ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ (Pralhad Joshi) ಮನೆಗೆ ಮುತ್ತಿಗೆ ಹಾಕಲು ಪ್ಲ್ಯಾನ್ ಮಾಡಿದ್ದ ರೈತರಿಗೆ ಹೈಕೋರ್ಟ್ ಬಿಗ್ ಶಾಕ್ ನೀಡಿದೆ.
ಮಯೂರ್ ಬಡಾವಣೆಯಲ್ಲಿ ರೈತರು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಇದಕ್ಕೆ ಅಲ್ಲಿನ ನಿವಾಸಿಗಳು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಕೆ.ಎಸ್. ಭರತ್ ಕುಮಾರ್ ಹಾಗೂ ನ್ಯಾ.ಅನು ಶಿವರಾಮ್ ಅವರಿದ್ದ ವಿಭಾಗೀಯ ಪೀಠ ಸಾರ್ವಜನಿಕ ಬಡಾವಣೆಯಲ್ಲಿ ಪ್ರತಿಭಟನೆ ನಡೆಸುವಂತಿಲ್ಲ ಎಂದು ಆದೇಶ ಹೊರಡಿಸಿದೆ. ನಿಗದಿತ ಸ್ಥಳದಲ್ಲಿ ಪ್ರತಿಭಟನೆ ನಡೆಸಬಹುದು ಎಂದು ಪೀಠ ಸೂಚಿಸಿದೆ. ಇದನ್ನೂ ಓದಿ: ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಶೀಘ್ರ ಸಮಿತಿ ರಚನೆ: ಪ್ರಹ್ಲಾದ್ ಜೋಶಿ
ಕಬ್ಬಿಗೆ(Sugarcane) ನ್ಯಾಯಯುತ ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಕಬ್ಬು ಬೆಳೆಗಾರರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ತೀವ್ರ ಸಮರ ಸಾರಿದ್ದಾರೆ. ಪ್ರತಿ ಟನ್ ಕಬ್ಬಿಗೆ ಕನಿಷ್ಠ 5,500 ರೂ. ದರ ನಿಗದಿ, ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (MSP) ಹೆಚ್ಚಳ, ರಾಜ್ಯದಲ್ಲಿ ಉತ್ಪಾದನೆಯಾಗುವ ಸಂಪೂರ್ಣ ಎಥೆನಾಲ್ ಖರೀದಿ ಹಾಗೂ ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ತಕ್ಷಣವೇ ಜಾರಿಗೊಳಿಸಲು ರೈತರು ಪಟ್ಟುಹಿಡಿದ್ದಾರೆ. ಕಳೆದ ಕೆಲವು ದಿನಗಳಿಂದ ಇದೇ ವಿಚಾರವಾಗಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲವೆಡೆ ಪ್ರಮುಖ ರಸ್ತೆಗಳನ್ನು ತಡೆದು ಸಹ ಆಕ್ರೋಶ ಹೊರಹಾಕಿದ್ದಾರೆ.
ರೈತರ ಪ್ರಮುಖ ಬೇಡಿಕೆಗಳು
1. ಪ್ರತಿ ಟನ್ ಕಬ್ಬಿಗೆ ಕನಿಷ್ಠ 5,500 ರೂ. ದರ ನಿಗದಿಪಡಿಸಬೇಕು.
2. ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು (MSP) ಏರಿಕೆ ಮಾಡಬೇಕು.
3. ರಾಜ್ಯದಲ್ಲಿ ಉತ್ಪಾದನೆಯಾಗುವ ಎಥೆನಾಲ್ ಅನ್ನು ಕೇಂದ್ರ ಸರ್ಕಾರವೇ ಸಂಪೂರ್ಣವಾಗಿ ಖರೀದಿಸಬೇಕು.
4. ಸ್ವಾಮಿನಾಥನ್ ಆಯೋಗದ ವರದಿ ಮತ್ತು ಶಿಫಾರಸುಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕು.
ಸರ್ಕಾರಗಳು ತಕ್ಷಣವೇ ಮಧ್ಯಪ್ರವೇಶಿಸಿ ಸೂಕ್ತ ದರ ಘೋಷಿಸದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿ ರಾಜ್ಯವ್ಯಾಪಿ ಬಂದ್ಗೆ ಕರೆ ನೀಡುವುದಾಗಿ ರೈತ ಸಂಘಟನೆಗಳು ಕಟುವಾಗಿ ಎಚ್ಚರಿಸಿವೆ. ಇದನ್ನೂ ಓದಿ: ಕಬ್ಬಿಗೆ 5,500 ರೂ. ನೀಡಿ – ಹುಬ್ಬಳ್ಳಿಯಲ್ಲಿ ರೈತರ ಬೃಹತ್ ಪ್ರತಿಭಟನೆ, ಜೋಶಿ ಮನೆ ಮುತ್ತಿಗೆ
