ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ರಾಜೌರಿ ಜಿಲ್ಲೆಯ ಅರಣ್ಯ ಪ್ರದೇಶದ ಗುಹೆಯಲ್ಲಿದ್ದ ಉಗ್ರರ ಅಡಗುತಾಣವನ್ನು ಭದ್ರತಾ ಪಡೆಗಳು (Indian Army) ಪತ್ತೆಹಚ್ಚಿವೆ. ಅಲ್ಲಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಅಡಗುತಾಣದ ಬಗ್ಗೆ ಖಚಿತ ಮಾಹಿತಿ ಪಡೆದ ಭಾರತೀಯ ಸೇನೆಯ 60ನೇ ರಾಷ್ಟ್ರೀಯ ರೈಫಲ್ಸ್ (Rashtriya Rifles) ತುಕಡಿಯು, ಅರಣ್ಯ ಪ್ರದೇಶವನ್ನು ಸುತ್ತುವರಿದು ಕೂಲಂಕಷವಾಗಿ ಶೋಧ ನಡೆಸಿದೆ. ಈ ವೇಳೆ ಕೋತ್ರಾಂಕಾ ತಹಸಿಲ್ನ ಪಂಚ್ ಗಬ್ಬಾರ್ ಪ್ರದೇಶದ ‘ಚೋರ್ ಹಿಲ್’ (Chor Hill) ಬಳಿ ಅಡಗುತಾಣ ಪತ್ತೆಯಾಗಿದೆ. ಗುಹೆಯಲ್ಲಿ ಅಂಡರ್-ಬ್ಯಾರೆಲ್ ಗ್ರೆನೇಡ್ ಲಾಂಚರ್ (UBGL) ಗ್ರೆನೇಡ್ಗಳು, ಒಂದು ಎಕೆ-47 ಮ್ಯಾಗಜೀನ್ ಮತ್ತು ಎಕೆ-47 ರೈಫಲ್ಗೆ ಬಳಸುವ 18 ಸುತ್ತು ಗುಂಡುಗಳು ಪತ್ತೆಯಾಗಿವೆ. ಇದನ್ನೂ ಓದಿ: ಟೈಗರ್ ಶ್ರಾಫ್ ಕಾರಿನ ಮೇಲೆ ಶೂಟೌಟ್ – ಬಂಧಿತ ಮೂವರ ಹಿಸ್ಟರಿ ಏನು..?
ಈ ಶಸ್ತ್ರಾಸ್ತ್ರಗಳನ್ನು ಸಮಯೋಚಿತವಾಗಿ ವಶಪಡಿಸಿಕೊಂಡಿರುವುದರಿಂದ, ಈ ಪ್ರದೇಶದಲ್ಲಿ ಉಗ್ರರು ನಡೆಸಲು ಉದ್ದೇಶಿಸಿದ್ದ ವಿಧ್ವಂಸಕ ಕೃತ್ಯಗಳನ್ನು ತಡೆದಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ಪ್ರದೇಶದಲ್ಲಿ ಉಗ್ರರು ಆಗಾಗ ನೈಸರ್ಗಿಕ ಗುಹೆಗಳನ್ನು ಅಡಗುತಾಣಗಳಾಗಿ ಬಳಸಿಕೊಳ್ಳುತ್ತಾರೆ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆ ಪ್ರದೇಶದಲ್ಲಿ ಹೆಚ್ಚಿನ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಇದನ್ನೂ ಓದಿ: ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ – ಓರ್ವ ಅಪ್ರಾಪ್ತ ಸೇರಿ ಮೂವರು ಅರೆಸ್ಟ್
