ರಿಯಾದ್: ಯೆಮನ್ (Yemen) ಗಡಿಯ ಸಮೀಪ ಹೆಲಿಕಾಪ್ಟರ್ ಪತನಗೊಂಡ ಪರಿಣಾಮ ಇಬ್ಬರು ಪೈಲಟ್ಗಳು ಮೃತಪಟ್ಟಿದ್ದಾರೆ ಎಂದು ಸೌದಿ ನೇತೃತ್ವದ ಮೈತ್ರಿಕೂಟ ತಿಳಿಸಿದೆ. ಇರಾನ್ ಬೆಂಬಲಿತ ಹೌತಿ ಗುಂಪು, ತಾನೇ ಆ ವಿಮಾನವನ್ನು ಹೊಡೆದು ಉರುಳಿಸಿದ್ದಾಗಿ ಹೇಳಿಕೊಂಡ ಬೆನ್ನಲ್ಲೇ ಈ ಮಾಹಿತಿ ಹೊರಬಿದ್ದಿದೆ.
ಜುಲೈ ತಿಂಗಳಲ್ಲಿ ಹೌತಿಗಳೊಂದಿಗಿನ ದೀರ್ಘಕಾಲದ ಯುದ್ಧವು ಮತ್ತೆ ಭುಗಿಲೆದ್ದ ನಂತರ, ಈ ಘಟನೆಯಲ್ಲಿ ಮೈತ್ರಿಕೂಟವು ತನ್ನ ಮೊದಲ ಮಿಲಿಟರಿ ಸಾವುನೋವುಗಳನ್ನು ಕಂಡಿದೆ. ಇದಕ್ಕೆ ತಾಂತ್ರಿಕ ದೋಷವೇ ಕಾರಣ ಎಂದು ಮೈತ್ರಿಕೂಟವು ತಿಳಿಸಿದೆ. ಇದನ್ನೂ ಓದಿ: ತನ್ನ ವಾಯುಪ್ರದೇಶಕ್ಕೆ ಭಾರತದ ವಿಮಾನಗಳ ನಿಷೇಧ ಅವಧಿ ವಿಸ್ತರಿಸಿದ ಪಾಕಿಸ್ತಾನ
ಇರಾನ್ ಬೆಂಬಲಿತ ಗುಂಪೊಂದು ರಿಯಾದ್ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆಸಿದ ದಾಳಿಯಲ್ಲಿ 13 ಮಂದಿ ಸಾವನ್ನಪ್ಪಿದ ಒಂದು ವಾರದ ನಂತರ ಈ ಘಟನೆ ನಡೆದಿದೆ. ಕಳೆದ ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ಸೌದಿ ಅರೇಬಿಯಾದಲ್ಲಿ ನಡೆದ ಅತ್ಯಂತ ಮಾರಣಾಂತಿಕ ದಾಳಿ ಇದಾಗಿದೆ.
ರಾಷ್ಟ್ರೀಯ ಗಾರ್ಡ್ ಸಚಿವಾಲಯಕ್ಕೆ ಸೇರಿದ ‘ಎಹೆಚ್-6ಐ’ (AH-6i) ಕಣ್ಗಾವಲು ಹೆಲಿಕಾಪ್ಟರ್, ತಾಂತ್ರಿಕ ದೋಷದಿಂದ ಸೌದಿ ಅರೇಬಿಯಾದ ನಜ್ರಾನ್ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿದೆ. ಈ ವಿಷಯವನ್ನು ಮೈತ್ರಿಕೂಟದ ವಕ್ತಾರ ತುರ್ಕಿ ಅಲ್-ಮಲ್ಕಿ ತಿಳಿಸಿದ್ದಾರೆ. ಇದನ್ನೂ ಓದಿ: ಫ್ರಾನ್ಸ್ ಆಯ್ತು ಈಗ ಪೋರ್ಚುಗಲ್ನಲ್ಲಿ ಭುಗಿಲೆದ್ದ ಬೃಹತ್ ಜನಾಕ್ರೋಶ
ಶನಿವಾರ ತಡರಾತ್ರಿ, ಹೌತಿ ವಕ್ತಾರ ಯಾಹ್ಯಾ ಸರೀ, ಅದೇ ಪ್ರದೇಶದಲ್ಲಿ ತಮ್ಮ ಗುಂಪು ಸೌದಿ ಶತ್ರುಗಳಿಗೆ ಸೇರಿದ ಅಪಾಚೆ ಹೆಲಿಕಾಪ್ಟರ್ ಒಂದನ್ನು ಹೊಡೆದುರುಳಿಸಿದೆ ಎಂದು ಹೇಳಿದ್ದಾರೆ.
