ಮೈಸೂರು: ದಸರಾ ಕಂಬಳ (Dasara Kambala) ಓಟಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K.Shivakumar) ಇಂದು ವಿದ್ಯುಕ್ತ ಚಾಲನೆ ನೀಡಿದರು.
ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಸಿಎಂ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಚಿವರಾದ ಪುಟ್ಟರಂಗಶೆಟ್ಟಿ, ಚಲುವರಾಯಸ್ವಾಮಿ, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಹರೀಶ್ ಗೌಡ, ಅಶೋಕ್ ರೈ, ಐಜಿ ಬೋರಲಿಂಗಯ್ಯ, ನಗರ ಪೊಲೀಸ್ ಆಯುಕ್ತೆ ಸೀಮಾಲಾಟ್ಕರ್, ಡಿಸಿ ಲಕ್ಷ್ಮೀಕಾಂತರೆಡ್ಡಿ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಕಂಬಳ ಸಮಿತಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು. ಇದನ್ನೂ ಓದಿ: ಕಂಬಳಕ್ಕೆ ವಿದ್ಯುಕ್ತ ಚಾಲನೆ – ಇಂದಿನಿಂದ 2 ದಿನ ದಸರೆಯಲ್ಲಿ ಕರಾವಳಿ ಸಂಸ್ಕೃತಿಯ ಸಂಭ್ರಮ
ಶಾಸಕ ಅಶೋಕ್ ರೈ ಮಾತನಾಡಿ, ಮೈಸೂರು ದಸರಾದಲ್ಲಿ ಕಂಬಳ ನಡೆಯಲು ಸಿಎಂ ಡಿಕೆಶಿ ಕಾರಣ. ದಸರಾದಲ್ಲೂ ಕಂಬಳ ಆಗಬೇಕು ಅಂತ ಅವರ ಬಯಕೆ. ಕಂಬಳ ಇಲ್ಲಿ ಮಾಡ್ತಿರೋದಕ್ಕೆ ಸಾಕಷ್ಟು ಗೊಂದಲ ಇತ್ತು. ಎಲ್ಲಾ ಗೊಂದಲ ನಿವಾರಣೆ ಮಾಡಿ ಕಂಬಳ ಮಾಡ್ತಿದ್ದೇವೆ. ಕಂಬಳದ ಕೋಣಗಳನ್ನ ಸಾಕುವುದು ಸವಾಲಿನ ಕೆಲಸ. ಕೋಣಗಳನ್ನ ಇಲ್ಲಿ ಕರೆತರಲು ಲಕ್ಷಾಂತರ ರೂ. ಹಣ ಖರ್ಚಾಗುತ್ತೆ. ಕಂಬಳ ಬಹುಮಾನ ಅಥವ ಹಣಕ್ಕೆ ಮಾಡುವ ಕ್ರೀಡೆ ಅಲ್ಲ. ಇದು ನಮ್ಮ ರೈತರ ಪ್ರತಿಷ್ಠೆ, ಕೋಣಗಳನ್ನ ಮನೆಮಗನಂತೆ ಕಾಣುವ ಸಂಸ್ಕೃತಿ ನಮ್ಮದು. ಕೋಣಗಳು ಮೇವು, ನೀರು ಎಲ್ಲವನ್ನೂ ಮನೆಯಿಂದಲೇ ತರಲಾಗುತ್ತೆ. ಸದ್ಯ ಅತ್ಯುತ್ತಮವಾಗಿ ಕಂಬಳ ಆಯೋಜನೆ ಆಗಿದೆ. ಯಾವುದೇ ಪಾಸ್ ಇಲ್ಲದೇ ಎಲ್ಲರಿಗೂ ಉಚಿತ ಎಂಟ್ರಿ ಇರುತ್ತೆ. ಮೈಸೂರಿನ ಜನತೆ ಕುಟುಂಬ ಸಮೇತ ಬಂದು ಕಂಬಳ ನೋಡಿ. ಸಿಎಂ ಬಳಿ ಮನವಿ ಮಾಡ್ತೇನೆ ರಾಜ್ಯದಲ್ಲಿ ಎಲ್ಲಾ ಕಡೆಯೂ ಕಂಬಳಕ್ಕೆ ಅವಕಾಶ ನೀಡಿ ಎಂದು ತಿಳಿಸಿದರು.
ಬಳಿಕ ಕಂಬಳದ ಸ್ಪರ್ಧೆ ನಡೆಯಿತು. ಮೊದಲಿಗೆ ಅಡ್ಡಲಗೆ ವಿಭಾಗದಲ್ಲಿ ಸ್ಪರ್ಧೆ ಮಾಡಲಾಯಿತು. ಅತಿ ಎತ್ತರಕ್ಕೆ ನೀರು ಚಿಮ್ಮಿಸುವ ಅಡ್ಡಲಗೆ ವಿಭಾಗ ಇದಾಗಿದೆ. ವೇದಿಕೆ ಮೇಲೆ ಕೂತು ಸಿಎಂ ಡಿಕೆಶಿ ಕಂಬಳ ವೀಕ್ಷಣೆ ಮಾಡಿದರು. ಬಳಿಕ ಕಂಬಳ ಕೋಣಗಳ ಮಾಲೀಕರನ್ನ ಭೇಟಿ ಮಾಡಿದರು. ಕಂಬಳ ಕೋಣಗಳ ಜೊತೆ ನಿಂತು ಪೋಟೋ ಕ್ಲಿಕ್ಕಿಸಿಕೊಂಡರು. ಮನೆಯವರಿಗೆ ವೀಡಿಯೋ ಕಾಲ್ ಮಾಡಿ ಕಂಬಳ ತೋರಿಸಿದರು.
ಕಾರ್ಯಕ್ರಮದಲ್ಲಿ ಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ನಮ್ಮ ನಾಡ ದೇವತೆ ತಾಯಿ ಚಾಮುಂಡೇಶ್ವರಿಗೆ ನನ್ನ ಪ್ರಣಾಮ. ಕರ್ನಾಟಕದ ನಾಡಿನ ಹಬ್ಬ ದಸರಾ, ಈ ಹಬ್ಬಕ್ಕೆ ಕಂಬಳ ತಂದಿದ್ದೇನೆ. 800 ವರ್ಷಗಳ ಹಿಂದೆ ಕದಿರಿ ಮಂಜುನಾಥನಿಗೆ ಸೇವೆ ಮಾಡೋದಕ್ಕೆ ರೈತರ ಬದುಕನ್ನ ಹೆಚ್ಚಿಸೋಕೆ ಶಿವನ ಪ್ರಾರ್ಥನೆ ಮಾಡೋದಕ್ಕೆ ಈ ಕಂಬಳ ಆಗಿದೆ. ತಮಿಳುನಾಡಿನಲ್ಲಿ ಜಲ್ಲಿ ಕಟ್ಟು ಅಂತ ನಡೆಯುತ್ತೆ. ಕೇರಳದಲ್ಲಿ ಕಾಸರಗೋಡಿನಲ್ಲೂ ಕಂಬಳ ನಡೆಯುತ್ತೆ. ಕಾನೂನಿನಲ್ಲಿ ಕಂಬಳ ನಡೆಸೋದಕ್ಕೆ ಅವಕಾಶ ಸಿಕ್ಕಿದೆ. 3 ಸಾವಿರಕ್ಕೂ ಹೆಚ್ಚು ಜನ ಕರಾವಳಿಯಿಂದ ಕಂಬಳಕ್ಕಾಗಿ ಬಂದಿದ್ದೀರಿ. ನಾವು ಕೇವಲ ಕಂಬಳ ತಂದಿಲ್ಲ, ಕರಾವಳಿ ಸಂಸ್ಕೃತಿಯನ್ನ ಮೈಸೂರಿಗೆ ಪರಿಚಯ ಮಾಡೋಕೆ ಇಲ್ಲಿಗೆ ತಂದಿದ್ದೀವಿ. ನಮ್ಮ ಪರಂಪರೆ ನಮ್ಮ ಹೆಮ್ಮೆ. ರೈತರ ಬೆಳೆ ಉತ್ತಮವಾಗಿ ಆಗ್ಬೇಕು ಅನ್ನೋದು ರಾಜರ ಕಾಲದಿಂದ ಅರಸರು ಇದನ್ನೆಲ್ಲಾ ನಡೆಸಿಕೊಂಡು ಬಂದಿದ್ದಾರೆ. ಇದಕ್ಕೆ ಸಾಕಷ್ಟು ಜನ ಟೀಕೆ ಮಾಡಿದ್ರು. ಆದರೆ, ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ನಾಡಿನ ಸಂಸ್ಕೃತಿಯನ್ನ ಜನ ನೋಡಿ ಆನಂದಿಸಬೇಕು. ತುಳು ನಾಡಿನ ಸಾಂಪ್ರದಾಯಿಕ ಕ್ರೀಡೆ ಕಂಬಳ ಎಂದು ಬಣ್ಣಿಸಿದರು. ಇದನ್ನೂ ಓದಿ: ಮೈಸೂರು ದಸರಾ | ಬಾನಂಗಳದಲ್ಲಿ 3,500 ಡ್ರೋನ್ಗಳ ಆಕರ್ಷಕ ಪ್ರದರ್ಶನ
ಕೃಷಿಯ ಹೆಮ್ಮೆ ಕಂಬಳ. 23 ಕಂಬಳ ಕೂಟಕ್ಕೆ ತಲಾ 5 ಲಕ್ಷ ಹಣವನ್ನು ಸರ್ಕಾರ ನೀಡ್ತಿದೆ. ಒಂದು ನಾಡು ಹಲವು ಸಂಸ್ಕೃತಿ. ಒಂದೇ ಕನ್ನಡ ಜನ, ಅಖಂಡ ಕರ್ನಾಟಕ. ಯುವಕರು-ಯುವತಿಯರು ರೀಲ್ ಮಾಡಿ ದಸರಾ ಸಂಭ್ರಮವನ್ನು ಹಂಚಿಕೊಳ್ಳಿ. ಉತ್ತಮವಾದ ನೂರು ರೀಲ್ಸ್ ಆಯ್ಕೆ ಮಾಡಿ ಪ್ರಶಸ್ತಿ ನೀಡುತ್ತೇವೆ. ಮೈಸೂರು ದಸರಾದ ದೀಪಾಲಂಕಾರ, ಜಂಬೂಸವಾರಿ, ಆಹಾರ ಮೇಳ ಯಾವುದೇ ಇರಲಿ. ಯಾವುದೇ ರೀಲ್ ಕಳುಹಿಸಿದ್ರು, ಆಯ್ಕೆ ಮಾಡಿ ಬೆಸ್ಟ್ 100 ರೀಲ್ಸ್ಗೆ ಬಹುಮಾನ. ಕಾನೂನು ಮತ್ತು ಸಂಪ್ರದಾಯ ಕಂಬಳದಲ್ಲಿದೆ. ಸಂಸ್ಕೃತಿ ಪಾಲಿಸಿ ಕಲೆ ಪ್ರೋತ್ಸಾಹಿಸಿ ಪರಂಪರೆ ಮುಂದುವರೆಸಬೇಕು. ಕಂಬಳ ಗೆದ್ದವರಿಗೆ ಮೊದಲು ತೆಂಗಿನಕಾಯಿ ಕೊಡ್ತಿದ್ರು, ಈಗ ಚಿನ್ನ ಕೊಡ್ತಾರೆ. 9 ಸೆಕೆಂಡ್ನಲ್ಲಿ ಓಡಿ ಒಲಿಂಪಿಕ್ಸ್ನಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ. ಆದರೆ ಕಂಬಳದಲ್ಲಿ ಓಡುವ ಹುಡುಗರಿಗೆ ಸರಿಯಾದ ತರಬೇತಿ ನೀಡಿದ್ರೆ, ಅವರೂ ದಾಖಲೆ ಬರೆಯುತ್ತಾರೆ. ವಿಜಯನಗರ ಅರಸರು ದಸರಾ ವೇಳೆ ಕೋಣಗಳಿಗೆ ಗೌರವ ನೀಡುತ್ತಿದ್ದರು. ಲಕ್ಷಾಂತರ ಜನರ ಆಗಮಿಸಿ ಕಂಬಳ ವೀಕ್ಷಿಸುತ್ತಿದ್ದಾರೆ. ಎಲ್ಲರೂ ಕಂಬಳ ನೋಡಿ ಎಂದು ತಿಳಿಸಿದರು.
