ಇತ್ತೀಚಿನ ವರ್ಷಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಸಾಮಾನ್ಯ ಎನಿಸಿಬಿಟ್ಟಿವೆ. ಆಧುನಿಕ ಜಡ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ, ಒತ್ತಡದ ಬದುಕು, ದುರಭ್ಯಾಸಗಳೇ ಇದಕ್ಕೆ ಮುಖ್ಯ ಕಾರಣವಾಗಿದೆ. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿ ಹೃದಯದ ಅಪಧಮನಿಗಳಲ್ಲಿ ಸಂಗ್ರಹಗೊಂಡಾಗ, ಹೃದಯವು ರಕ್ತವನ್ನು ಪಂಪ್ ಮಾಡಲು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ. ಪರಿಣಾಮವಾಗಿ ಹೃದಯಾಘಾತ, ಹೃದಯ ಸ್ತಂಭನದಂತಹ ಗಂಭೀರ ಸಮಸ್ಯೆಗಳು ಎದುರಾಗುತ್ತವೆ. ಹೃದಯಾಘಾತ ಅಥವಾ ಹೃದಯ ರಕ್ತನಾಳಗಳು ಬ್ಲಾಕ್ ಆದಾಗ ತಕ್ಷಣ ವೈದ್ಯರು ಸೂಚಿಸುವುದು ಆಂಜಿಯೋಪ್ಲಾಸ್ಟಿ (Angioplasty). ಇದು ಹೃದಯಕ್ಕೆ ರಕ್ತವನ್ನು ಪೂರೈಸುವ ಕಿರಿದಾದ ಅಥವಾ ಬ್ಲಾಕ್ ಆದ ಅಪಧಮಿಗಳನ್ನು ತೆರೆಯುವ ವೈದ್ಯಕೀಯ ಚಿಕಿತ್ಸಾ ವಿಧಾನ. ಈ ಚಿಕಿತ್ಸಾ ವಿಧಾನವೇ ಈಗ ಭಾರಿ ಚರ್ಚೆಯಲ್ಲಿದೆ.
ಚರ್ಚೆ ಹುಟ್ಟುಹಾಕಿದ ಕೇರಳ ಸಿಎಂ ಮಾತು
ಕಿರಿದಾದ ಅಥವಾ ಮುಚ್ಚಿಹೋದ ಹೃದಯದ ಅಪಧಮನಿಯನ್ನು ಸಣ್ಣ ಬಲೂನ್ ಬಳಸಿ ತೆರೆದು, ನಂತರ ಅದನ್ನು ತೆರೆದಿರಿಸಲು ಸಾಮಾನ್ಯವಾಗಿ ‘ಸ್ಟೆಂಟ್’ (Stent) ಅಳವಡಿಸುವ ‘ಆಂಜಿಯೋಪ್ಲಾಸ್ಟಿ’ಯನ್ನು ಅನಗತ್ಯವಾಗಿ ನಡೆಸಲಾಗುತ್ತಿದೆ. ಇದರ ವಿರುದ್ಧ ಅಭಿಯಾನ ನಡೆಸಬೇಕು ಎಂದು ಕೇರಳ ಸಿಎಂ ಸತೀಶನ್ ಆಡಿರುವ ಮಾತು ವೈದ್ಯಕೀಯ ವಲಯದಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಕೆಲವು ಸಂದರ್ಭಗಳಲ್ಲಿ ಇದು ಜೀವ ರಕ್ಷಕವಾಗಬಲ್ಲದು. ಆದರೆ, ಇತರೆ ಸಂದರ್ಭಗಳಲ್ಲಿ ಅಗತ್ಯವಿಲ್ಲದಿರಬಹುದು. ಕೆಲವೊಮ್ಮೆ ವೈದ್ಯಕೀಯ ಅಗತ್ಯವಿಲ್ಲದಿದ್ದರೂ ಕೆಲವು ಆಸ್ಪತ್ರೆಗಳು ಆಂಜಿಯೋಪ್ಲಾಸ್ಟಿ ನಡೆಸುತ್ತಿವೆ ಎಂದು ಸತೀಶನ್ ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದಾರೆ.
ವೈದ್ಯರು ಹೇಳೋದೇನು?
ಅನಗತ್ಯ ಪರೀಕ್ಷೆಗಳು ಮತ್ತು ಚಿಕಿತ್ಸೆಯನ್ನು ತಪ್ಪಿಸಬೇಕು ಎಂಬುದನ್ನು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (IMA) ಒಪ್ಪಿಕೊಂಡಿದೆ. ಆದರೆ, ಅನಗತ್ಯ ಆಂಜಿಯೋಪ್ಲಾಸ್ಟಿಯ ಕುರಿತಾದ ಕೇರಳ ಸಿಎಂ ಹೇಳಿಕೆಗಳ ಬಗ್ಗೆ ಎಚ್ಚರಿಕೆ ನೀಡಿದೆ. ಇಂತಹ ಹೇಳಿಕೆಗಳು ವೈದ್ಯರ ಮೇಲಿನ ರೋಗಿಗಳ ನಂಬಿಕೆಯನ್ನು ಕುಗ್ಗಿಸಬಹುದು. ಜೀವ ರಕ್ಷಕವಾಗಿರುವ ಅಗತ್ಯ ಚಿಕಿತ್ಸಾ ವಿಧಾನಗಳನ್ನು ಮುಂದೂಡುವಂತೆ ಅಥವಾ ನಿರಾಕರಿಸುವಂತೆ ರೋಗಿಗಳನ್ನು ಪ್ರೇರೇಪಿಸಬಹುದು ಎಂದು ತಿಳಿಸಿದೆ. ಇದನ್ನೂ ಓದಿ: ಆರ್‌ಬಿಐ ರೆಪೋ ದರ ಏರಿಸಿದ್ರೆ ಇಎಂಐ ದುಬಾರಿಯಾಗುತ್ತೆ ಯಾಕೆ?
ಹೃದ್ರೋಗಿಗಳಿಗೆ ಕೊರೊನರಿ ಸ್ಟಂಟ್‌ಗಳ ಬಳಕೆಯಲ್ಲಿ ದೇಶದಲ್ಲೇ ಮಹಾರಾಷ್ಟ್ರ ನಂ.1 ಹಾಗೂ ಕರ್ನಾಟಕ ನಂ.2 ಸ್ಥಾನದಲ್ಲಿದೆ. ಕೇರಳ ಮೂರನೇ ಸ್ಥಾನದಲ್ಲಿದೆ. ಎದೆನೋವು ಇರುವ ಪ್ರತಿಯೊಬ್ಬ ರೋಗಿಗೂ ಆಂಜಿಯೋಪ್ಲಾಸ್ಟಿ ಅಗತ್ಯವಿಲ್ಲ ಎಂದು ಹೃದ್ರೋಗ ತಜ್ಞರು ಹೇಳುತ್ತಾರೆ. ಆದರೆ, ತೀವ್ರ ಹೃದಯಾಘಾತದ ಸಂದರ್ಭದಲ್ಲಿ (ಅಂದರೆ, ರಕ್ತನಾಳದ ಒಳಪದರದ ನಿಕ್ಷೇಪ ಅಥವಾ ‘ಪ್ಲೇಕ್’ ಒಡೆದು ರಕ್ತ ಹೆಪ್ಪುಗಟ್ಟುವುದರಿಂದ ಹೃದಯದ ಒಂದು ಭಾಗಕ್ಕೆ ರಕ್ತದ ಹರಿವು ಇದ್ದಕ್ಕಿದ್ದಂತೆ ನಿಂತುಹೋಗಿ, ಹೃದಯದ ಸ್ನಾಯುವಿಗೆ ಆಮ್ಲಜನಕದ ಪೂರೈಕೆ ತಪ್ಪಿದಾಗ) ಈ ಚಿಕಿತ್ಸೆಯನ್ನು ವಿಳಂಬ ಮಾಡಬಾರದು. ರೋಗಿಯ ವೈದ್ಯಕೀಯ ಸ್ಥಿತಿ, ಪರೀಕ್ಷಾ ವರದಿಗಳು ಮತ್ತು ಅಪಾಯಕಾರಿ ಅಂಶಗಳನ್ನು ಪರಿಗಣಿಸಿ ಸ್ಟಂಟ್ ಅಳವಡಿಸಬೇಕೆ ಅಥವಾ ಇಲ್ಲವೇ ಎಂಬ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ.

ಏನಿದು ಆಂಜಿಯೋಪ್ಲಾಸ್ಟಿ?
ಆಂಜಿಯೋಪ್ಲಾಸ್ಟಿ ಎನ್ನುವುದು ಸಣ್ಣ ಬಲೂನ್ ಬಳಸಿ ಹೃದಯದ ಕಿರಿದಾದ ಅಥವಾ ಮುಚ್ಚಿಹೋದ ಅಪಧಮನಿಯನ್ನು ತೆರೆಯುವ ಒಂದು ವಿಧಾನವಾಗಿದೆ. ಆಮ್ಲಜನಕಯುಕ್ತ ರಕ್ತವು ಸರಾಗವಾಗಿ ಹರಿಯುವಂತೆ ಮಾಡಲು ಸಾಮಾನ್ಯವಾಗಿ ಆಂಜಿಯೋಪ್ಲಾಸ್ಟಿ ಮಾಡಲಾಗುತ್ತದೆ. ನಂತರ ಅಪಧಮನಿಯನ್ನು ಅಗಲವಾಗಿರಿಸುವ ‘ಸ್ಟೆಂಟ್’ (ಜಾಲರಿಯಂತಹ ರಚನೆ) ಅನ್ನು ಅಳವಡಿಸಲಾಗುತ್ತದೆ. ಆಧುನಿಕ ಸ್ಟೆಂಟ್‌ಗಳಿಗೆ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಔಷಧಿಗಳನ್ನು ಲೇಪಿಸಲಾಗಿರುತ್ತದೆ. ಇವುಗಳನ್ನು ಜೀವಿತಾವಧಿವರೆಗೆ ಬಾಳಿಕೆ ಬರುವಂತೆ ವಿನ್ಯಾಸಗೊಳಿಸಲಾಗಿರುತ್ತದೆ.
ಆಂಜಿಯೋಪ್ಲಾಸ್ಟಿ ಯಾವಾಗ ಬೇಕಾಗುತ್ತೆ?
ಹೃದಯಾಘಾತದ ಸಂದರ್ಭದಲ್ಲಿ ತಕ್ಷಣವೇ ನಡೆಸಿದಾಗ ‘ಕೊರೊನರಿ ಆಂಜಿಯೋಪ್ಲ್ಯಾಸ್ಟಿ’ ಜೀವ ರಕ್ಷಕವಾಗಬಲ್ಲದು. ಆದರೆ, ತೀವ್ರವಲ್ಲದ ಅಥವಾ ಸ್ಥಿರವಾದ ಕೊರೊನರಿ ಅಪಧಮನಿ ಕಾಯಿಲೆಯ ಸಂದರ್ಭಗಳಲ್ಲಿ (ಅಂದರೆ ಹೃದಯದ ಅಪಧಮನಿಗಳು ಕಿರಿದಾಗಿದ್ದರೂ, ಪರಿಸ್ಥಿತಿಯು ಊಹಿಸಬಹುದಾದಂತಿದ್ದು ತಕ್ಷಣದ ತುರ್ತುಸ್ಥಿತಿಯನ್ನು ಉಂಟುಮಾಡದಿದ್ದಾಗ) ಇದು ಹೆಚ್ಚು ಅಗತ್ಯವಿರುವುದಿಲ್ಲ. ಸ್ಥಿರವಾದ ಕಾಯಿಲೆ ಇರುವ ಬಹುತೇಕ ರೋಗಿಗಳಲ್ಲಿ, ಕೇವಲ ಔಷಧಿಗಳ ಮೂಲಕ ನೀಡುವ ಚಿಕಿತ್ಸೆಗೆ ಹೋಲಿಸಿದರೆ, ಆಂಜಿಯೋಪ್ಲಾಸ್ಟಿ ಮತ್ತು ಸ್ಟೆಂಟಿಂಗ್ ಪ್ರಕ್ರಿಯೆಗಳು ಸಾವು ಅಥವಾ ಹೃದಯಾಘಾತದ ವಿರುದ್ಧ ಯಾವುದೇ ಹೆಚ್ಚುವರಿ ರಕ್ಷಣೆಯನ್ನು ನೀಡುವುದಿಲ್ಲ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ ಎಂದು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (AIIMS) ಕಾರ್ಡಿಯಾಲಜಿ ವಿಭಾಗದ ಪ್ರಾಧ್ಯಾಪಕ ಡಾ. ಅಂಬುಜ್ ರಾಯ್ ಹೇಳುತ್ತಾರೆ.
ಹೃದಯದ ಸ್ನಾಯುವಿನ ದೊಡ್ಡ ಭಾಗವನ್ನೇ ಅಪಾಯಕ್ಕೆ ಸಿಲುಕಿಸುವಂತಹ ಹೆಚ್ಚಿನ ಪರಿಧಮನಿ (ಕೊರೊನರಿ) ತಡೆಗಳು ಇದ್ದಾಗ ಅಥವಾ ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು ಪ್ರಯತ್ನಿಸಿದರೂ ತೀವ್ರವಾದ ಆಂಜಿನಾ (ಎದೆ ನೋವು) ಮುಂದುವರಿದಾಗ ಸ್ಟೆಂಟ್ ಅಥವಾ ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ‘ಸ್ಟೆಂಟಿಂಗ್ ಪ್ರಕ್ರಿಯೆಯು, ಮುಚ್ಚಿಹೋದ ನೀರಿನ ಕೊಳವೆಯನ್ನು ದುರಸ್ತಿ ಮಾಡುವಷ್ಟು ಸರಳ ವಿಷಯವಲ್ಲ. ಇದು ವೈದ್ಯರ ಮುಂದೆ ಕುಳಿತಿರುವ ನಿರ್ದಿಷ್ಟ ರೋಗಿಗೆ ಅನುಗುಣವಾಗಿ ತೆಗೆದುಕೊಳ್ಳಲಾಗುವ ಒಂದು ಸಂಕೀರ್ಣ ನಿರ್ಧಾರವಾಗಿದೆ. ಈ ನಿರ್ಧಾರವನ್ನು ವೈಜ್ಞಾನಿಕ ಸಂಘಟನೆಗಳ ಮಾರ್ಗಸೂಚಿಗಳು, ರೋಗನಿರ್ಣಯದ ಫಲಿತಾಂಶಗಳು ಮತ್ತು ವೈದ್ಯಕೀಯ ತರಬೇತಿಯ ಆಧಾರದ ಮೇಲೆ ಕೈಗೊಳ್ಳಲಾಗುತ್ತದೆ ಎಂದು ಕೇರಳದಲ್ಲಿರುವ ಐಎಂಎ ಸಂಶೋಧನಾ ವಿಭಾಗದ ಸಂಯೋಜಕ ಡಾ. ರಾಜೀವ್ ಜಯದೇವನ್ ತಿಳಿಸಿದ್ದಾರೆ.

ಪರೀಕ್ಷೆಗೆ ಎಷ್ಟು ಶೇಕಡಾವಾರು ಪ್ಲೇಕ್ (Plaque) ಅಗತ್ಯವಿದೆ?
ಪರಿಧಮನಿಯ ಅಪಧಮನಿಯ ಅಡಚಣೆಗೆ ಸ್ಟೆಂಟ್ ಅಗತ್ಯವೆಂದು ಪರಿಗಣಿಸಲು ಕನಿಷ್ಠ 70% ಕಿರಿದಾಗುವಿಕೆ (ಅಥವಾ ಎಡ ಮುಖ್ಯ ಅಪಧಮನಿಯಂತಹ ನಿರ್ಣಾಯಕ ಪ್ರದೇಶಗಳಲ್ಲಿ 50%) ಇರಬೇಕಾಗುತ್ತದೆ. 50% ಕ್ಕಿಂತ ಕಡಿಮೆ ಇರುವ ಸೌಮ್ಯವಾದ ಅಡಚಣೆಗಳನ್ನು ಆಹಾರ, ಜೀವನಶೈಲಿಯ ಬದಲಾವಣೆಗಳು ಮತ್ತು ಸ್ಟ್ಯಾಟಿನ್‌ಗಳಂತಹ ಔಷಧಿಗಳ ಮೂಲಕವೇ ಆಕ್ರಮಣಕಾರಿಯಾಗಿ ನಿರ್ವಹಿಸಿಕೊಳ್ಳಬಹುದು. 50% ಮತ್ತು 70% ನಡುವಿನ ಮಧ್ಯಮ, ಗಡಿರೇಖೆಯ ಅಡಚಣೆಗಳಿಗೆ ಸ್ಟೆಂಟ್ ಇರಿಸಬೇಕೆ ಎಂದು ನಿರ್ಧರಿಸುವ ಮೊದಲು ಹೃದಯ ಸ್ನಾಯು ನಿಜವಾಗಿಯೂ ರಕ್ತದಿಂದ ವಂಚಿತವಾಗಿದೆಯೇ ಎಂದು ನಿರ್ಧರಿಸಲು ನಾವು ಕ್ರಿಯಾತ್ಮಕ ರಕ್ತದ ಹರಿವನ್ನು ಪರೀಕ್ಷಿಸಬೇಕಾಗಿದೆ ಎಂದು ಮ್ಯಾಕ್ಸ್ ಹೆಲ್ತ್ಕೇರ್‌ನ ಕಾರ್ಡಿಯಾಕ್ ಸೈನ್ಸಸ್‌ನ ಅಧ್ಯಕ್ಷ ಡಾ. ಬಲ್ಬೀರ್ ಸಿಂಗ್ ಹೇಳುತ್ತಾರೆ. ಇದನ್ನೂ ಓದಿ: ಕ್ಯಾನ್ಸರ್ ಔಷಧಗಳ ಬೆಲೆ 70% ಇಳಿಕೆ ಸಾಧ್ಯತೆ; ಸರ್ಕಾರದ ಮುಂದಿದೆ ಹೊಸ ಪ್ರಸ್ತಾವನೆ!
ಆಂಜಿಯೋಗ್ರಾಮ್ (ಹೃದಯದ ಚಿತ್ರಣ ಪರೀಕ್ಷೆ) ಯಾರು ಮಾಡಿಸಿಕೊಳ್ಳಬೇಕು?
ಹೃದಯಾಘಾತವಿಲ್ಲದ ಎದೆನೋವು ಇರುವ ರೋಗಿಗಳಲ್ಲಿ, ವೈದ್ಯರು ಮೊದಲು ‘ಪೂರ್ವ-ಪರೀಕ್ಷಾ ಸಂಭವನೀಯತೆ’ಯನ್ನು (Pretest Probability) ಅಂದರೆ ರೋಗಿಗೆ ಪರಿಧಮನಿ ಅಪಧಮನಿ ಕಾಯಿಲೆ (Coronary Artery Disease) ಸಾಧ್ಯತೆ ಎಷ್ಟಿದೆ ಎಂಬುದನ್ನು ಅಂದಾಜಿಸುತ್ತಾರೆ. ರೋಗಿಯ ವಯಸ್ಸು, ಲಿಂಗ, ರೋಗಲಕ್ಷಣಗಳ ಸ್ವರೂಪ ಹಾಗೂ ಧೂಮಪಾನ, ಕೌಟುಂಬಿಕ ಹಿನ್ನೆಲೆ ಮತ್ತು ಈಗಾಗಲೇ ಇರುವ ಆರೋಗ್ಯ ಸಮಸ್ಯೆಗಳಂತಹ ಇತರ ಅಪಾಯಕಾರಿ ಅಂಶಗಳನ್ನು ಆಧರಿಸಿ ಅಂದಾಜು ಮಾಡಲಾಗುತ್ತದೆ. ಅಂದಾಜಿಸಲಾದ ಸಂಭವನೀಯತೆಯು ತುಂಬಾ ಹೆಚ್ಚಾಗಿದ್ದರೆ (ಅಂದರೆ 85% ಕ್ಕಿಂತ ಹೆಚ್ಚು), ಕೊರೊನರಿ ಆಂಜಿಯೋಗ್ರಫಿ (Coronary Angiography) ಬೇಕಾಗಬಹುದು. ಒಂದು ವೇಳೆ ಈ ಪ್ರಮಾಣವು ತುಂಬಾ ಕಡಿಮೆಯಿದ್ದರೆ (15% ಕ್ಕಿಂತ ಕಡಿಮೆ), ಕೊರೊನರಿ ಅಪಧಮನಿ ಕಾಯಿಲೆಗೆ ಹೆಚ್ಚಿನ ಪರೀಕ್ಷೆಗಳ ಅಗತ್ಯವಿಲ್ಲದಿರಬಹುದು ಎಂದು ಕೊಲ್ಲಾಪುರದ ರಾಜರ್ಷಿ ಛತ್ರಪತಿ ಶಾಹು ಮಹಾರಾಜ್ ಸರ್ಕಾರಿ ವೈದ್ಯಕೀಯ ಕಾಲೇಜಿನ ಕಾರ್ಡಿಯಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಅಕ್ಷಯ್ ಅಶೋಕ್ ಬಫ್ನಾ ತಿಳಿಸಿದ್ದಾರೆ.

ರೋಗಿಯ ಆತಂಕಕ್ಕೆ ಕಾರಣವೇನು?
70% ಅಥವಾ 90% ರಷ್ಟು ರಕ್ತನಾಳದ ತಡೆ (Blockage) ಇರುವುದನ್ನು ತೋರಿಸುವ ಆಂಜಿಯೋಗ್ರಾಮ್ ವರದಿಯನ್ನು ಕಂಡಾಗ, ರೋಗಿಗಳು ಸಹಜವಾಗಿಯೇ ತಮ್ಮ ಚಿಕಿತ್ಸಕ ಹೃದ್ರೋಗ ತಜ್ಞರನ್ನೇ ಹೆಚ್ಚು ಅವಲಂಬಿಸುತ್ತಾರೆ. ಸ್ಟೆಂಟ್ ಅಳವಡಿಕೆಯು ಜೀವಿತಾವಧಿಯನ್ನು ಹೆಚ್ಚಿಸುತ್ತದೆಯೇ, ಹೃದಯಾಘಾತವನ್ನು ತಡೆಯುತ್ತದೆಯೇ, ರೋಗಲಕ್ಷಣಗಳಿಂದ ಉಪಶಮನ ನೀಡುತ್ತದೆಯೇ ಅಥವಾ ಉತ್ತಮ ವೈದ್ಯಕೀಯ ಚಿಕಿತ್ಸೆಯ ಹೊರತಾಗಿ ಅದರಿಂದ ಹೆಚ್ಚಿನ ಪ್ರಯೋಜನವಿಲ್ಲವೇ ಎಂಬುದನ್ನು ತಿಳಿಯಲು ಅವರು ವೈದ್ಯರಿಂದ ಮಾಹಿತಿ ನಿರೀಕ್ಷಿಸುತ್ತಾರೆ ಎಂದು ಡಾ. ರಾಯ್ ವಿವರಿಸುತ್ತಾರೆ.
ಇಂತಹ ಸಂದರ್ಭಗಳಲ್ಲಿ ಸ್ಟೆಂಟ್‌ಗಳ ಅತಿಯಾದ ಬಳಕೆಯು, ಜೀವ ರಕ್ಷಕವಾಗಿರುವ ಚಿಕಿತ್ಸಾ ವಿಧಾನವೊಂದಕ್ಕೆ ಕೆಲವೊಮ್ಮೆ ಕೆಟ್ಟ ಹೆಸರು ಬರುವಂತೆ ಮಾಡಿದೆ. ‘ಇತ್ತೀಚಿನ ದಿನಗಳಲ್ಲಿ ವಿಮಾ ಯೋಜನೆಗಳ ವ್ಯಾಪಕ ಲಭ್ಯತೆಯಿಂದಾಗಿ ಈ ಪ್ರವೃತ್ತಿ ಹೆಚ್ಚಾಗಿದೆ. ದುರದೃಷ್ಟವಶಾತ್, ಇದು ಕೆಲವೊಮ್ಮೆ ತದ್ವಿರುದ್ಧವಾದ ಮತ್ತು ಅಪಾಯಕಾರಿ ಪರಿಣಾಮಗಳಿಗೆ ಎಡೆಮಾಡಿಕೊಡುವುದನ್ನು ನಾವು ಕಂಡಿದ್ದೇವೆ. ತೀವ್ರ ಹೃದಯಾಘಾತದ ಸಂದರ್ಭದಲ್ಲೂ ರೋಗಿಗಳು ಸ್ಟೆಂಟ್ ಅಳವಡಿಸಿಕೊಳ್ಳಲು ನಿರಾಕರಿಸುತ್ತಾರೆ. ಅಂತಹ ಸಮಯದಲ್ಲಿ ಸಕಾಲದಲ್ಲಿ ಆಂಜಿಯೋಪ್ಲಾಸ್ಟಿ ಮಾಡಿಸಿಕೊಳ್ಳುವುದರಿಂದ ಜೀವವನ್ನು ಉಳಿಸಬಹುದು ಮತ್ತು ಹೃದಯದ ಸ್ನಾಯುಗಳನ್ನು ರಕ್ಷಿಸಬಹುದು ಎಂದು ಅವರು ಹೇಳುತ್ತಾರೆ.
ಶಸ್ತ್ರಚಿಕಿತ್ಸಕ ಮತ್ತು ಸಾರ್ವಜನಿಕ ಆರೋಗ್ಯ ಕಾರ್ಯಕರ್ತರಾದ ಡಾ. ಎಸ್. ಗಣಪತಿ ಅವರು ರೋಗಿಗಳಲ್ಲಿ ಆತಂಕವನ್ನು ಉಂಟುಮಾಡುವ ಮತ್ತೊಂದು ಅಂಶದ ಬಗ್ಗೆ ತಿಳಿಸಿದ್ದಾರೆ. ಸೂಕ್ತ ವೈದ್ಯಕೀಯ ಹಿನ್ನೆಲೆ ಅಥವಾ ಸಂದರ್ಭವಿಲ್ಲದೆ ಹೃದಯ ಸಂಬAಧಿ ಪರೀಕ್ಷೆಗಳ ಫಲಿತಾಂಶಗಳನ್ನು ಅರ್ಥೈಸಿಕೊಳ್ಳುವುದು ಕಷ್ಟ. ಅವರ ಪ್ರಕಾರ, ವಯಸ್ಸಿಗೆ ಅನುಗುಣವಾಗಿ ಇಸಿಜಿ (ECG) ವರದಿಯಲ್ಲಿನ ಸಾಮಾನ್ಯ ವ್ಯತ್ಯಾಸಗಳೂ ಬದಲಾಗಬಹುದು. 30 ವರ್ಷ ವಯಸ್ಸಿನ ವ್ಯಕ್ತಿಯ ಇಸಿಜಿ ವರದಿಯು 50 ವರ್ಷ ವಯಸ್ಸಿನವರ ವರದಿಗಿಂತ ಭಿನ್ನವಾಗಿರುತ್ತದೆ. ಇಸಿಜಿ ಅಲೆಗಳಲ್ಲಿನ ವ್ಯತ್ಯಾಸಗಳನ್ನು ಸರಿಯಾಗಿ ವಿವರಿಸದಿದ್ದಾಗ ಅವು ಕೆಲವೊಮ್ಮೆ ರೋಗಿಯ ಆತಂಕವನ್ನು ಹೆಚ್ಚಿಸಬಹುದು ಎಂದು ಹೇಳುತ್ತಾರೆ.

ಇಂತಹ ಆತಂಕವು ರೋಗಿಗಳನ್ನು ಸೂಕ್ತವಲ್ಲದ ವೈದ್ಯಕೀಯ ಸಲಹೆಗಳಿಗೆ ಗುರಿಯಾಗುವಂತೆ ಮಾಡಬಹುದು. ಕೆಲವರು ವೈದ್ಯರು ಇಂತಹ ಆತಂಕಗಳನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಬಹುದು. ಆದ್ದರಿಂದ, ಪರೀಕ್ಷಾ ವರದಿಯಲ್ಲಿ ಅಸಹಜ ಅಂಶಗಳು ಕಂಡುಬಂದ ಮಾತ್ರಕ್ಕೆ ಆಂಜಿಯೋಪ್ಲಾಸ್ಟಿಯಂತಹ ಶಸ್ತ್ರಚಿಕಿತ್ಸಾ ವಿಧಾನ (ಇನ್ವೇಸಿವ್ ಪ್ರೊಸೀಜರ್) ಬೇಕೇ ಬೇಕು ಎಂದರ್ಥವಲ್ಲ ಎಂಬುದನ್ನು ರೋಗಿಗಳು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ ಎನ್ನುತ್ತಾರೆ ವೈದ್ಯರು.
ಯಾರಿಗೆ ಸ್ಟಂಟ್ ಅತ್ಯಗತ್ಯ?
ಆಂಜಿಯೋಪ್ಲಾಸ್ಟಿ ಅಗತ್ಯವಿದೆಯೇ ಎಂಬುದು ಪ್ರಶ್ನೆಯಲ್ಲ. ಲಭ್ಯವಿರುವ ವೈದ್ಯಕೀಯ ಪರೀಕ್ಷೆಗಳ ಆಧಾರದ ಮೇಲೆ, ನಿರ್ದಿಷ್ಟ ರೋಗಿಗೆ ನಿರ್ದಿಷ್ಟ ಸಮಯದಲ್ಲಿ ಆಂಜಿಯೋಪ್ಲಾಸ್ಟಿ ಅಗತ್ಯವಿದೆಯೇ ಎಂಬುದು ಪ್ರಶ್ನೆಯಾಗಿದೆ. ಚಿಕಿತ್ಸೆಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಭಾಗವಹಿಸಲು ರೋಗಿಗಳನ್ನೂ ಪ್ರೋತ್ಸಾಹಿಸಬೇಕು. ಒಂದು ನಿರ್ದಿಷ್ಟ ಚಿಕಿತ್ಸಾ ವಿಧಾನವನ್ನು ಏಕೆ ಶಿಫಾರಸು ಮಾಡಲಾಗುತ್ತಿದೆ? ಅದಕ್ಕೆ ಪರ್ಯಾಯಗಳೇನಿವೆ? ಅದರಿಂದ ನಿರೀಕ್ಷಿತ ಪ್ರಯೋಜನವೇನು ಮತ್ತು ಅದರಲ್ಲಿರುವ ಅಪಾಯಗಳೇನು ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು ಎನ್ನುತ್ತಾರೆ ಡಾ. ಬಫ್ನಾ. ಸ್ಟೆಂಟ್‌ಗಳನ್ನು ಬಳಸುವುದನ್ನು ತಪ್ಪಿಸಿ ಅಂತ ಸಂದೇಶ ನೀಡಬಾರದು. ಬದಲಿಗೆ ಸೂಕ್ತ ರೋಗಿಗೆ ಸೂಕ್ತ ಸಮಯದಲ್ಲಿ ಸ್ಟೆಂಟ್ ಅಳವಡಿಸುವಂತಿರಬೇಕು. ಇದನ್ನು ಸಾಧಿಸಲು ಹೆಚ್ಚಿನ ಸಾರ್ವಜನಿಕ ಜಾಗೃತಿ, ಜಂಟಿ ನಿರ್ಧಾರ ಕೈಗೊಳ್ಳುವಿಕೆ ಮತ್ತು ಸಾಕ್ಷ್ಯಾಧಾರಿತ ಸೂಚನೆಗಳ ಪಾಲನೆಯ ಕುರಿತಾದ ಪರಿಶೀಲನೆ (ಆಡಿಟ್) ಅತ್ಯಗತ್ಯ ಎನ್ನುತ್ತಾರೆ ಡಾ. ರಾಯ್.

