ಜೈಪುರ: ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ, ಭಾರತ ಪಾಕಿಸ್ತಾನದೊಂದಿಗೆ (Pakistan) ನಿಲ್ಲುತ್ತದೆ ಎಂದು ಎಂದು ರಾಜ್ಯಸಭಾ ಸದಸ್ಯ ಹಾಗೂ ರಾಜಸ್ಥಾನ ಬಿಜೆಪಿ ಘಟಕದ ಅಧ್ಯಕ್ಷ ಮದನ್ ರಾಥೋಡ್ (Madan Rathore) ನಾಲಿಗೆ ಹರಿಬಿಟ್ಟಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಥೋಡ್, ಭೌಗೋಳಿಕ ಸಾಮಿಪ್ಯವನ್ನು ಉಲ್ಲೇಖಿಸಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಭಾರತ ನೆರೆಯ ರಾಷ್ಟ್ರ ಆಗಿರೋದ್ರಿಂದ ಪಾಕಿಸ್ತಾನವನ್ನು ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ. ಭಾಷಣದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ಹರಿದಾಡಿದ ನಂತರ ವಿವಾದ ಭುಗಿಲೆದ್ದಿದೆ. ವಿಪಕ್ಷಗಳು ಬಿಜೆಪಿ ನಾಯಕನನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿವೆ.

ವಿಪಕ್ಷಗಳು ಕೆಂಡಾಮಂಡಲ
ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಆಪ್ ಮತ್ತು ಕಾಂಗ್ರೆಸ್ ಪಕ್ಷಗಳು, ಆಡಳಿತ ಪಕ್ಷದ ವಿದೇಶಾಂಗ ನೀತಿ ನಿಲುವನ್ನು ಪ್ರಶ್ನಿಸಿವೆ.
ಸಂಘರ್ಷದ ಸಮಯದಲ್ಲಿ ಪಾಕಿಸ್ತಾನ ಬೆಂಬಲಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಥೋಡ್ ಅವರ ಮೂಲಕ ದೃಷ್ಟಿಕೋನವನ್ನ ಹಂಚಿಕೊಂಡಿದ್ದಾರೆಯೇ? ಭಾರತೀಯ ನಾಗರಿಕರು ಮತ್ತು ಮಿಲಿಟರಿ ಸಿಬ್ಬಂದಿ ವಿರುದ್ಧ ಪದೇ ಪದೇ ಗಡಿಯಾಚೆಗಿನ ಭಯೋತ್ಪಾದನೆ ಕೃತ್ಯ ನಡೆಸುತ್ತಿರುವ ದೇಶದ ಬಗ್ಗೆ ಬಿಜೆಪಿ ತನ್ನ ಒಲವು ಪ್ರದರ್ಶಿಸುತ್ತಿದೆ ಎಂದು ಖಂಡಿಸಿದ್ದಾರೆ.
ಆಮ್ ಆದ್ಮಿ ಪಕ್ಷ ಕೂಡ ಬಿಜೆಪಿ ತನ್ನ ಸೈದ್ಧಾಂತಿಕ ನಿಲುವನ್ನು ಪ್ರದರ್ಶಿಸಿದೆ ಎಂದು ಟೀಕಿಸಿದೆ.

