ಬೆಂಗಳೂರು: ಕೇವಲ ಪ್ರಚಾರ ಮತ್ತು ಶೋ ಮಾಡುವುದಕ್ಕಾಗಿ ತಲೆಯಲ್ಲಿ ಬುದ್ಧಿ ಇಲ್ಲದವರು ನನ್ನ ವಿರುದ್ಧ ಈ ರೀತಿ ಸುಳ್ಳು ದೂರು ನೀಡಿದ್ದಾರೆ ಎಂದು ಮಾಜಿ ಶಾಸಕಿ ಸೌಮ್ಯ ರೆಡ್ಡಿ(Sowmya Reddy) ವಿರುದ್ದ ಜಯನಗರ ಶಾಸಕ ರಾಮಮೂರ್ತಿ (CK Ramamurthy) ಕಿಡಿಕಾರಿದ್ದಾರೆ.
ಮತದಾರರ ಪಟ್ಟಿಯ ಫಾರ್ಮ್-7 ಅಕ್ರಮದ ಹೆಸರಿನಲ್ಲಿ ತಮ್ಮ ಹಾಗೂ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಿದ ಬಗ್ಗೆ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ಕುರಿತು ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದರು.
ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬರೋಬ್ಬರಿ 8 ಸಾವಿರ ನಕಲಿ ಹಾಗೂ ಡಬಲ್ ಎಂಟ್ರಿ ಮತದಾರರಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ನಾವೇ ಮೊದಲಿಗೆ ಚುನಾವಣಾ ಆಯೋಗಕ್ಕೆ ಅಧಿಕೃತ ದೂರು ನೀಡಿದ್ದೆವು. ಹೊಸ ಮತದಾರರ ಪಟ್ಟಿಯಲ್ಲೂ ಸತ್ತವರ ಹೆಸರುಗಳು ಹಾಗೇ ಇವೆ. ಹಾಗಾದರೆ ಅವರು ಸ್ಮಶಾನದಿಂದ ಎದ್ದುಬಂದು ಫಾರ್ಮ್ಗೆ ಸಹಿ ಮಾಡಿದ್ರಾ? ಈ ಅಕ್ರಮಗಳನ್ನು ನಾವು ಪ್ರಶ್ನಿಸಬಾರದೇ ಎಂದು ಖಾರವಾಗಿ ಪ್ರಶ್ನಿಸಿದರು. ಇದನ್ನೂ ಓದಿ: ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ – ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ಬಿಜೆಪಿ, ಜೆಡಿಎಸ್ ದೂರು
ದೂರು ಕೊಟ್ಟಿರುವುದನ್ನು ನಾನು ಮಾಧ್ಯಮಗಳಲ್ಲೇ ನೋಡಿದ್ದೇನೆ. ನಮ್ಮ ಇಬ್ಬರು ಕಾರ್ಯಕರ್ತರ ಮೇಲೆ ಸೌಮ್ಯಾ ರೆಡ್ಡಿ ದೂರು ದಾಖಲಿಸಿದ್ದಾರೆ. ಅವರಿಗೆ ನಿಜಕ್ಕೂ ದೂರು ನೀಡುವ ಉದ್ದೇಶವಿದ್ದರೆ ಪೊಲೀಸ್ ಠಾಣೆ ಬದಲು ನೇರವಾಗಿ ಚುನಾವಣಾ ಆಯೋಗಕ್ಕೆ ಹೋಗಿ ದೂರು ಕೊಡಬೇಕಿತ್ತು ಎಂದರು.
ಒಂದು ಹೆಣ್ಣು ಮಗುವಿಗೆ ಬ್ಲ್ಯಾಕ್ಮೇಲ್ ಮಾಡಿ, ಹೆದರಿಸಿ ವಿಡಿಯೋ ಮಾಡಿಕೊಂಡಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹಿರಿಯರಿದ್ದಾರೆ, ಅವರೇ ಇದಕ್ಕೆ ನ್ಯಾಯ ಕೊಡಿಸಬೇಕು. ನಾವು ಸುಮ್ಮನೆ ಕೂರುವುದಿಲ್ಲ, ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ತಿಳಿಸಿದರು.
ನಾವು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಧಿಕೃತ ದೂರನ್ನು ಮಾಜಿ ಕಾರ್ಪೊರೇಟರ್ ಒಬ್ಬರು ಬಿಡುಗಡೆ ಮಾಡಿದ್ದಾರೆ. ಆಯೋಗಕ್ಕೆ ನಾವು ಗೌಪ್ಯವಾಗಿ ನೀಡಿದ ದೂರಿನ ಪ್ರತಿ ಕಾಂಗ್ರೆಸ್ ನಾಯಕರಿಗೆ ಹೇಗೆ ಸಿಕ್ಕಿತು? ಅಧಿಕಾರಿಗಳು ಇದನ್ನು ಹೇಗೆ ಸೋರಿಕೆ ಮಾಡಿದರು? ಈ ಬಗ್ಗೆಯೂ ಸೂಕ್ತ ತನಿಖೆ ಆಗಬೇಕು ಎಂದು ಅವರು ಒತ್ತಾಯಿಸಿದರು.

