ಇಂಫಾಲ್: ಮಣಿಪುರದ (Manipur) ಕಾಮ್ಜಾಂಗ್ ಜಿಲ್ಲೆಯ ಗುಡ್ಡಗಾಡು ಗ್ರಾಮವೊಂದರಲ್ಲಿ ಕುಕಿ ಸಮುದಾಯಕ್ಕೆ ಸೇರಿದ 15 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಇದರಿಂದಾಗಿ ಅನೇಕ ನಾಗರಿಕರು ಅರಣ್ಯ ಪ್ರದೇಶಗಳಿಗೆ ಹಾಗೂ ಸಮೀಪದ ಸೇನಾ ಶಿಬಿರಕ್ಕೆ ಪಲಾಯನ ಮಾಡುವಂತಾಗಿದೆ.
ಶನಿವಾರ ತಡರಾತ್ರಿ ಶಂಕಿತ ಉಗ್ರರು ಚಸ್ಸಾದ್ ಗ್ರಾಮದ ಮೇಲೆ ದಾಳಿ ನಡೆಸಿ, ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಗ್ರಾಮವೊಂದರ ಮೇಲೆ ಶಂಕಿತ ಉಗ್ರರು ದಾಳಿ ನಡೆಸಿದಾಗ, ಕುಕಿ ಸಮುದಾಯದ ನಾಗರಿಕರೊಬ್ಬರು ಮೃತಪಟ್ಟಿದ್ದಾರೆ. ಇತರ ನಾಲ್ವರು ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಇದನ್ನೂ ಓದಿ: ದುರ್ಗಾ ಪೂಜೆ ಪೆಂಡಾಲ್ ದುರಂತ – 7 ಆರೋಪಿಗಳು 10 ದಿನ ಪೊಲೀಸ್ ಕಸ್ಟಡಿಗೆ
ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಅಸ್ಸಾಂ ರೈಫಲ್ಸ್, ಗಡಿ ಭದ್ರತಾ ಪಡೆ (ಬಿಎಸ್ಎಫ್) ಮತ್ತು ಕಾಮ್ಜಾಂಗ್ ಪೊಲೀಸರನ್ನೊಳಗೊಂಡ ಜಂಟಿ ತಂಡವೊಂದನ್ನು ಪ್ರದೇಶದಲ್ಲಿ ನಿಯೋಜಿಸಲಾಗಿದೆ.
ಉಪಮುಖ್ಯಮಂತ್ರಿ ನೆಮ್ಚಾ ಕಿಪ್ಗೆನ್ ಅವರು ಚಸ್ಸಾದ್ನಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿದ್ದಾರೆ. ಕುಕಿ ಸಮುದಾಯದ ನಾಗರಿಕರೊಬ್ಬರ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತ, ರಾಜ್ಯ ಪೊಲೀಸ್ ಮತ್ತು ಭದ್ರತಾ ಪಡೆಗಳು ದಿನದ ಇಪ್ಪತ್ತನಾಲ್ಕು ಗಂಟೆಯೂ ಅಲರ್ಟ್ ಆಗಿರಿ, ನಾಗರಿಕರ ಜೀವ ಹಾಗೂ ಆಸ್ತಿಪಾಸ್ತಿಗಳನ್ನು ರಕ್ಷಿಸಿ, ದಾಳಿಗೆ ಕಾರಣರಾದವರನ್ನು ಕಾನೂನಿನ ಮುಂದೆ ತರುವಂತೆ ಕಿಪ್ಜೆನ್ ನಿರ್ದೇಶನ ನೀಡಿದ್ದಾರೆ. ಇದನ್ನೂ ಓದಿ: ಯೆಮನ್ ಗಡಿಯ ಬಳಿ ಹೆಲಿಕಾಪ್ಟರ್ ಪತನ; ಇಬ್ಬರು ಪೈಲಟ್ಗಳು ದುರ್ಮರಣ
