* ಸಾಮಾಜಿಕ ಸೇವಾ ಕೈಂಕರ್ಯಗಳಿಗೆ ಮೆಚ್ಚುಗೆ
ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಯ ಸತ್ಯಸಾಯಿ, ಶ್ರೀ ಮಧುಸೂದನ ಸಾಯಿ ಆಶ್ರಮದಲ್ಲಿ ನವರಾತ್ರಿ (Navratri) ಸಂಭ್ರಮ ಮನೆ ಮಾಡಿದೆ.
ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ 7ನೇ ದಿನದ ಕಾರ್ಯಕ್ರಮದಲ್ಲಿ ನೊಣವಿಕೆರೆ ಅಜ್ಜಯ್ಯ (Nonavinakere Swamiji), ಅವಧೂತ ವಿನಯ್ ಗುರೂಜಿ (Vinay Guruji), MLC ಆರತಿ ಕೃಷ್ಣ, ಚಿರಂಜೀವಿ ಜೆಟ್ಟಿ ಭಾಗವಹಿಸಿದರು. ಇದನ್ನೂ ಓದಿ: ಮೈಸೂರು ದಸರಾದಿಂದ ‘ಕೋಲು’ ವರೆಗೆ; ದಕ್ಷಿಣ ಭಾರತದಲ್ಲಿ ನವರಾತ್ರಿ ಆಚರಣೆ ಹೇಗಿರುತ್ತೆ?
ಕಾರ್ಯಕ್ರಮದಲ್ಲಿ ಮಾತನಾಡಿದ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ಧರ್ಮದಲ್ಲಿ ರಾಜಕಾರಣ ಬೆರೆಯಬಾರದು. ಆದರೆ, ರಾಜಕಾರಣದಲ್ಲಿ ಧರ್ಮ ಮತ್ತು ಮೌಲ್ಯ ಉಳಿಯುವಂತಾಗಬೇಕು. ಅದಕ್ಕಾಗಿ ಧಾರ್ಮಿಕ ಗುರುಗಳು ರಾಜಕಾರಣಿಗಳಿಗೆ ಆಶೀರ್ವಾದ ನೀಡಿ ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು.

ನವರಾತ್ರಿಯ 7ನೇ ದಿನದ ಕಾಳರಾತ್ರಿ ಆರಾಧನೆಯ ಮಹತ್ವವನ್ನು ವಿವರಿಸಿದ ಸ್ವಾಮೀಜಿ, ಮಹಿಳೆ ಹಲವು ಅವತಾರಗಳನ್ನು ತಾಳಬಲ್ಲಳು. ಗುರುವಿಗೂ ಗುರು, ಪರಮ ಗುರುವೆಂದರೆ ತಾಯಿ ಎಂದರು.
ವಿಧಾನ ಪರಿಷತ್ ಸದಸ್ಯೆ ಆರತಿ ಕೃಷ್ಣ ಮಾತನಾಡಿ, ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ವಿದೇಶಗಳಲ್ಲಿ ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಂಡರೂ ಅಗತ್ಯ ಸಹಕಾರ ನೀಡಲು ಸಿದ್ಧರಿದ್ದೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: Navratri 2026 Day 8: ಘೋರ ತಪಸ್ಸಿನಿಂದ ಶಿವನನ್ನು ಪಡೆದ ಮಹಾಗೌರಿ
ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಮಾತನಾಡಿ, ಮನುಷ್ಯನ ಬದುಕಿನ ಅಂಧಕಾರವನ್ನು ನಿವಾರಿಸುವ ಶಕ್ತಿ ಕಾಳರಾತ್ರಿ ದೇವಿಗಿದೆ. ಕತ್ತಲಲ್ಲಿ ಭಯಗೊಂಡು ಮಗು ‘ಅಮ್ಮ’ ಎಂದು ಕರೆಯುವಂತೆ, ಮನುಷ್ಯರು ತಮ್ಮೊಳಗಿನ ಅಜ್ಞಾನ ಮತ್ತು ಅಂಧಕಾರವನ್ನು ನಿವಾರಿಸಿಕೊಳ್ಳಲು ಜಗನ್ಮಾತೆಯ ಮೊರೆ ಹೋಗಬೇಕು ಎಂದು ತಿಳಿಸಿದರು.

ಅವಧೂತ ಶ್ರೀ ವಿನಯ್ ಗುರೂಜಿ ಮಾತನಾಡಿ, ಮುದ್ದೇನಹಳ್ಳಿಯಲ್ಲಿ ಕರುಣೆ ಮತ್ತು ಪಾರದರ್ಶಕತೆ ನೆಲೆಸಿವೆ. ಮಾನವೀಯತೆ ಮತ್ತು ದೈವತ್ವದ ಸಂಗಮವಾಗಿದೆ. ಜೀವನದ ಉದ್ದೇಶವನ್ನು ಕಲಿಸುವ ಸಂಸ್ಥೆ ಸತ್ಯಸಾಯಿ ಸಂಸ್ಥೆ ಎಂದು ಬಣ್ಣಿಸಿದರು.
ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಬಿ.ಎನ್. ನರಸಿಂಹಮೂರ್ತಿ ಉಪಸ್ಥಿತರಿದ್ದರು. ಬಳಿಕ ಖ್ಯಾತ ನೃತ್ಯ ಕಲಾವಿದೆ ಸೋನಾಲ್ ಮಾನ್ ಸಿಂಗ್ ಅವರ ತಂಡದಿಂದ ವಿಶೇಷ ನೃತ್ಯ ಕಾರ್ಯಕ್ರಮ ನಡೆಯಿತು.
