಪುಲಿಟ್ಜರ್ ಪ್ರಶಸ್ತಿ ಸಿಗಬೇಕಿತ್ತು. ಈಗ ಪ್ರಶಸ್ತಿ ಪಡೆದಿರುವವರು ಅದಕ್ಕೆ ಅರ್ಹರೇ ಅಲ್ಲ. ರಷ್ಯಾ, ರಷ್ಯಾ, ರಷ್ಯಾ ಎಂಬ ವಿಷಯದ ಕುರಿತು ನಿಖರ ಮತ್ತು ವರದಿಗಾರಿಕೆ ಮಾಡಿದ್ದಕ್ಕಾಗಿ ಅವರಿಗೆ ಪ್ರಶಸ್ತಿ ನೀಡಲಾಯಿತು. ಆದರೆ ಅವರ ವರದಿಗಳು ಸಂಪೂರ್ಣ ತಪ್ಪಾಗಿದ್ದವು. ಅವರೆಲ್ಲರೂ ಸುಳ್ಳು ಬರೆದಿದ್ದರು ಎಂದು ಟ್ರಂಪ್ ನೆರೆದಿದ್ದ ಜನರ ಮುಂದೆ ಕಿಡಿಕಾರಿದರು. ಇದನ್ನೂ ಓದಿ: ಬಂದ ವಿಮಾನ ಹತ್ಕೊಂಡ್ ವಾಪಸ್ ಹೋಗಿ; ಟ್ರಂಪ್ ಸಂದೇಶ ತಂದಿದ್ದ ಪಾಕ್ ಸೇನಾ ಮುಖ್ಯಸ್ಥನಿಗೆ ಇರಾನ್ನಲ್ಲಿ ಮುಖಭಂಗ
Trump: I didn’t get the Nobel Prize. I didn’t get the Pulitzer. I should have gotten the Pulitzer for writing too. https://t.co/OAuyWm7to4
— Acyn (@Acyn) October 22, 2026
2022 ರಿಂದ ರಷ್ಯಾದಲ್ಲಿ(Russia) ಬಂಧನದಲ್ಲಿದ್ದು ಇತ್ತೀಚೆಗಷ್ಟೇ ಬಿಡುಗಡೆಯಾದ ನಿವೃತ್ತ ಅಮೆರಿಕನ್ ಶಿಕ್ಷಕ ಸ್ಟೀಫನ್ ಹಬಾರ್ಡ್ ಅವರ ಬಗ್ಗೆ ಮಾತನಾಡುವಾಗ ಟ್ರಂಪ್ ಈ ಪ್ರಶಸ್ತಿಗಳ ಪ್ರಸ್ತಾಪ ಮಾಡಿದರು. 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಹಸ್ತಕ್ಷೇಪದ ಕುರಿತ ವರದಿಗಾಗಿ 2018 ರಲ್ಲಿ ‘ದಿ ನ್ಯೂಯಾರ್ಕ್ ಟೈಮ್ಸ್’ ಮತ್ತು ‘ದಿ ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಗಳಿಗೆ ಪುಲಿಟ್ಜರ್ ಪ್ರಶಸ್ತಿ ನೀಡಲಾಗಿತ್ತು. ಇದನ್ನು ವಿರೋಧಿಸಿ ಟ್ರಂಪ್ ಪುಲಿಟ್ಜರ್ ಮಂಡಳಿಯ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದು, ಪ್ರಸಕ್ತ ಭಾಷಣದಲ್ಲಿ ಅವರ ಆಕ್ರೋಶಕ್ಕೆ ಇದೂ ಕಾರಣ ಎನ್ನಲಾಗಿದೆ.
ತಾವು ಬರೆದ ಯಾವ ನಿರ್ದಿಷ್ಟ ಕೃತಿಗೆ ಪುಲಿಟ್ಜರ್ ಬರಬೇಕಿತ್ತು ಎಂಬುದನ್ನು ಟ್ರಂಪ್ ಸ್ಪಷ್ಟಪಡಿಸಿಲ್ಲ. ಟ್ರಂಪ್ ಹೆಸರಿನಲ್ಲಿ ಹಲವಾರು ಪುಸ್ತಕಗಳು ಪ್ರಕಟವಾಗಿದ್ದರೂ, ಅವುಗಳಲ್ಲಿ ಹೆಚ್ಚಿನವುಗಳನ್ನು ವೃತ್ತಿಪರ ಬರಹಗಾರರ ಸಹಯೋಗದಲ್ಲಿ ಬರೆಯಲಾಗಿತ್ತು. 1987 ರಲ್ಲಿ ಬಿಡುಗಡೆಯಾಗಿ ಭಾರಿ ಜನಪ್ರಿಯತೆ ಗಳಿಸಿದ “ದಿ ಆರ್ಟ್ ಆಫ್ ದಿ ಡೀಲ್” ಪುಸ್ತಕದ ಬಹುಪಾಲು ಹಸ್ತಪ್ರತಿಯನ್ನು ತಾವೇ ಬರೆದಿದ್ದಾಗಿ, ಅದರಲ್ಲಿ ಟ್ರಂಪ್ ಪಾತ್ರ ಅತ್ಯಲ್ಪವಾಗಿತ್ತು ಎಂದು ಸಹ-ಲೇಖಕ ಟೋನಿ ಶ್ವಾರ್ಟ್ಜ್ ಈ ಹಿಂದೆ ಬಹಿರಂಗಪಡಿಸಿದ್ದರು.
ಇದೇ ವೇಳೆ, ಭಾಷಣದಲ್ಲಿ ಗೊಂದಲಕ್ಕೊಳಗಾದಂತೆ ಕಂಡ ಟ್ರಂಪ್, ನೊಬೆಲ್ ಶಾಂತಿ ಪ್ರಶಸ್ತಿಯ ಹೆಸರನ್ನೇ ಮರೆತು ಅದನ್ನೂ ‘ಪುಲಿಟ್ಜರ್’ ಎಂದು ಕರೆದರು. “ನಾನು ಈ ಎಲ್ಲಾ ಯುದ್ಧಗಳನ್ನು ನಿಲ್ಲಿಸಿ ಬಗೆಹರಿಸಿದೆ, ಆದರೆ ಅವರು ಆ ಅದ್ಭುತ ಶಾಂತಿ ಪ್ರಶಸ್ತಿಯನ್ನು ಬೇರೆಯವರಿಗೆ ಕೊಟ್ಟರು, ಅಲ್ಲವೇ? ಆ ಶಾಂತಿ ಪ್ರಶಸ್ತಿಯ ಹೆಸರು ಯಾರಿಗಾದರೂ ಗೊತ್ತಿದೆಯೇ? ಆ ಶಾಂತಿ ಪ್ರಶಸ್ತಿ… ಅವರು ಆ ಪುಲಿಟ್ಜರ್ ಪ್ರಶಸ್ತಿಯನ್ನು ಒಬ್ಬ ಯುವತಿಗೆ ನೀಡಿದರು” ಎಂದು ಟ್ರಂಪ್ ಹೇಳಿದ್ದು ಸಭಿಕರಲ್ಲಿ ನಗು ಮೂಡಿಸಿತು.
