ಬೆಂಗಳೂರು: ಗ್ರೇಟರ್ ಬೆಂಗಳೂರು ಅಥಾರಿಟಿ(GBA) ವ್ಯಾಪ್ತಿಯಲ್ಲಿ ‘ಕಾವೇರಿ 2.0’ ತಂತ್ರಾಂಶದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಆಸ್ತಿ ನೋಂದಣಿ ಹಾಗೂ ಖಾತಾ ಸಂಬಂಧಿತ ಸೇವೆಗಳು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿವೆ. ಪರಿಣಾಮವಾಗಿ ತಮ್ಮ ಆಸ್ತಿ(Property) ದಾಖಲೆಗಳನ್ನು ಮಾಡಿಸಿಕೊಳ್ಳಲು ಸಾರ್ವಜನಿಕರು ಕಂದಾಯ ಕಚೇರಿಗಳಿಗೆ ನಿತ್ಯ ಅಲೆದಾಡುವಂತಾಗಿದೆ.
ಸಾಫ್ಟ್ವೇರ್ನಲ್ಲಿ(Kaveri Software) ಎದುರಾಗಿರುವ ತಾಂತ್ರಿಕ ಸಮಸ್ಯೆಯಿಂದಾಗಿ ಕಳೆದ ಕೆಲ ದಿನಗಳಿಂದ ಪ್ರಮುಖ ಸೇವೆಗಳು ಸ್ಥಗಿತಗೊಂಡಿವೆ.ಹೊಸದಾಗಿ ಆಸ್ತಿ ಖರೀದಿಸಿದವರಿಗೆ ಖಾತೆ ಮಾಡಿಸಲು ಸಾಧ್ಯವಾಗುತ್ತಿಲ್ಲ. ಆಸ್ತಿ ಭಾಗ ಮಾಡಿಕೊಳ್ಳುವ ಪ್ರಕ್ರಿಯೆ ತಟಸ್ಥವಾಗಿದೆ. ಈಗಾಗಲೇ ಅರ್ಜಿ ಸಲ್ಲಿಸಿ ಕಾಯುತ್ತಿರುವ ಸಾವಿರಾರು ಕಡತಗಳ ಅಪ್ರೂವಲ್ ತಂತ್ರಾಂಶದ ಸಮಸ್ಯೆಯಿಂದ ನೆನೆಗುದಿಗೆ ಬಿದ್ದಿದೆ. ಇದನ್ನೂ ಓದಿ: PUBLiC TV Impact – ತೆಕ್ಕಲಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊನೆಗೂ ಬಂತು ಬೆಳಕು
ತಂತ್ರಾಂಶ ಕೈಕೊಟ್ಟಿರುವುದರಿಂದ ರೆವೆನ್ಯೂ ಕಚೇರಿಗಳಲ್ಲಿ ಕೆಲಸಗಳು ಸಂಪೂರ್ಣ ವಿಳಂಬವಾಗುತ್ತಿದ್ದು, ಸಾರ್ವಜನಿಕರ ಸಮಯ ಮತ್ತು ಹಣ ವ್ಯರ್ಥವಾಗುತ್ತಿದೆ. “ಕಚೇರಿಗೆ ಬಂದರೆ ಸರ್ವರ್ ಇಲ್ಲ, ಸಾಫ್ಟ್ವೇರ್ ಕೆಲಸ ಮಾಡುತ್ತಿಲ್ಲ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಆಸ್ತಿ ನೋಂದಣಿ ಮತ್ತು ಖಾತೆ ಯಾವಾಗ ಕೈಸೇರುತ್ತದೋ ತಿಳಿಯುತ್ತಿಲ್ಲ ಎಂದು ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಾವೇರಿ 2.0 ತಂತ್ರಾಂಶದಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಯನ್ನು ಕಂದಾಯ ಇಲಾಖೆ ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ತುರ್ತಾಗಿ ಸರಿಪಡಿಸಬೇಕು. ಹೊಸ ಖಾತೆ ನೋಂದಣಿ, ವಿಭಜನೆ ಹಾಗೂ ಅನುಮೋದನೆ ಪ್ರಕ್ರಿಯೆಗಳನ್ನು ಶೀಘ್ರವಾಗಿ ಚುರುಕುಗೊಳಿಸಿ ಸಾರ್ವಜನಿಕರ ಅಲೆದಾಟ ತಪ್ಪಿಸಬೇಕು ಎಂಬುದು ಜನರ ಬಲವಾದ ಆಗ್ರಹವಾಗಿದೆ.

