– ಡಿಕೆ ಜೊತೆ ಕೇರಳ, ತೆಲಂಗಾಣ ಸಿಎಂಗಳು ಪುಷ್ಪಾರ್ಚನೆ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವಪ್ರಸಿದ್ಧ ನಾಡಹಬ್ಬ ದಸರಾದ (Mysuru Dasra) ಪ್ರಮುಖ ಆಕರ್ಷಣೆಯಾದ ಐತಿಹಾಸಿಕ ಜಂಬೂ ಸವಾರಿ(Jamboo Savari) ಅತ್ಯಂತ ಯಶಸ್ವಿಯಾಗಿ ಹಾಗೂ ಸುಸೂತ್ರವಾಗಿ ಸಂಪನ್ನಗೊಂಡಿದೆ.
ಕಳೆದ 18 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದರೂ, ಇದೇ ಮೊದಲ ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ನಾಡದೇವತೆ ತಾಯಿ ಚಾಮುಂಡೇಶ್ವರಿಯನ್ನು ಹೊತ್ತ ಕ್ಯಾಪ್ಟನ್ ‘ಪ್ರಶಾಂತʼ ಗಾಂಭೀರ್ಯದ ನಡಿಗೆಯೊಂದಿಗೆ ಮೆರವಣಿಗೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾನೆ. ಈ ಮೂಲಕ ‘ಜಯಮಾರ್ತಾಂಡ’ ಆನೆಯ ಬಳಿಕ ಮೈಸೂರು ದಸರಾದಲ್ಲಿ ಚಿನ್ನದ ಅಂಬಾರಿ ಹೊತ್ತ 13ನೇ ಆನೆಯಾಗಿ ಪ್ರಶಾಂತ ಐತಿಹಾಸಿಕ ದಾಖಲೆ ಬರೆದಿದ್ದಾನೆ.
ನಂದಿಧ್ವಜ ಪೂಜೆಯ ನಂತರ ಅರಮನೆಯ ಆವರಣದಲ್ಲಿ ಶುಭ ಮೀನಾ ಲಗ್ನದಲ್ಲಿ ತಾಯಿ ಚಾಮುಂಡೇಶ್ವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivakumar) ಅವರು ಮುಖ್ಯಮಂತ್ರಿಯಾಗಿ ಇದೇ ಮೊದಲ ಬಾರಿಗೆ ಪುಷ್ಪಾರ್ಚನೆ ನೆರವೇರಿಸಿದರು. ಈ ಸಂಭ್ರಮದ ಕ್ಷಣಕ್ಕೆ ಸಿಎಂ ಪತ್ನಿ ಉಷಾ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸಾಕ್ಷಿಯಾದರು.
ಇದೇ ಮೊದಲ ಬಾರಿಗೆ ಹೊರರಾಜ್ಯದ ಗಣ್ಯರಾದ ಕೇರಳ ಮುಖ್ಯಮಂತ್ರಿ ಸತೀಶನ್ ಹಾಗೂ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗಿಯಾಗಿ ಕಣ್ತುಂಬಿಕೊಂಡಿದ್ದು ಈ ಬಾರಿಯ ದಸರಾದ ವಿಶೇಷವಾಗಿತ್ತು.
ಸಂಜೆ 4:30ಕ್ಕೆ ಅರಮನೆಯ ಬಲರಾಮ ದ್ವಾರದಿಂದ ಆರಂಭವಾದ ಜಂಬೂ ಸವಾರಿಯು ಸಂಜೆ 6:30ಕ್ಕೆ ಬನ್ನಿಮಂಟಪ ತಲುಪಿತು. ಅಂಬಾರಿ ಹೊತ್ತ ಕ್ಯಾಪ್ಟನ್ ಪ್ರಶಾಂತ, ಸುಮಾರು 5.5 ಕಿಲೋಮೀಟರ್ ದೂರವನ್ನು ಕೇವಲ ಎರಡು ಗಂಟೆಗಳಲ್ಲಿ ಗಂಭೀರ ನಡಿಗೆಯೊಂದಿಗೆ ಯಶಸ್ವಿಯಾಗಿ ಕ್ರಮಿಸಿದನು. ರಾಜಮಾರ್ಗದುದ್ದಕ್ಕೂ ನೆರೆದಿದ್ದ ಲಕ್ಷಾಂತರ ಜನಸ್ತೋಮ ಜೈಕಾರ ಹಾಕಿ ಸಂಭ್ರಮಿಸಿತು. ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರವೇ ಹರಿದುಬಂದಿದ್ದು, ಉತ್ಸವ ಕಣ್ತುಂಬಿಕೊಳ್ಳಲು ಜನ ಮರಗಳು ಹಾಗೂ ಕಟ್ಟಡಗಳ ಮೇಲೇರಿ ನಿಂತಿದ್ದ ದೃಶ್ಯ ಕಂಡುಬಂದಿತು.
ಜಂಬೂ ಸವಾರಿಯ ಮೆರವಣಿಗೆಯುದ್ದಕ್ಕೂ ನಾಡಿನ ಸಾಂಸ್ಕೃತಿಕ ವೈಭವ ಅನಾವರಣಗೊಂಡಿತು. 15 ಜಿಲ್ಲೆಗಳು, ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಮೊದಲ ಬಾರಿಗೆ ಭಾರತೀಯ ಸೇನೆ, ವಾಯುಪಡೆ, ನೌಕಾಪಡೆ ಮತ್ತು ನೆರೆ ರಾಜ್ಯಗಳೂ ಸೇರಿದಂತೆ ಒಟ್ಟು 53 ಆಕರ್ಷಕ ಸ್ತಬ್ಧಚಿತ್ರಗಳು (ಟ್ಯಾಬ್ಲೋ) ಮೆರವಣಿಗೆಗೆ ವಿಶೇಷ ಕಳೆ ತಂದವು.
ಕೆಎಸ್ಆರ್ಟಿಸಿ, ಹೆಚ್ಎಎಲ್, ಕೆಐಎಡಿಬಿ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಟ್ಯಾಬ್ಲೋಗಳು ಗಮನಸೆಳೆದವು. ಸ್ತಬ್ಧಚಿತ್ರಗಳ ಜೊತೆಗೆ ಹಗಲುವೇಷ, ಭಾರತ್ ಜೋಡೋ, ಹಾಲಕ್ಕಿ ಸುಗ್ಗಿ ಕುಣಿತ, ಅರೆವಾದ್ಯ, ಕೊಂಬು-ಕಹಳೆ, ವೀರಭದ್ರ ಕುಣಿತ, ಮಣಿಪುರಿ ಜನಪದ, ಕೀಲು ಕುದುರೆ, ಚಿಟ್ಟಿಮೇಳ, ಮಹಿಳಾ ಕೋಲಾಟ, ಶಹನಾಯಿ, ಪೂಜಾ ಕುಣಿತ, ಹುಲಿವೇಷ ಸೇರಿದಂತೆ ನೂರಾರು ಜನಪದ ಕಲಾತಂಡಗಳ ರೋಮಾಂಚಕ ಹೆಜ್ಜೆಗಳು ನೆರೆದಿದ್ದವರನ್ನು ಮಂತ್ರಮುಗ್ಧರನ್ನಾಗಿಸಿದವು.
ಬನ್ನಿಮಂಟಪದಲ್ಲಿ ಪಂಜಿನ ಕವಾಯತು
ಜಂಬೂ ಸವಾರಿ ಮುಕ್ತಾಯಗೊಂಡ ಬೆನ್ನಲ್ಲೇ ಬನ್ನಿಮಂಟಪದ ಮೈದಾನದಲ್ಲಿ ಸಾಂಪ್ರದಾಯಿಕ ಹಾಗೂ ರೋಮಾಂಚಕ ಪಂಜಿನ ಕವಾಯತು ನಡೆಯುತ್ತಿದೆ. ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರು ಗೌರವ ವಂದನೆ ಸ್ವೀಕರಿಸಿದರು. ಪಂಜಿನ ಕವಾಯತಿನ ಜೊತೆಗೆ ಕಣ್ಮನ ಸೆಳೆಯುವ ಅತ್ಯಾಧುನಿಕ ಡ್ರೋನ್ ಶೋ, ಅಶ್ವದಳದ ಸಾಹಸ ಹಾಗೂ ಪೊಲೀಸ್ ಸಿಬ್ಬಂದಿಯ ರೋಚಕ ಬೈಕ್ ಸ್ಟಂಟ್ಗಳು ಈ ಬಾರಿಯ ದಸರಾ ಸಂಭ್ರಮಾಚರಣೆಗೆ ಅಂತಿಮ ಮುಕ್ತಾಯ ಹಾಡಲಿವೆ.
