ಇಸ್ಲಾಮಾಬಾದ್: ಪಾಕಿಸ್ತಾನವು (Pakistan) ತನ್ನ ವಾಯುಪ್ರದೇಶದಲ್ಲಿ ಭಾರತೀಯ ವಿಮಾನಗಳ (Indian Aircraft) ಮೇಲಿನ ನಿಷೇಧವನ್ನು ನವೆಂಬರ್ 24ರ ವರೆಗೆ ವಿಸ್ತರಿಸಿದೆ.
ಭಾರತದಲ್ಲಿ ನೋಂದಾಯಿತ ವಿಮಾನಗಳು ಹಾಗೂ ಭಾರತೀಯ ವಿಮಾನಯಾನ ಸಂಸ್ಥೆಗಳ ಒಡೆತನದಲ್ಲಿರುವ, ಅವುಗಳಿಂದ ನಿರ್ವಹಿಸಲ್ಪಡುವ ಅಥವಾ ಗುತ್ತಿಗೆಗೆ ಪಡೆಯಲಾದ ವಿಮಾನಗಳ ಮೇಲೆ ಪಾಕಿಸ್ತಾನ ವಿಧಿಸಿರುವ ವಾಯುಪ್ರದೇಶ ನಿಷೇಧವನ್ನು ನವೆಂಬರ್ 24 ರವರೆಗೆ, ಅಂದರೆ ಇನ್ನೂ ಒಂದು ತಿಂಗಳ ಕಾಲ ವಿಸ್ತರಿಸಲಾಗಿದೆ ಎಂದು ಪಾಕಿಸ್ತಾನದ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.
ಎರಡು ನೆರೆಯ ರಾಷ್ಟ್ರಗಳ ನಡುವಿನ ಹದಗೆಟ್ಟ ಸಂಬಂಧಗಳ ಹಿನ್ನೆಲೆಯಲ್ಲಿ, 2025ರ ಏಪ್ರಿಲ್ 23ರಂದು ವಿಧಿಸಲಾಗಿದ್ದ ಈ ನಿರ್ಬಂಧವನ್ನು ಅಂದಿನಿಂದ ಕಾಲಕಾಲಕ್ಕೆ ವಿಸ್ತರಿಸುತ್ತಾ ಬರಲಾಗಿದೆ. ಇದನ್ನೂ ಓದಿ: ಫ್ರಾನ್ಸ್ ಆಯ್ತು ಈಗ ಪೋರ್ಚುಗಲ್ನಲ್ಲಿ ಭುಗಿಲೆದ್ದ ಬೃಹತ್ ಜನಾಕ್ರೋಶ
ಪಾಕಿಸ್ತಾನ ವಿಮಾನ ನಿಲ್ದಾಣ ಪ್ರಾಧಿಕಾರವು (PAA) ಶನಿವಾರ ‘X’ (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್ ಮೂಲಕ ಈ ವಿಸ್ತರಣೆಯನ್ನು ಘೋಷಿಸಿದೆ. ಈ ನಿರ್ಬಂಧವು ಮಿಲಿಟರಿ ವಿಮಾನಗಳಿಗೂ ಅನ್ವಯಿಸುತ್ತದೆ ಎಂದು ತಿಳಿಸಿದೆ.
ವಿಸ್ತರಣೆಯು 2026ರ ನವೆಂಬರ್ 24ರಂದು ಬೆಳಿಗ್ಗೆ 4:59ರ (ಸ್ಥಳೀಯ ಸಮಯ) ವರೆಗೆ ಜಾರಿಯಲ್ಲಿರುತ್ತದೆ. ನಿಷೇಧವನ್ನು ವಿಸ್ತರಿಸಲು ಹೊಸ ‘ನೋಟಿಸ್ ಟು ಏರ್ಮೆನ್’ (NOTAM) ಅನ್ನು ಹೊರಡಿಸಲಾಗಿದೆ ಎಂದು PAA ವಕ್ತಾರರು ತಿಳಿಸಿದ್ದಾರೆ.
ಪಾಕಿಸ್ತಾನ್ ಸಿವಿಲ್ ಏವಿಯೇಷನ್ ಅಥಾರಿಟಿ (PCAA) ಯ 2022ರ ದಾಖಲೆಯ ಪ್ರಕಾರ, ಪಾಕಿಸ್ತಾನದ ವಾಯುಪ್ರದೇಶವನ್ನು ಕರಾಚಿ ಮತ್ತು ಲಾಹೋರ್ ಎಂಬ ಎರಡು ವಿಮಾನ ಮಾಹಿತಿ ವಲಯಗಳಾಗಿ (Flight Information Regions – FIRs) ವಿಂಗಡಿಸಲಾಗಿದೆ. ಇತ್ತೀಚಿನ NOTAM (ನೋಟಾಮ್) ಕರಾಚಿ ಮತ್ತು ಲಾಹೋರ್ ಎಂಬ ಎರಡೂ ವಿಮಾನ ಮಾಹಿತಿ ವಲಯಗಳಿಗೆ ಅನ್ವಯಿಸುತ್ತದೆ. ಇದನ್ನೂ ಓದಿ: ಫ್ರಾನ್ಸ್ನಲ್ಲಿ ಧಗಧಗ; ಭುಗಿಲೆದ್ದ ಹಿಂಸಾಚಾರ – 5 ಲಕ್ಷಕ್ಕೂ ಹೆಚ್ಚು ಜನ ಬೀದಿಗಿಳಿದು ಪ್ರತಿಭಟನೆ
