ನವರಾತ್ರಿ ಹಬ್ಬದ 8ನೇ ದಿನ (ಅ.18) ಮಹಾಗೌರಿ ದೇವಿಯನ್ನ ಪೂಜಿಸಲಾಗುತ್ತದೆ. ದೇವಿಯು ನೇರಳೆ ಬಣ್ಣವನ್ನ ಇಷ್ಟಪಡುವುದರಿಂದ ಈ ದಿನ ನೇರಳೆ ಬಣ್ಣದ ಬಟ್ಟೆ ಧರಿಸಿ ಪೂಜಿಸಲಾಗುತ್ತದೆ. ಈ ಬಣ್ಣವು ಘನತೆ ಮತ್ತು ಆಧ್ಯಾತ್ಮಿಕತೆ ನೆರವೇರಿಕೆಗೆ ಸಂಬಂಧಿಸಿದ್ದಾಗಿದೆ
ಪೌರಾಣಿಕ ಹಿನ್ನೆಲೆ ಹಾಗೂ ಮಹತ್ವ
‘ಮಹಾ’ ಎಂದರೆ ಅತ್ಯುನ್ನತ ಅಥವಾ ಅಪಾರ. ‘ಗೌರಿ’ ಎಂದರೆ ಶುಭ್ರ ಬಿಳಿ ಬಣ್ಣ ಅಥವಾ ಕಾಂತಿ. ಮಹಾಗೌರಿ ಎಂದರೆ ಮಲ್ಲಿಗೆ ಹೂವು, ಚಂದ್ರ ಅಥವಾ ಹಿಮದಂತೆ ಧವಳ ಕಾಂತಿಯುಳ್ಳ ಪರಮಪಾವನ ಸ್ವರೂಪಿಣಿ.
ದೇವಿಯ ಈ ರೂಪದ ಕುರಿತು ಮತ್ತೊಂದು ಜನಪ್ರಿಯ ಕಥೆಯೂ ಇದೆ. ಶಿವನನ್ನು ಪತಿಯಾಗಿ ಪಡೆಯಲು ಪಾರ್ವತಿ ದೇವಿಯು ಸಹಸ್ರಾರು ವರ್ಷಗಳ ಕಾಲ ಕಠಿಣ ತಪಸ್ಸನ್ನಾಚರಿಸುತ್ತಾಳೆ. ಬಿಸಿಲು, ಗಾಳಿ, ಮಳೆ ಮತ್ತು ದೂಳಿಗೆ ಆಕೆಯ ಮೈಬಣ್ಣ ಸಂಪೂರ್ಣ ಕಪ್ಪಾಗುತ್ತದೆ. ಆಕೆಯ ಅಚಲ ತಪಸ್ಸಿಗೆ ಮೆಚ್ಚಿದ ಶಿವನು ಪ್ರತ್ಯಕ್ಷನಾಗಿ ಆಕೆಯ ಭಕ್ತಿಯನ್ನು ಪುರಸ್ಕರಿಸಿ, ಪವಿತ್ರ ಗಂಗಾಜಲದಿಂದ ಆಕೆಯನ್ನು ಅಭಿಷೇಕ ಮಾಡುತ್ತಾನೆ. ಗಂಗಾಜಲದ ಸ್ಪರ್ಶದಿಂದ ಆಕೆಯ ಮೈಬಣ್ಣವು ವಿದ್ಯುತ್ತಿನಂತೆ ಅತ್ಯಂತ ತೇಜಸ್ವಿಯಾಗಿ ಬೆಳ್ಳಗೆ ಹೊಳೆಯಲಾರಂಭಿಸುತ್ತದೆ. ಅಂದಿನಿಂದ ಆಕೆಗೆ ‘ಮಹಾಗೌರಿ’ ಎಂಬ ಹೆಸರು ಬಂತು.

ದೇವಿಯ ದಿವ್ಯ ಸ್ವರೂಪ ಹಾಗೂ ವಾಹನ
ದೇವಿಯು ನೇರಳೆ ಬಣ್ಣದ ವಸ್ತ್ರಗಳು ಹಾಗೂ ಆಭರಣಗಳನ್ನು ಧರಿಸಿರುತ್ತಾಳೆ. ಆಕೆಯ ಮುಖದಲ್ಲಿ ಸದಾ ಶಾಂತ, ಸೌಮ್ಯ ಹಾಗೂ ಕರುಣಾಮಯಿ ನಗುವಿರುತ್ತದೆ. ದೇವಿಗೆ ನಾಲ್ಕು ಕೈಗಳಿವೆ. ಬಲಗೈಗಳಲ್ಲಿ ಅಭಯ ಮುದ್ರೆ ಹಾಗೂ ತ್ರಿಶೂಲವನ್ನು, ಎಡಗೈಗಳಲ್ಲಿ ಢಮರು ಹಾಗೂ ವರದ ಮುದ್ರೆಯನ್ನು ಧರಿಸಿದ್ದಾಳೆ. ಮಹಾಗೌರಿ ದೇವಿಯ ವಾಹನ ಬಿಳಿಯ ನಂದಿ (ವೃಷಭ). ಆದ್ದರಿಂದ ಆಕೆಯನ್ನು ‘ವೃಷಾರೂಢಾ’ ಎಂದೂ ಕರೆಯುತ್ತಾರೆ.
ಪೂಜಾ ವಿಧಾನ:
ಅಷ್ಟಮಿಯ ದಿನದಂದು 9 ವರ್ಷದೊಳಗಿನ ಹೆಣ್ಣುಮಕ್ಕಳನ್ನು ಮನೆಗೆ ಆಹ್ವಾನಿಸಿ ದೇವಿಯ ಸ್ವರೂಪವೆಂದು ಭಾವಿಸಿ ಪಾದಪೂಜೆ ಮಾಡಿ, ಪ್ರಸಾದ ನೀಡಿ ಆಶೀರ್ವಾದ ಪಡೆಯುವ ‘ಕನ್ಯಾ ಪೂಜೆ’ (ಕಂಜಕ್) ಸಂಪ್ರದಾಯ ಅತ್ಯಂತ ಪ್ರಸಿದ್ಧವಾಗಿದೆ. ನೇರಳೆ (Purple) ಬಣ್ಣದ ಬಟ್ಟೆ ಧರಿಸಿ ಪೂಜಿಸುವುದು ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ. ನೇರಳೆ ಬಣ್ಣವು ಗಾಂಭೀರ್ಯ, ಆಧ್ಯಾತ್ಮಿಕ ಉನ್ನತಿ ಮತ್ತು ಘನತೆಯನ್ನು ಸೂಚಿಸುತ್ತದೆ.
ದೇವಿಗೆ ತೆಂಗಿನಕಾಯಿ ಅಥವಾ ತೆಂಗಿನಕಾಯಿಯಿಂದ ಮಾಡಿದ ಸಿಹಿ ತಿನಿಸುಗಳು, ಹಲ್ವಾ-ಪೂರಿ ಹಾಗೂ ಕಡಲೆ ಪ್ರಸಾದವನ್ನು ಅರ್ಪಿಸಲಾಗುತ್ತದೆ.
