ಕೋಲ್ಕತ್ತಾ: ಪಶ್ಚಿಮ ಬಂಗಾಳದ ರೆಜಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ (Rejinagar Bypoll) ಬಿಜೆಪಿ ಅಭ್ಯರ್ಥಿ ಶಂಖರವ್ ಸರ್ಕಾರ್ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಆಮ್ ಜನತಾ ಉನ್ನಯನ್ ಪಾರ್ಟಿ (AJUP) ಅಭ್ಯರ್ಥಿ ಗೋಲಾಮ್ ನಬಿ ಆಜಾದ್ ಅಲಿಯಾಸ್ ರಾಬಿನ್ ವಿರುದ್ಧ ಸರ್ಕಾರ್ (Shankharavh Sarkar) 75,816 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 15 ಸುತ್ತುಗಳ ಮತ ಎಣಿಗೆ ಬಳಿಕ ಫಲಿತಾಂಶ ಹೊರಬಿದ್ದಿದೆ.
ಸರ್ಕಾರ್ 1,29,914 ಮತಗಳನ್ನ ಪಡೆದು, ಚಲಾವಣೆಯಾದ ಒಟ್ಟು ಮತಗಳ (Votes) ಪೈಕಿ ಶೇ.63.14ರಷ್ಟು ಮತ ಗಳಿಸಿದ್ದಾರೆ. ಎದುರಾಳಿ ರಾಬಿನ್ 54,098 ಮತಗಳನ್ನು (ಶೇ.26.29) ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ಲಾಹಿಲ್ ಕಾಫಿ 6,168 ಮತಗಳೊಂದಿಗೆ (ಶೇ.3) 3ನೇ ಸ್ಥಾನ ಪಡೆದರೆ, ತೃಣಮೂಲ ಕಾಂಗ್ರೆಸ್ (TMC) ಅಭ್ಯರ್ಥಿ ರಬಿಯುಲ್ ಆಲಂ ಚೌಧರಿ 3,847 ಮತಗಳನ್ನ (ಶೇ.1.87) ಪಡೆದು 4ನೇ ಸ್ಥಾನದಲ್ಲಿದ್ದಾರೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಅಭ್ಯರ್ಥಿ ಮೊಹಮ್ಮದ್ ಸಯೀದ್ 3,797 ಮತಗಳನ್ನು (ಶೇ.1.85) ಪಡೆದರೆ, ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಸೈಫುಜ್ಜಮಾನ್ ಸೈಖ್ 2,044 ಮತಗಳನ್ನು (ಶೇ.0.99) ಪಡೆದಿದ್ದಾರೆ.

ಮುಸ್ಲಿಂ ಪ್ರಾಬಲ್ಯ ಕ್ಷೇತ್ರ ಬಿಜೆಪಿ ತೆಕ್ಕೆಗೆ
ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿರುವ ರೆಜಿನಗರವು ಬಹರಾಂಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಒಟ್ಟು 2,57,657 ನೋಂದಾಯಿತ ಮತದಾರರಿದ್ದಾರೆ. ಕ್ಷೇತ್ರದ ಸುಮಾರು ಶೇ.70ರಷ್ಟು ಮತದಾರರು ಮುಸ್ಲಿಮರಾಗಿದ್ದಾರೆ. ಹೀಗಾಗಿ ಬಿಜೆಪಿ, ಟಿಎಂಸಿ, ಕಾಂಗ್ರೆಸ್ ಮತ್ತು ವಿವಿಧ ಪ್ರಾದೇಶಿಕ ರಾಜಕೀಯ ಸಂಘಟನೆಗಳ ನಡುವಿನ ಸ್ಪರ್ಧೆಯ ಹಿನ್ನೆಲೆ ಈ ಫಲಿತಾಂಶ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಟಿಎಂಸಿ ನಾಯಕ ಹುಮಾಯೂನ್ ಕಬೀರ್ ಬಿಜೆಪಿ ಅಭ್ಯರ್ಥಿ ಬಾಪನ್ ಘೋಷ್ ಅವರನ್ನು 58,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿ ರೆಜಿನಗರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಕಬೀರ್ ಅವರು ನೌದಾ ಕ್ಷೇತ್ರದಲ್ಲೂ ಗೆಲುವು ಸಾಧಿಸಿದ್ದರು. ಬಳಿಕ ಕಬೀರ್ ನೌದಾ ಕ್ಷೇತ್ರ ಉಳಿಸಿಕೊಂಡು, ರೆಜಿನಗರಕ್ಕೆ ರಾಜೀನಾಮೆ ನೀಡಿದರು. ಹೀಗಾಗಿ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು.
ರೆಜಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅಕ್ಟೋಬರ್ 6ರಂದು ಮತದಾನ ನಡೆದಿತ್ತು. ಶೇ.78.42 ರಷ್ಟು ಮತದಾನ ದಾಖಲಾಗಿತ್ತು.

