– ಇಳಕಲ್ ಬೈಕ್ ವೀರನಿಂದ ಸಾಧನೆ
ಬಾಗಲಕೋಟೆ: ವಿಶ್ವವಿಖ್ಯಾತ ಮೈಸೂರು ದಸರಾ(Mysuru Dasara) ಮಹೋತ್ಸವದ ಸಂಭ್ರಮದ ನಡುವೆ, ಬಾಗಲಕೋಟೆ(Bagalkote) ಜಿಲ್ಲೆಯ ಇಳಕಲ್ ನಗರದ ಸಾಹಸಿ ವೀರಣ್ಣ ಕುಂದರಗಿಮಠ(Veeranna Kundaragimatha) ಅವರು ಹ್ಯಾಂಡಲ್ ಇಲ್ಲದ ಬೈಕ್ನಲ್ಲಿ ಬರೋಬ್ಬರಿ 460 ಕಿಲೋಮೀಟರ್ ದೂರ ಸವಾರಿ ಮಾಡಿ ಅಪರೂಪದ ಹಾಗೂ ಮೈ ನವಿರೇಳಿಸುವ ಸಾಹಸ ಮಾಡಿದ್ದಾರೆ.
ನಾಡಹಬ್ಬ ದಸರೆಯ ಸಂದರ್ಭದಲ್ಲಿ ಕನ್ನಡ ನಾಡು-ನುಡಿಯ ಹಿರಿಮೆ ಸಾರುವುದು ಮತ್ತು ಸಮಾಜದಲ್ಲಿ ಸತ್ಸಂಕಲ್ಪಗಳನ್ನು ಬಿತ್ತುವ ಮಹದುದ್ದೇಶದೊಂದಿಗೆ ಅವರು ಈ ಸಾಹಸಯಾತ್ರೆ ಕೈಗೊಂಡಿದ್ದರು.
ಸೋಮವಾರ ಬೆಳಿಗ್ಗೆ 7:30ಕ್ಕೆ ಕೊಪ್ಪಳದ(Koppala) ಐತಿಹಾಸಿಕ ಶ್ರೀ ಗವಿಸಿದ್ದೇಶ್ವರ ಮಠದಲ್ಲಿ ಪೂಜ್ಯ ಶ್ರೀಗಳ ಆಶೀರ್ವಾದ ಪಡೆದ ವೀರಣ್ಣ, ತಮ್ಮ ವಿಶಿಷ್ಟ ಬೈಕ್ ಸವಾರಿಯನ್ನು ಆರಂಭಿಸಿದರು. ಕೊಪ್ಪಳದಿಂದ ಹೊರಟು ಹೊಸಪೇಟೆ, ಚಿತ್ರದುರ್ಗ, ತುಮಕೂರು, ಶ್ರೀರಂಗಪಟ್ಟಣ ಹಾಗೂ ಮೈಸೂರು ಅರಮನೆ ಮಾರ್ಗವಾಗಿ ಸಾಗಿ, ಮಂಗಳವಾರ ಬೆಳಿಗ್ಗೆ ಸರಿಯಾಗಿ 7:30ಕ್ಕೆ ಸಾಂಸ್ಕೃತಿಕ ನಗರಿಯ ಶಕ್ತಿಪೀಠ ಚಾಮುಂಡಿ ಬೆಟ್ಟ ತಲುಪಿದರು. ಅಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯುವ ಮೂಲಕ 24 ಗಂಟೆಗಳಲ್ಲಿ 460 ಕಿಲೋಮೀಟರ್ ಹ್ಯಾಂಡಲ್ಲೆಸ್ ಸವಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಇದನ್ನೂ ಓದಿ: ಯಾಣಕ್ಕೆ ತೆರಳಲು ಪ್ರವಾಸಿಗರಿಗೆ ದರ ನಿಗದಿ – ನೀರು ಬಾಟಲ್ಗೆ 100 ರೂ.?
ಸವಾರಿಯುದ್ದಕ್ಕೂ ಒಂದು ಕೈಯಲ್ಲಿ ಕನ್ನಡ ಧ್ವಜವನ್ನು ಹೆಮ್ಮೆಯಿಂದ ಹಿಡಿದು ಸಾಗಿದ ವೀರಣ್ಣ, ಬೈಕ್ ಮೇಲೆ “ಮೈಸೂರು ದಸರಾ 2026” ಹಾಗೂ “ನಮ್ಮ ನಾಡಹಬ್ಬ ನಮ್ಮ ಸಂಸ್ಕೃತಿ” ಎಂಬ ಫಲಕಗಳನ್ನು ಅಳವಡಿಸಿದ್ದರು. ಈ ರೋಚಕ ಸಾಹಸದ ಜೊತೆಗೆ ಅವರು ಕನ್ನಡ ಭಾಷೆ ಮತ್ತು ನೆಲ-ಜಲದ ರಕ್ಷಣೆಯ ಜಾಗೃತಿ, ಯುವಜನತೆ ದುಶ್ಚಟಗಳಿಂದ ಮುಕ್ತರಾಗಲು ‘ವ್ಯಸನಮುಕ್ತ ಸಮಾಜ’ದ ಕರೆ, ಭವಿಷ್ಯದ ಬರಗಾಲ ತಡೆಗಟ್ಟಲು ಪರಿಸರ ಸಂರಕ್ಷಣೆ ಹಾಗೂ ಸಸಿ ನೆಡುವ ಅಭಿಯಾನದ ಮಹತ್ವವನ್ನು ಸಾರಿದರು.
ಚಾಮುಂಡಿ ಬೆಟ್ಟದಲ್ಲಿ ದೇವಿಯ ಆಶೀರ್ವಾದ ಪಡೆದ ಬಳಿಕ, ವೀರಣ್ಣ ಅವರು ಸುತ್ತೂರು ಮಠಕ್ಕೆ ಭೇಟಿ ನೀಡಿ ಪರಮಪೂಜ್ಯ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದರು. ಈಗಾಗಲೇ ಹ್ಯಾಂಡಲ್ ಇಲ್ಲದ ಬೈಕ್ ಚಲಾಯಿಸಿ ಹತ್ತು ಹಲವು ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಸಾಹಸ ದಾಖಲೆಗಳನ್ನು ತಮ್ಮದಾಗಿಸಿಕೊಂಡಿರುವ ವೀರಣ್ಣ ಕುಂದರಗಿಮಠ ಅವರ ಈ ನಿಸ್ವಾರ್ಥ ಸಾಮಾಜಿಕ ಕಳಕಳಿಯ ಸಾಹಸಕ್ಕೆ ದಾರಿಯುದ್ದಕ್ಕೂ ಮತ್ತು ಮೈಸೂರಿನಲ್ಲಿ ಸಾರ್ವಜನಿಕರು, ಕನ್ನಡಾಭಿಮಾನಿಗಳಿಂದ ಭಾರಿ ಮೆಚ್ಚುಗೆ ಹಾಗೂ ಪ್ರಶಂಸೆ ವ್ಯಕ್ತವಾಗಿದೆ.

