ಕಾರವಾರ: ದೇಶದ ಪ್ರಸಿದ್ಧ ಪ್ರಾಕೃತಿಕ ತಾಣವಾದ ಯಾಣ ಪ್ರದೇಶಕ್ಕೆ ತೆರಳಲು ಇದೀಗ ಪ್ರವಾಸಿಗರ ಪ್ರವೇಶಕ್ಕೆ ಶುಲ್ಕವನ್ನು ನಿಗದಿ ಮಾಡಲಾಗಿದೆ. ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ಬರುವ ಯಾಣ (Yana) ಪ್ರದೇಶವನ್ನು ಭಾರತೀಯ ಭೂವೈಜ್ಞಾನಿಕ ಸಂಸ್ಥೆ (GSI) ರಾಷ್ಟ್ರೀಯ ಭೂಪಾರಂಪರಿಕ ತಾಣ ಎಂದು ಘೋಷಣೆ ಮಾಡಿದೆ. ಹೀಗಾಗಿ, ಸಹ ಈ ಪ್ರದೇಶಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ.
ಯಾಣ ಪ್ರದೇಶವು ಕುಮಟಾ ತಾಲೂಕಿನ ಕತಗಾಲ್ ಅರಣ್ಯ ವಾಪ್ತಿಯಲ್ಲಿ ಬರುತ್ತದೆ. ಅಲಕೋಡು ಗ್ರಾಮಪಂಚಾಯ್ತಿ ವ್ಯಾಪ್ತಿಗೆ ಈ ಪ್ರದೇಶ ಸೇರುತ್ತದೆ. ಕತಗಾಲ್ ಅರಣ್ಯ ಇಲಾಖೆಯಿಂದ ಈ ಪ್ರದೇಶವನ್ನು ನೋಡಿಕೊಳ್ಳಲು ಅರಣ್ಯ ಸಮಿತಿ ರಚನೆ ಮಾಡಲಾಗಿದೆ. ಇದೀಗ, ಈ ಅರಣ್ಯ ಸಮಿತಿಯಿಂದ ಯಾಣಕ್ಕೆ ಭೇಟಿ ನೀಡುವ ಪ್ರತಿ ಪ್ರವಾಸಿಗರಿಗೆ 10 ರೂ. ಶುಲ್ಕ ಹಾಗೂ ನೀರಿನ ಬಾಟಲ್ಗೆ 100 ರೂ. ಠೇವಣಿ ಶುಲ್ಕ ವಿಧಿಸುತ್ತಿದೆ. ಯಾಣಕ್ಕೆ ತೆರಳುವ ವಿಭೂತಿ ಪಾಲ್ಸ್ನಿಂದ ತೆರಳುವ ಹಾದಿ ಹಾಗೂ ಕತಗಾಲ್ನಿಂದ ತೆರಳುವ ಹಾದಿಯಲ್ಲಿ ಈ ಶುಲ್ಕಗಳು ಅನ್ವಯವಾಗುತ್ತದೆ. ಅರಣ್ಯಾಧಿಕಾರಿಗಳು ಹೇಳುವ ಪ್ರಕಾರ, ಈ ಪ್ರದೇಶವು ರಿಸರ್ವ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಬರುವುದರಿಂದ ಮೇಲಾಧಿಕಾರಿಗಳ ಸೂಚನೆಯಂತೆ ಈ ಶುಲ್ಕ ವಿಧಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪೊಲೀಸರು ಅವ್ರ ಡ್ಯೂಟಿ ಮಾಡಿದ್ದಾರೆ, ಅದರಲ್ಲಿ ತಪ್ಪೇನಿದೆ: ಡಿಸಿಎಂ ರಿಯಾಕ್ಷನ್
ಶುಲ್ಕ ವಿಧಿಸಿದ್ದಕ್ಕೆ ಪ್ರವಾಸಿಗರು ಹಾಗೂ ಸ್ಥಳೀಯರಿಂದ ವಿರೋಧ
ಯಾಣಕ್ಕೆ ತೆರಳಲು ಶುಲ್ಕ ವಿಧಿಸಿದ್ದಕ್ಕೆ ಸ್ಥಳೀಯ ಗ್ರಾಮಸ್ಥರು, ಪ್ರವಾಸಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ರಿಸರ್ವ್ ಫಾರೆಸ್ಟ್ನಲ್ಲಿ ದಾಂಡೇಲಿ ಹಾಗೂ ಇತರೆ ಕೆಲವು ಪ್ರದೇಶಗಳು ಸಹ ಬರುತ್ತವೆ. ಆದರೆ, ಈ ಪ್ರದೇಶದಲ್ಲಿ ವಿಧಿಸದ ಶುಲ್ಕವನ್ನು ಇಲ್ಲಿ ಮಾತ್ರ ವಿಧಿಸುತ್ತಿರುವುದು ಏಕೆ ಎಂಬ ಪ್ರಶ್ನೆ ಕೇಳಿಬಂದಿದೆ.
ಈ ಸಮಿತಿ ಬರುವ ಪ್ರವಾಸಿಗರಿಗೆ ಒಂದು ಲೀಟರ್ ಬಾಟಲ್ ನೀರಿಗೆ 100 ರೂ. ಡೆಪಾಸಿಟ್ ಶುಲ್ಕ ವಿಧಿಸುತ್ತಿದೆ. ಇದಲ್ಲದೇ ಪ್ಲಾಸ್ಟಿಕ್ ಬಾಟಲ್ ನಿಷೇಧ ಮಾಡಲಾಗಿದ್ದು, ಗಾಜಿನ ಬಾಟಲ್ಗೆ 100 ರೂ. ಕೊಡಬೇಕು. ಪ್ಲಾಸ್ಟಿಕ್ ಬಾಟಲ್ ನಿಷೇಧವಿದ್ರೂ, ಪ್ರವಾಸಿಗರು ಪ್ಲಾಸ್ಟಿಕ್ ಬಾಟಲ್ ತಂದರೆ ಅದಕ್ಕೂ 100 ರೂ. ಕೊಡಬೇಕು. 20 ರೂ. ಬಾಟಲ್ಗೆ 100 ರೂ. ಕೊಟ್ಟು ಹೋಗುವ ಪರಿಸ್ಥಿತಿ ಇದ್ದು, ಇದನ್ನು ಜನ ಖಂಡಿಸಿದ್ದಾರೆ. ಇಲ್ಲಿ ತೆರಳಲು ಗ್ರಾಮಪಂಚಾಯ್ತಿ ಸಹ ಯಾವುದೇ ಶುಲ್ಕ ವಿಧಿಸುತ್ತಿಲ್ಲ. ಸಮರ್ಪಕ ವ್ಯವಸ್ಥೆ ಇಲ್ಲದಿದ್ದರೂ ದರ ಏಕೆ ಎಂಬ ಪ್ರಶ್ನೆ ಸ್ಥಳೀಯರದ್ದಾಗಿದ್ದು, ಇದೀಗ ದರ ವಿಧಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಖಾಸಗಿ ಆಸ್ಪತ್ರೆಗಳಿಗೆ ಮೂಗುದಾರ – ಚಿಕಿತ್ಸಾ ದರ ಪಟ್ಟಿ ಪ್ರದರ್ಶನ ಕಡ್ಡಾಯಕ್ಕೆ ಸರ್ಕಾರ ಕ್ರಮ
