– ನೈಸ್ ಕಂಪನಿ ಮಾಲೀಕ ನಿಮ್ಮನ್ನ ಟ್ರ್ಯಾಪ್ ಮಾಡೋಕೆ ಬಂದಿದ್ರಾ? ಅಂತ ಪ್ರಶ್ನೆ
ನವದೆಹಲಿ: ನೈಸ್ ಅಕ್ರಮಗಳ ದಾಖಲೆ ಬಿಡುಗಡೆಯಿಂದ ಸಿಎಂಗೆ ಮುಜುಗರ ಆಗಿದೆ. ಅದಕ್ಕಾಗಿ ಟ್ರ್ಯಾಪ್ ಆರೋಪದಂತಹ ಸುದ್ದಿಗಳನ್ನ ಹರಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ತಿರುಗೇಟು ನೀಡಿದರು.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವರು ʻನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಲು ಯತ್ನಿಸಿದ್ದರುʼ ಎನ್ನುವ ಡಿಕೆ ಶಿವಕುಮಾರ್ (DK Shivakumar) ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಮುಖ್ಯಮಂತ್ರಿ ಹೇಳಿಕೆ ನೋಡಿ ಎಂತಾ ಮುಖ್ಯಮಂತ್ರಿ ಬಂದರೂ ಅಂತಾ ಚರ್ಚೆ ಆಗ್ತಿದೆ. ಕ್ಯಾಬಿನೆಟ್ ನಲ್ಲಿ ಚರ್ಚೆ ಆಗಿದ್ದು ಮಾಧ್ಯಮದಲ್ಲಿ ಬರಲು ಕಾರಣ ಏನು? ನೈಸ್ ಸುದ್ದಿ ಮುನ್ನಲೆಗೆ ಬರಬಾರದು ಎನ್ನುವುದು ಅವರ ಉದ್ದೇಶ. ನೈಸ್ ಅಕ್ರಮಗಳ (NICE Scam) ದಾಖಲೆ ಬಿಡುಗಡೆಯಿಂದ ಸಿಎಂಗೆ ಮುಜುಗರವಾಗಿದೆ. ಅದಕ್ಕಾಗಿ ಈ ರೀತಿಯ ಸುದ್ದಿಗಳನ್ನ ಹರಡುತ್ತಿದ್ದಾರೆ ಎಂದು ಕುಟುದರು.

ಯಾರು ಆ ಪಿತಾಮಹಾ?
ನನ್ನನ್ನ ಟ್ರ್ಯಾಪ್ ಮಾಡುತ್ತಿದ್ದಾರೆ, ಫೋಟೊ ಇದ್ದಾವೆ ಅಂತಾರೆ. ಪಿತಾಮಹ ಯಾರು ಅಂತಾ ಗೊತ್ತಿದೆ ಎಂದಿದ್ದಾರೆ. ಯಾರು ಆ ಪಿತಾಮಹ ಜನರ ಮುಂದೆ ಇಡಿ. ಸಿದ್ದರಾಮಯ್ಯ ಅವರನ್ನ ಟ್ರ್ಯಾಪ್ ಮಾಡಲು ಯತ್ನಿಸಿದ್ರು ಅನ್ನೊ ಸುದ್ದಿ ಇದೆ. ಯಾಕೆ ಇದನ್ನೆಲ್ಲ ಮುಚ್ಚಿಡುತ್ತಿದ್ದೀರಿ. ನನಗೂ ಟ್ರ‍್ಯಾಪ್ ಮಾಡುವ ಯತ್ಬ ನಡೆದಿದೆ ಅನ್ನೋದಾದ್ರೆ ಯಾಕೆ ಅವರನ್ನ ಹಿಡಿಲಿಲ್ಲ, ಕಂಡು ಕಂಡು ಯಾಕೆ ಬಿಟ್ಟಿರಿ. ನೈಸ್ ಕಂಪನಿ ಮಾಲೀಕ ನಿಮ್ಮನ್ನ ಭೇಟಿ ಮಾಡಲು ಬಂದಿದ್ದ ದೃಶ್ಯ ನೋಡಿದೆ. ಅವರೂ ನಿಮ್ಮನ್ನ ಟ್ರ‍್ಯಾಪ್ ಮಾಡಲು ಬಂದಿದ್ದಾರಾ? ಕುಂಬಳಕಾಯಿ ಕಳ್ಳರಂತೆ ಅವರೇ ವರ್ತಿಸುತ್ತಿದ್ದಾರೆ. ಅವರ ಬಳಿ ಇದು ತನಿಖೆಯಾಗಬೇಕು, ಯಾರು ಪಿತಾಮಹಾ? ರಾಜ್ಯಪಾಲರ ಭೇಟಿ ಮಾಡಿದ ನಿಯೋಗದಲ್ಲಿ ಒಬ್ಬರು ಇದರ ಪಿತಾಮಹ ಎಂದಿದ್ದಾರೆ. ಅವರು ಯಾರು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಟ್ರ‍್ಯಾಪ್ ಮಾಡಲು ಬಂದವರನ್ನ ಯಾಕೆ ಬಿಟ್ಟರು?
ಸಿಎಂ ಭೇಟಿಗೆ ಬಂದ್ರೆ ಫೊನ್ ಹೊರಗಿಟ್ಟು ಹೋಗಬೇಕು. ಟ್ರ‍್ಯಾಪ್ ಮಾಡಲು ಬಂದವರನ್ನ ಯಾಕೆ ಬಿಟ್ಟರು? ಕಾಲ ಬಂದಾಗ ದಾಖಲೆ ಬಿಡ್ತಾರಂತೆ. ಕೆಲಸ ಮಾಡಲು ಆಗದೇ, ಅಕ್ರಮ ಬಯಲಿಗೆ ಎಳೆದಾಗ ಇಂತಹ ಸುದ್ದಿ ಬಿಡ್ತಾರೆ. ಇದು ಅವರಿಗೆ ಸುತ್ತಿಕೊಳ್ಳುತ್ತದೆ, ಕುಂಬಳಕಾಯಿ ಕಳ್ಳತನ ಕಥೆ ಸಿಎಂ ಹೆಗಲ ಮೇಲೆ ಕೂತಿದೆ. ರಮೇಶ್ ಜಾರಕಿಹೊಳಿ ಟ್ರ‍್ಯಾಪ್ ಮಾಡಿದ್ದರು ಯಾರು? ಸತೀಶ್, ರಾಜಣ್ಣ ಅವರನ್ನ ಸೈಲೆಂಟ್ ಮಾಡಿದ್ದರು ಯಾರು? 134 ಮಂದಿ ಶಾಸಕರು ಇದ್ದಾರೆ ಸರ್ಕಾರ ಅಸ್ಥಿರ ಯಾಕೆ ಆಗುತ್ತೆ. ಬಿಜೆಪಿ ಜೆಡಿಎಸ್ ನಲ್ಲಿ ಬೆಂಬಲ ಕೊಡೋರು ಇದಾರೆ ಅಂತಾರೆ. ನಮ್ಮಗೆ ಈಗ ಸರ್ಕಾರ ಅಸ್ಥಿರ ಮಾಡುವ ಶಕ್ತಿ ಇದಿಯಾ? ಸುಳ್ಳು ಹೇಳಿಕೊಂಡು ಎಷ್ಟು ದಿನ ರಾಜಕೀಯ ಮಾಡ್ತಿರಿ? ರಾಜಕೀಯ ವಾತಾವರಣ ಹಾಳು ಮಾಡುವ ಕೆಲಸ ನಡೆಯುತ್ತಿದೆ ವಾಗ್ದಾಳಿ ನಡೆಸಿದರು.
ಈ ಹಿಂದೆಯೂ ನನ್ನನ್ನು ಒಂದು ಮಾಧ್ಯಮದವರು ಟ್ರ್ಯಾಪ್ ಮಾಡಲಿಕ್ಕೆ ಬಂದು ಸ್ವತಃ ನನಗೇ ಸಿಕ್ಕಿ ಹಾಕಿಕೊಂಡರು ಎಂದು ಹೇಳಿದ್ದೀರಿ. ಮೊನ್ನೆ ನೂರು ದಿನದ ಮಾಧ್ಯಮಗೋಷ್ಟಿಯಲ್ಲಿ ಕೂಡ ಆ ಮಾತನ್ನು ಪುನರುಚ್ಚಾರ ಮಾಡಿದ್ದೀರಿ. ಇವಾಗ ಯಾರು ಬಂದಿದ್ದರು? ಯಾವ ವ್ಯಕ್ತಿ ಬಂದಿದ್ದರು? ಯಾವ ಪಿತಾಮಹ ಬಂದಿದ್ದರು? ನೀವಿದ್ದ ಜಾಗದಲ್ಲಿ ಸಿಸಿ ಕ್ಯಾಮೆರಾ ಇರಬೇಕಲ್ಲಾ? ಎಲ್ಲವನ್ನೂ ತೆಗೆಸಿ. ನಿಮ್ಮ ಹಳೆಯ ಚಾಳಿ ಬಗ್ಗೆ ಜನರ ಮೇಲೆ ಹೇಳಿ ಸ್ಟಂಟ್ ಮಾಡುತ್ತಿದ್ದೀರಿ. ಇದು ಹೇಗಿದೆ ಎಂದರೆ ಗುರುವಿಗೆ ತಿರುಮಂತ್ರದ ತರಹ ಇದೆ. ಯಾರು ಅವರು ಅಂತ ಜನಗಳ ಮುಂದೆ ಹೇಳಿ ಎಂದು ಕೇಂದ್ರ ಸಚಿವರು ಸವಾಲು ಹಾಕಿದರು.
ಈ ಹಿಂದೆ ರಮೇಶ್ ಜಾರಕಿಹೊಳಿ ಅವರನ್ನು ಟ್ರ್ಯಾಪ್ ಮಾಡುವ ಕೆಲಸ ಮಾಡಿದ್ದು ಯಾರು? ಮಾಜಿ ಮಂತ್ರಿ ಕೆ.ಎನ್. ರಾಜಣ್ಣ ಅವರು ವಿಧಾನಸಭೆಯಲ್ಲೇ 40-48 ಜನರ ಟ್ರ್ಯಾಪ್ ಬಗ್ಗೆ ಅಸ್ಲೆಂಬಿಯಲ್ಲಿ ಮಾತನಾಡಿದ್ದರು. ನಮ್ಮ ಮಂತ್ರಿಮಂಡಲದ ಮಂತ್ರಿಯೇ ಮೂಲಪುರುಷನೇ ಇದ್ದಾನೆ ಎಂದು ರಾಜಣ್ಣ ಹೇಳಿದ್ದರು. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಯಾವ ರೀತಿ ಮುಗಿಸಿದಿರಿ ಎನ್ನುವುದನ್ನು ನಾನು ಬಲ್ಲೆ. ಸತ್ಯ ಹೇಳಿ, ಇದೆಲ್ಲಾ ನಿಮ್ಮದೇ ಕೈವಾಡ ಅಲ್ಲವೇ? ಎಂದು ಡಿಕೆಶಿಯನ್ನು ನೇರವಾಗಿ ಪ್ರಶ್ನಿಸಿದರು.
ಸ್ಟಿಂಗ್ ಯಾರು ಮಾಡಲು ಬಂದರು ಎಂಬುದನ್ನು ಮುಖ್ಯಮಂತ್ರಿ ಹೇಳಲೇಬೇಕಾಗುತ್ತದೆ. ಅವರು ಹೇಳಿಕೆ ಕೊಟ್ಟು ಸುಮ್ಮನೆ ಇರೋಕೆ ಆಗೋದಿಲ್ಲ. ಮುಖ್ಯಮಂತ್ರಿ ವಿರುದ್ಧವೇ ಟ್ರ್ಯಾಪ್ ನಡೆಯುತ್ತಿದೆ ಎಂದರೆ ಸಾಮಾನ್ಯ ವಿಷಯವಲ್ಲ. ಇದೆಲ್ಲಾ ತನಿಖೆಗೆ ಒಳಪಡಬೇಕು. ರಾಜ್ಯಪಾಲರನ್ನು ಭೇಟಿಗೆ ತೆರಳಿದ್ದವರಲ್ಲಿ ಒಬ್ಬರು ಇದ್ದಾರೆ ಎಂದು ಹೇಳಿದ್ದೀರಾ? ಯಾರು ಅವರು? ಎಂಬುದನ್ನು ಅವರು ಹೇಳಬೇಕಾಗುತ್ತದೆ ಎಂದು ಕೇಂದ್ರ ಒತ್ತಾಯಿಸಿದರು.
ಈ ರಾಜ್ಯದ ಸಿಎಂಗೆ ಏನಾದರೂ ಆ ಸ್ಥಾನದ ಮಾರ್ಯಾದೆ ಉಳಿಸಬೇಕೆಂದಿದ್ದರೆ ಆ ಟ್ರ್ಯಾಪ್, ಸ್ಟಿಂಗ್ ಬಗ್ಗೆ ರಾಜ್ಯದ ಜನತೆಗೆ ಉತ್ತರ ಕೊಡಬೇಕು. ಸಂಪುಟದಲ್ಲಿ ನಡೆದ ಚರ್ಚೆ ಬಗ್ಗೆ ಯಾರ ಹೊರಗಡೆ ಬಿಟ್ಟಿದ್ದು, ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದ್ದು ಹೊರ ಬಂದಿಲ್ಲ. ಸ್ಟಿಂಗ್ ಬಗ್ಗೆ ಎಚ್ಚರಿಕೆ ಕೊಟ್ಟಿದ್ದು ಹೊರ ಬಂದಿದೆ. ನಿಮ್ಮನ್ನ ಸ್ಟಿಂಗ್ ಮಾಡಲು ಬಂದವರನ್ನು ಏತಕ್ಕೆ ಕಳಿಸಿದ್ದೀರಿ? ಯಾಕೆ ಬಿಟ್ಟು ಕಳಿಸಿದಿರಿ? ನಿಮ್ಮ ಭೇಟಿಗೆ ಬಂದರೆ ಪೋನ್ ಗಳನ್ನು ಹೊರಗೆ ಇಡಿಸಿ ಒಳಗಡೆ ಕರೆಸಿಕೊಳ್ತಿರಾ! ಸ್ಟಿಂಗ್ ಮಾಡಲು ಬಡವರನ್ನು ಅರೆಸ್ಟ್ ಮಾಡದೆ ನಿಮ್ಮ ಅಧಿಕಾರಿಗಳು ಯಾಕೆ ಬಿಟ್ಟಿರಿ? ನೀವು ಕೆಲಸ ಮಾಡಲಿಕ್ಕಾಗದೆ ನಿಮ್ಮ ಆಕ್ರಮಗಳನ್ನು ಬಯಲಿಗೆಳೆದಾಗ ಅದನ್ನು ಮುಚ್ಚಿಡಲಿಕ್ಕೆ ಈ ಕೆಲಸ ಮಾಡುತ್ತಿದ್ದೀರಿ. ಇದು ತನಿಖೆಯಾದರೆ ನಿಮಗೆ ಸುತ್ತಿಕೊಳ್ಳುತ್ತದೆ. ನಿಮ್ಮ ಬೆನ್ನು ನಿಮಗೆ ಕಾಣಲ್ಲ, ಇದರ ಮೂಲ ಪಿತಾಮಹ ಯಾರು ಅಂತಾ ಎಲ್ಲರಿಗೂ ಗೊತ್ತಾಗುತ್ತದೆ. ಈ ರೀತಿಯ ನಾಟಕ ಬಿಟ್ಟು ಸತ್ಯಾಂಶ ಹೊರಗಡೆ ಇಡಿ, ಸರಿಯಾಗಿ ತನಿಖೆ ಮಾಡಿ ಎಂದು ಸಚಿವರು ಸವಾಲು ಹಾಕಿದರು.
ಇನ್ನೂ ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯೆ, ಇಂಜಿನಿಯರ್ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಅಧಿಕಾರಿಗಳು ತಂದು ಕೊಟ್ಟ ಪೆನ್ ಡ್ರೈವ್ ತೋರಿಸಿದ್ದೇನೆ. ಇನ್ಯಾವುದೊ ಪೆನ್‌ಡ್ರೈವ್ ತೋರಿಸಿಲ್ಲ. ಕೆಪಿಎಸ್‌ಸಿಯಲ್ಲಿ 2024ರ ನೇಮಕಾತಿಗೆ ಸಹಿ ಹಾಕಿದ್ದಕ್ಕೆ ಉತ್ತರ ಕೊಟ್ಟಿಲ್ಲ. ಗೃಹ ಸಚಿವರು ನೈತಿಕತೆ ಬಗ್ಗೆ ಪ್ರಶ್ನೆ ಮಾಡ್ತಾರೆ, ನಾನು ಟ್ರಸ್ಟ್ ಮಾಡಿಕೊಂಡು ಸರ್ಕಾರದ ಭೂಮಿ ಹೊಡೆದಿಲ್ಲ. ಬುದ್ಧನ ಹೆಸರಿನಲ್ಲಿ ಏನೇಲ್ಲ ಅಕ್ರಮ ಮಾಡಿದ್ದೀರಿ? ನನ್ನ ನೈತಿಕತೆ ಪ್ರಶ್ನೆ ಮಾಡುವ ಬದಲು ಉತ್ತರ ಕೊಡಿ ಎಂದು ಸವಾಲು ಹಾಕಿದರು.
ಸಿದ್ದಾರ್ಥ ಟ್ರಸ್ಟ್ ಅಕ್ರಮವಾಗಿ ಕುಟುಂಬದ ವ್ಯವಹಾರ ನಡೆಯುತ್ತಿದೆ. ಹೈಕೋರ್ಟ್ ಆದೇಶ ತಡೆಯುವ ಕೆಲಸ ಆಯ್ತು. ನಮ್ಮ ಮನೆ ವ್ಯವಹಾರ ಸರಿಪಡಿಸಿಕೊಳ್ಳುವುದು ನಮ್ಮಗೆ ಗೊತ್ತಿದೆ. ನಿಮ್ಮ ಕಥೆ ಏನು ಹೇಳಿ? ಎಂದು ಸಚಿವ ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡಿದರು.

