ಲಿಸ್ಬನ್: ವಿಪರೀತವಾಗಿ ಏರುತ್ತಿರುವ ಜೀವನ ವೆಚ್ಚ ಹಾಗೂ ದಿನೇದಿನೆ ಉಲ್ಬಣಿಸುತ್ತಿರುವ ವಸತಿ ಬಿಕ್ಕಟ್ಟನ್ನು ವಿರೋಧಿಸಿ, ಶನಿವಾರ ಪೋರ್ಚುಗಲ್ನ(Portugal) ರಾಜಧಾನಿ ಲಿಸ್ಬನ್ನಲ್ಲಿ(Lisbon) ಹತ್ತಾರು ಸಾವಿರ ಜನರು ಬೀದಿಗಿಳಿದು ಬೃಹತ್ ಪ್ರತಿಭಟನೆ(Protest) ನಡೆಸಿದ್ದಾರೆ.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪೋರ್ಚುಗಲ್ನ ಪ್ರಮುಖ ಕಾರ್ಮಿಕ ಸಂಘಟನೆ ಸಿಜಿಟಿಪಿ (CGTP), ರಾಜಧಾನಿಯ ಪ್ರಮುಖ ರಸ್ತೆಯುದ್ದಕ್ಕೂ ಸಾವಿರಾರು ಜನರು ಕಿಕ್ಕಿರಿದು ಸೇರಿದ್ದರು ಎಂದು ತಿಳಿಸಿದೆ.
ಕೈಗೆಟುಕದ ಮನೆಗಳ ಬೆಲೆ ಮತ್ತು ಜೀವನ ವೆಚ್ಚದ ಏರಿಕೆಯು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಪ್ರತಿಭಟನೆಗೂ ಮುನ್ನ, ಉತ್ತರದ ನಗರವಾದ ಪೋರ್ಟೊದಲ್ಲಿ ವಸತಿ ಹಕ್ಕು ಹೋರಾಟಗಾರರು ನಿರ್ಮಿಸಿದ್ದ ತಾತ್ಕಾಲಿಕ ಡೇರೆಗಳನ್ನು ಪೊಲೀಸರು ನಸುಕಿನ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದರು. ಇದನ್ನೂ ಓದಿ: ಫ್ರಾನ್ಸ್ನಲ್ಲಿ ಧಗಧಗ; ಭುಗಿಲೆದ್ದ ಹಿಂಸಾಚಾರ – 5 ಲಕ್ಷಕ್ಕೂ ಹೆಚ್ಚು ಜನ ಬೀದಿಗಿಳಿದು ಪ್ರತಿಭಟನೆ
A Europa está em chamas: protestos contra a crise salarial e habitacional chegam a Portugal.
Milhares de manifestantes reuniram-se nas ruas de Lisboa, convocados pela Confederação dos Trabalhadores Portugueses (CGTP); também houve protestos em Coimbra e Porto.
#Portugual https://t.co/sIcQrELijo— Hugo Borges (@hbj_r77032) October 17, 2026
ಪೋರ್ಚುಗಲ್ನಲ್ಲಿ ಮಾತ್ರವಲ್ಲದೆ, ಇಡೀ ಯುರೋಪಿನಾದ್ಯಂತ(Europe) ಸಾರ್ವಜನಿಕ ಅಸಮಾಧಾನ ತೀವ್ರಗೊಳ್ಳುತ್ತಿದೆ. ಬೆಲೆ ಏರಿಕೆ ಹಾಗೂ ಕುಸಿಯುತ್ತಿರುವ ಸಾರ್ವಜನಿಕ ಸೇವೆಗಳ ವಿರುದ್ಧ ಫ್ರಾನ್ಸ್ನಲ್ಲಿ(France) ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಬೆಲ್ಜಿಯಂನಲ್ಲೂ ಜನರು ಬೀದಿಗಿಳಿದಿದ್ದಾರೆ. ಪ್ರಧಾನಿ ಎಡಿ ರಾಮಾ ಅವರ ರಾಜೀನಾಮೆಗೆ ಆಗ್ರಹಿಸಿ ಅಲ್ಬೇನಿಯಾದಲ್ಲಿ ಭಾರೀ ಪ್ರತಿಭಟನೆಗಳು ಮುಂದುವರಿದಿವೆ.
ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಿದ ಪರಿಣಾಮವಾಗಿ ಇಂಧನ ದರಗಳು ವಾರ್ಷಿಕವಾಗಿ ಶೇ.15 ರಷ್ಟು ಏರಿಕೆಯಾಗಿದ್ದು, ಆಹಾರ ಪದಾರ್ಥಗಳ ಬೆಲೆಯೂ ಗಗನಕ್ಕೇರಿದೆ. ಪರಿಣಾಮವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಪೋರ್ಚುಗಲ್ನ ಹಣದುಬ್ಬರ ಶೇ. 3.6 ಕ್ಕೆ ತಲುಪಿದೆ.
2017 ರಿಂದೀಚೆಗೆ ದೇಶದಲ್ಲಿ ಮನೆಗಳ ಬೆಲೆ ಎರಡರಷ್ಟಕ್ಕೂ ಹೆಚ್ಚು ದುಬಾರಿಯಾಗಿದ್ದು, ಹೊಸ ಗುತ್ತಿಗೆಯ ಬಾಡಿಗೆ ದರಗಳೂ ದುಪ್ಪಟ್ಟಾಗಿವೆ. ಇದು ಯುರೋಪ್ನಲ್ಲೇ ಅತ್ಯಂತ ಗಂಭೀರವಾದ ವಸತಿ ಬಿಕ್ಕಟ್ಟುಗಳಲ್ಲಿ ಒಂದಾಗಿ ಪರಿಣಮಿಸಿದೆ.
