ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಕಾರಿನ ಮೇಲೆ ನಡೆದ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಅಪ್ರಾಪ್ತ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದು, ಕೋಟಾ ಪೊಲೀಸರು ಇದೀಗ ಆರೋಪಿಗಳ ಮಾಹಿತಿ ಬಹಿರಂಗಪಡಿಸಿದ್ದಾರೆ.
ಬಂಧಿತರನ್ನು ಬಿಹಾರದ ಬೇಗುಸರಾಯ್ ನಿವಾಸಿ ಹೃತಿಕ್ (22), ಹರ್ಯಾಣದ ಸೋನಿಪತ್ನ ಈದ್ಗಾ ಕಾಲೊನಿ ನಿವಾಸಿ ರೆಹಾನ್ (18) ಹಾಗೂ ಹರ್ಯಾಣದ ಸೋನಿಪತ್ ಜಿಲ್ಲೆಯ ನಿವಾಸಿ ಅಪ್ರಾಪ್ತ (17) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಟೈಗರ್ ಶ್ರಾಫ್ ಕಾರಿನ ಮೇಲೆ ಶೂಟೌಟ್ – ಆರೋಪಿಗಳು ದಾಳಿ ಬಳಿಕ ಪರಾರಿಯಾಗಲು ಬಳಸಿದ್ದ ಬೈಕ್ ಸೀಜ್
ಆರೋಪಿ ಹೃತಿಕ್ ಮುಂಬೈನಲ್ಲಿ ಅಂಧೇರಿ ವೆಸ್ಟ್ ಉರ್ದು ಶಾಲೆ ಬಳಿ ವಾಸವಾಗಿದ್ದು, ಬೈಕ್ ಟ್ಯಾಕ್ಸಿ ಓಡಿಸುತ್ತಿದ್ದ ಹಾಗೂ ಅಪ್ರಾಪ್ತ ಮಣ್ಣಿನ ಪಾತ್ರೆ ಮಾಡುವ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಆಗಿದ್ದೇನು?
ಅ.18ರಂದು ಮುಂಬೈನ ಜುಹು ಪ್ರದೇಶದಲ್ಲಿ ಬಾಲಿವುಡ್ ನಟ ಟೈಗರ್ ಶ್ರಾಫ್ ಅವರು ತಮ್ಮ ಕಾರಿನಲ್ಲಿ ಹೊರಟಿದ್ದರು. ಅವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಈ ವೇಳೆ ಅವರ ಕಾರನ್ನು ಗುರಿಯಾಗಿಸಿ ಮೂವರು ದುಷ್ಕರ್ಮಿಗಳು ಏಳು ಸುತ್ತು ಗುಂಡುಗಳನ್ನು ಹಾರಿಸಲಾಗಿದೆ. ಅದೃಷ್ಟವಶಾತ್ ಟೈಗರ್ ಶ್ರಾಫ್ ಸುರಕ್ಷಿತವಾಗಿದ್ದು, ಯಾವುದೇ ಗಾಯಗಳಾಗಿಲ್ಲ. ಆದರೆ ಅವರ ಚಾಲಕ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ.
ವೈರಲ್ ಆಗಿರುವ ಪೋಸ್ಟ್ ಒಂದರ ಪ್ರಕಾರ, ಈ ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ ಎಂದು ಹೇಳಲಾಗುತ್ತಿದೆಯಾದರೂ, ಪೊಲೀಸರು ಇನ್ನೂ ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಿದೆ. ಇದನ್ನೂ ಓದಿ:45 ನಿಮಿಷ ಕಾದು ಕುಳಿತಿದ್ದ ಶೂಟರ್ಸ್ – ಪಿಸ್ತೂಲ್ ಜಾಮ್ ಆಗಿದ್ದರಿಂದ ಬದುಕುಳಿದ್ರಾ ನಟ ಟೈಗರ್ ಶ್ರಾಫ್?
