ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಕಿಶ್ತ್ವಾರ್ ಜಿಲ್ಲೆಯಲ್ಲಿ ತಮ್ಮ ಸೇವಾ ರೈಫಲ್ನೊಂದಿಗೆ ನಾಪತ್ತೆಯಾಗಿದ್ದ ವಿಶೇಷ ಪೊಲೀಸ್ ಅಧಿಕಾರಿಯೊಬ್ಬರ (SPO) ಶುಕ್ರವಾರ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಿಶ್ತ್ವಾರ್ನಲ್ಲಿರುವ ತಮ್ಮ ಮನೆಯ ಸಮೀಪ 55 ವರ್ಷದ ಬಶೀರ್ ಅಹ್ಮದ್ ಅವರ ಮೃತದೇಹ ಪತ್ತೆಯಾಗಿದೆ. ವನಿಪೋರ ತ್ರಿಗಮ್ನ ನಿವಾಸಿಯಾಗಿದ್ದ ಅಹ್ಮದ್, 2025ರಿಂದ ಪೆಡಿಲ್ ಪೊಲೀಸ್ ಠಾಣೆಯಲ್ಲಿ (ಪೊಲೀಸ್ ಪೋಸ್ಟ್ನಲ್ಲಿ) ನಿಯೋಜನೆಗೊಂಡಿದ್ದರು.
ಅಹ್ಮದ್ ತಮ್ಮ ಸೆಲ್ಫ್-ಲೋಡಿಂಗ್ ರೈಫಲ್ (SLR) ಮತ್ತು ಮ್ಯಾಗಜೀನ್ನೊಂದಿಗೆ ನಾಪತ್ತೆಯಾಗಿದ್ದರು. ಪೊಲೀಸರು ಮತ್ತು ಭದ್ರತಾ ಪಡೆಗಳು ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಕೈಗೊಂಡಿದ್ದವು. ಇದನ್ನೂ ಓದಿ: ಸಹೋದ್ಯೋಗಿಯೊಂದಿಗೆ ಡೇಟ್ ಮಾಡಿದ್ದಕ್ಕೆ ಪತ್ನಿ ಕೊಲೆ – ಅಮೆರಿಕದಲ್ಲಿ ಗುಜರಾತ್ ಮೂಲದ ವ್ಯಕ್ತಿ ಬಂಧನ
ಗುರುವಾರ ಬೆಳಗ್ಗೆ ಸುಮಾರು 7 ಗಂಟೆಗೆ ಎಸ್ಪಿಒ ತಮ್ಮ ಮನೆಗೆ ಹೊರಟಿದ್ದರು. ಆದರೆ, ಮನೆಗೆ ತಲುಪಿರಲಿಲ್ಲ. ಹಲವು ಗಂಟೆಗಳಾದರೂ ಅವರು ಮನೆಗೆ ಬಾರದಿದ್ದಾಗ, ಪತ್ನಿ (ಇವರ ಮನೆ ಆ ಪೋಸ್ಟ್ನಿಂದ 10 ನಿಮಿಷಗಳ ನಡಿಗೆಯ ದೂರದಲ್ಲಿದೆ) ವಿಚಾರಿಸಲು ಅಲ್ಲಿಗೆ ಹೋದರು. ಅಹ್ಮದ್ ಆಗಲೇ ಮನೆಗೆ ಹೊರಟರೆಂದು ಉಳಿದವರು ತಿಳಿಸಿದ್ದಾರೆ.
ಕಾಣೆಯಾದ ಎಸ್ಪಿಒ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಸಿಗುತ್ತಿದ್ದಂತೆಯೇ, ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಲಾಯಿತು. ಪೊಲೀಸ್ ತಂಡಗಳನ್ನು ವಿವಿಧ ದಿಕ್ಕುಗಳಿಗೆ ಕಳುಹಿಸಲಾಯಿತು. ಅಲ್ಲದೆ, ಕಾಣೆಯಾದ ಎಸ್ಪಿಒ ಅವರ ಮೊಬೈಲ್ ಲೊಕೇಶನ್ ಮೂಲಕ ಅವರನ್ನು ಪತ್ತೆಹಚ್ಚಲು ಪ್ರಯತ್ನಿಸಲಾಯಿತು.
ಅವರ ಮೃತದೇಹವು ಇಂದು ಬೆಳಗ್ಗೆ ಅವರ ನಿವಾಸದ ಹಿಂಭಾಗದಲ್ಲಿ ಪತ್ತೆಯಾಗಿದೆ. ಅವರ ಬಳಿಯಿದ್ದ ಸರ್ಕಾರಿ ರೈಫಲ್ ಕೂಡ ದೊರೆತಿದೆ. ವಿಧಿವಿಜ್ಞಾನ ಪ್ರಯೋಗಾಲಯದ ತಂಡವೊಂದು ಸ್ಥಳಕ್ಕೆ ಆಗಮಿಸಿ, ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಇದರಲ್ಲಿ ಅಪರಾಧ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಪ್ರತಿಭಟನೆ ಬಿಸಿ: ವ್ಯಾಪಾರಕ್ಕೆ ಭಾರಿ ಹೊಡೆತ, ಸುಪ್ರೀಂ ಮೊರೆ ಹೋದ ವ್ಯಾಪಾರಿಗಳು

