ಆನೇಕಲ್: ಬೆಂಗಳೂರು (Bengaluru) ಹೊರವಲಯದ ಆನೇಕಲ್ (Anekal) ತಾಲೂಕಿನ ಅತ್ತಿಬೆಲೆ ಸಮೀಪದ ಇಚ್ಚಂಗೂರು-ವಡ್ಡರಪಾಳ್ಯ ರಸ್ತೆಯಲ್ಲಿನ ಲೇಕ್ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ನಲ್ಲಿ ಬೆಳ್ಳಂಬೆಳಗ್ಗೆ ಭಾರೀ ಸ್ಫೋಟ ಸಂಭವಿಸಿದೆ.
ಕೆಮಿಕಲ್ ಮಿಕ್ಸ್ ಮಾಡುತ್ತಿದ್ದ ವೇಳೆ ರಿಯಾಕ್ಟರ್ ಏಕಾಏಕಿ ಸ್ಫೋಟಗೊಂಡಿದೆ. ಕ್ಷಣಮಾತ್ರದಲ್ಲಿ ಕಾರ್ಖಾನೆಯೊಳಗೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸ್ಫೋಟದ ರಭಸಕ್ಕೆ ಕಿಟಕಿ, ಬಾಗಿಲುಗಳು ಪುಡಿಪುಡಿಯಾಗಿವೆ. ಕಾರ್ಖಾನೆಯೊಳಗಿನ ವಸ್ತುಗಳು ಛಿದ್ರಗೊಂಡಿದ್ದು, ಸ್ಫೋಟದ ಸದ್ದು ಸುತ್ತಮುತ್ತಲಿನ ಗ್ರಾಮಸ್ಥರನ್ನೇ ಬೆಚ್ಚಿಬೀಳಿಸಿದೆ. ಸ್ಫೋಟದ ಅಬ್ಬರಕ್ಕೆ ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಸ್ಸಾಂ ಮೂಲದ ಫೀರ್ ಮೊಹಮ್ಮದ್, ತಮಿಳುನಾಡು ಮೂಲದ ವಿನೀತ್ ಹಾಗೂ ವರುಣ್ ಟಿ. ಜಯನ್ ಗಾಯಗೊಂಡ ಕಾರ್ಮಿಕರಾಗಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಕೆಮಿಕಲ್ನಿಂದಾಗಿ ಸುಟ್ಟ ಗಾಯಗಳಾಗಿದ್ದು, ನೋವಿನಿಂದ ಕಾರ್ಮಿಕರು ನರಳಾಡಿದ್ದಾರೆ. ಕೂಡಲೇ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಇನ್ಸ್ಪೆಕ್ಟರ್ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿಯೂ ಕಾರ್ಯಾಚರಣೆ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಈ ಕಾರ್ಖಾನೆಯಿಂದ ಸಾಕಷ್ಟು ಬಾರಿ ಸ್ಫೋಟ ಸಂಭವಿಸಿ ಅವಘಡಗಳು ನಡೆಯುತ್ತಿದೆ. ಈ ಕಾರ್ಖಾನೆಗಳಿಂದ ಸಾಕಷ್ಟು ಸಮಸ್ಯೆಗಳಾಗಿದ್ದು, ಶಾಶ್ವತವಾಗಿ ಸೀಜ್ ಮಾಡಿ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಸ್ಫೋಟದಿಂದಾಗಿ ಕಾರ್ಖಾನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಕೆಮಿಕಲ್ನ ದುರ್ವಾಸನೆ ಆವರಿಸಿದ್ದು, ಸ್ಥಳೀಯರಲ್ಲಿ ಕೆಲಕಾಲ ಆತಂಕ ಮನೆ ಮಾಡಿತ್ತು. ಕೆಮಿಕಲ್ ರಿಯಾಕ್ಟರ್ನಲ್ಲಿ ಕೆಲಸ ಮಾಡುವಾಗ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಇರುವುದರಿಂದ ರಿಯಾಕ್ಟರ್ಗೆ ಸರಿಯಾದ ಅರ್ಥಿಂಗ್ ವ್ಯವಸ್ಥೆ ಮಾಡದೆ ಇರೋದೇ ಈ ಸ್ಫೋಟಕ್ಕೆ ಕಾರಣವಾಗಿದೆ. ಅಪಾಯಕಾರಿ ಕೆಮಿಕಲ್ಗಳ ನಡುವೆ ಕೆಲಸ ಮಾಡುವವರಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರಲಿಲ್ಲ. ರಿಯಾಕ್ಟರ್ನಲ್ಲಿ ಕೆಮಿಕಲ್ ಮಿಶ್ರಣ ಮಾಡುವ ವೇಳೆ ಸ್ಫೋಟ ಸಂಭವಿಸಿದೆ. ಇಷ್ಟೆಲ್ಲಾ ಆದರೂ ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂಬ ರೀತಿಯ ಬೇಜವಾಬ್ದಾರಿ ಉತ್ತರವನ್ನ ಕಾರ್ಖಾನೆ ಆಡಳಿತ ಮಂಡಳಿ ನೀಡಿದೆ.

