ಶ್ರೀನಗರ: ಸಾರಿಗೆ ಬಸ್ವೊಂದು 100 ಅಡಿ ಆಳದ ಕಂದಕಕ್ಕೆ ಉರುಳಿಬಿದ್ದು (Bus Falls) ಇಬ್ಬರು ಮೃತಪಟ್ಟಿದ್ದಾರೆ. ಅಲ್ಲದೇ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಉಧಂಪುರ (Udhampur) ಜಿಲ್ಲೆಯಲ್ಲಿ ಇಂದು (ಬುಧವಾರ) ನಡೆದಿದೆ.
ಬಸ್ಸು ಪೆಚೌಂಡ್ನಿಂದ ರಾಮನಗರಕ್ಕೆ ತೆರಳುತ್ತಿದ್ದ ವೇಳೆ ಬೆಳಗ್ಗೆ 8 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಅಧಿಕಾರಿಗಳ ಪ್ರಕಾರ, ಬಸಂತ್ಗಢ ತಹಸಿಲ್ನ ಗುಲ್ಲಿ ಗಾಲಾ ಎಂಬಲ್ಲಿ ಬಸ್ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ.
ಬಸ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಘಟನೆಯ ನಂತರ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ತುರ್ತು ಪ್ರತಿಕ್ರಿಯೆ ತಂಡಗಳು ಮತ್ತು ಸಬ್-ಡಿವಿಷನಲ್ ಮ್ಯಾಜಿಸ್ಟ್ರೇಟ್ (SDM) ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಈ ಘಟನೆಯಲ್ಲಿ 15 ಮಂದಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಬಸಂತ್ಗಢದ ಸಾರ್ವಜನಿಕ ಆರೋಗ್ಯ ಕೇಂದ್ರ (PHC) ಮತ್ತು ರಾಮನಗರದ ಉಪ-ಜಿಲ್ಲಾ ಆಸ್ಪತ್ರೆಗೆ (SDH) ದಾಖಲಿಸಲಾಗಿದೆ.
ಒಂದು ವಾರದ ಅವಧಿಯಲ್ಲಿ ಉಧಂಪುರ ಜಿಲ್ಲೆಯಲ್ಲಿ ಸಂಭವಿಸಿದ 2ನೇ ಅಪಘಾತ ಇದಾಗಿದೆ. ಅಕ್ಟೋಬರ್ 15 ರಂದು ಉಧಂಪುರದ ಜಾನು ಬಳಿ ಮಿನಿ ಬಸ್ಸೊಂದು ರಸ್ತೆಯಿಂದ ಜಾರಿ ಕಂದಕಕ್ಕೆ ಬಿದ್ದಿದ್ದರಿಂದ 18 ಮಂದಿ ಗಾಯಗೊಂಡಿದ್ದರು. ಯಾವುದೇ ಸಾವು ಸಂಭವಿಸಿರಲಿಲ್ಲ.

