– ಪರೀಕ್ಷೆ ದಿನವೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಪ್ರಸ್ತಾಪ
ನವದೆಹಲಿ: ನೀಟ್ (NEET) ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವಂಚನೆ ತಡೆಯಲು ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ತಂತ್ರಜ್ಞಾನ ಆಧಾರಿತ ಹೊಸ ವಿಧಾನವನ್ನು ಪ್ರಸ್ತಾಪಿಸಿದ್ದಾರೆ. ಪರೀಕ್ಷೆಗೂ ಮುನ್ನವೇ ಒಂದೇ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸುವ ಬದಲು, ಪರೀಕ್ಷೆಯ ದಿನವೇ ಕೃತಕ ಬುದ್ಧಿಮತ್ತೆ (AI) ನೆರವಿನಿಂದ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದು ಅವರ ಸಲಹೆಯಾಗಿದೆ.
ಅಕ್ಟೋಬರ್ 13ರಂದು ನವದೆಹಲಿಯಲ್ಲಿ ನಡೆದ ಬ್ಲೂಮ್‌ಬರ್ಗ್ ನ್ಯೂ ಎಕಾನಮಿ ಫೋರಂನಲ್ಲಿ ಮಾತನಾಡಿದ ನಿಲೇಕಣಿ, ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಅಗತ್ಯವನ್ನು ವಿವರಿಸಿದ್ದಾರೆ. ಪರೀಕ್ಷಾ ಸುಧಾರಣೆಗಳ ಕುರಿತು ಕೇಂದ್ರದ ಉನ್ನತ ಮಟ್ಟದ ಕಾರ್ಯಪಡೆಯ ನೇತೃತ್ವ ವಹಿಸಿರುವ ಅವರು, ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಹೊಸ ತಂತ್ರಜ್ಞಾನ ಬಳಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
ನಿಲೇಕಣಿ ಅವರ ಪ್ರಸ್ತಾವನೆಯ ಪ್ರಕಾರ, ಪರೀಕ್ಷಾ ಅಧಿಕಾರಿಗಳು ವಿವಿಧ ವಿಷಯಗಳ ಪ್ರಶ್ನೆಗಳ ಬೃಹತ್ ಸಂಗ್ರಹವನ್ನು ಸಿದ್ಧಪಡಿಸಬೇಕು. ಪರೀಕ್ಷೆ ಆರಂಭವಾಗುವ ಸ್ವಲ್ಪ ಸಮಯದ ಮೊದಲು ಆ ಸಂಗ್ರಹದಿಂದ ಪ್ರಶ್ನೆಗಳನ್ನು ಆಯ್ಕೆ ಮಾಡಿ ಹೊಸ ಪ್ರಶ್ನೆ ಪತ್ರಿಕೆ ರೂಪಿಸಬಹುದು. ಈ ಪ್ರಕ್ರಿಯೆಯಲ್ಲಿ AI ತಂತ್ರಜ್ಞಾನವೂ ನೆರವಾಗಬಹುದು.
ಈ ವಿಧಾನದಿಂದ ಮುಂಚಿತವಾಗಿ ಒಂದೇ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿ ಮುದ್ರಿಸಿ ವಿತರಿಸುವ ಅಗತ್ಯ ಕಡಿಮೆಯಾಗಬಹುದು. ಇದರಿಂದ ಪ್ರಶ್ನೆ ಪತ್ರಿಕೆ ಸೋರಿಕೆಗೆ ಇರುವ ಅವಕಾಶಗಳನ್ನು ನಿಯಂತ್ರಿಸಬಹುದು ಎಂಬುದು ಅವರ ಪ್ರಸ್ತಾವನೆಯ ಹಿಂದಿನ ಉದ್ದೇಶವಾಗಿದೆ.ಇದನ್ನೂ ಓದಿ: ಕರ್ಲಾನ್ ಹಾಸಿಗೆ ತಯಾರಿಕಾ ಘಟಕದಲ್ಲಿ ಅಗ್ನಿ ಅವಘಡ; ಮುಗಿಲೆತ್ತರಕ್ಕೆ ದಟ್ಟ ಹೊಗೆ
ಪ್ರಶ್ನೆ ಪತ್ರಿಕೆ ಸಿದ್ಧವಾದ ಕ್ಷಣದಿಂದಲೇ ಅದನ್ನು ಅಕ್ರಮವಾಗಿ ಮಾರಾಟ ಮಾಡುವ ಆರ್ಥಿಕ ಪ್ರೇರಣೆ ಸೃಷ್ಟಿಯಾಗುತ್ತದೆ ಎಂದು ನಿಲೇಕಣಿ ಅಭಿಪ್ರಾಯಪಟ್ಟಿದ್ದಾರೆ. “ನಮಗೆ ‘ಎ’ ಪ್ರಶ್ನೆ ಪತ್ರಿಕೆ ಎಂದು ಕರೆಯಲ್ಪಡುವ ಏನಾದರೂ ಏಕೆ ಬೇಕು? ನಿಮ್ಮ ಬಳಿ ಪ್ರಶ್ನೆ ಪತ್ರಿಕೆ ಇದ್ದ ತಕ್ಷಣ, ಅದನ್ನು ಮಾರಾಟ ಮಾಡಲು ಆರ್ಥಿಕ ಪ್ರೋತ್ಸಾಹ ಸೃಷ್ಟಿಯಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಪರೀಕ್ಷೆಯ ದಿನದವರೆಗೂ ಅಂತಿಮ ಪ್ರಶ್ನೆ ಪತ್ರಿಕೆ ಸಿದ್ಧವಾಗದಂತೆ ವ್ಯವಸ್ಥೆ ರೂಪಿಸಿದರೆ, ಅದನ್ನು ಮುಂಚಿತವಾಗಿ ಕದಿಯುವುದು ಅಥವಾ ಅಭ್ಯರ್ಥಿಗಳಿಗೆ ಮಾರಾಟ ಮಾಡುವುದು ಕಷ್ಟವಾಗಬಹುದು ಎಂಬುದು ಈ ಪ್ರಸ್ತಾವನೆಯ ಆಶಯವಾಗಿದೆ.ಇದನ್ನೂ ಓದಿ: KSRTC ಬಸ್‌ನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣ – ಒಂದೇ ತಿಂಗಳಲ್ಲಿ 8.4 ಲಕ್ಷ ದಂಡ ವಸೂಲಿ

