ಹಾಸನ: ದೇವಿಗೆರೆಯಲ್ಲಿ (Devigere) ಗಣೇಶ ವಿಸರ್ಜನೆ (Ganesha Immersion) ವೇಳೆ ಯಾವುದಾದರೂ ಅವಘಡ ಸಂಭವಿಸಿದ್ದರೆ ಜಿಲ್ಲಾಡಳಿತ ಸಮಸ್ಯೆಗೆ ಸಿಲುಕುತ್ತಿತ್ತು. ಅದರ ಹೊಣೆಯನ್ನು ಯಾರು ಹೊರುತ್ತಿದ್ದರು? ದೇವರ ದಯೆಯಿಂದ ಏನು ಆಗಿಲ್ಲ. ತೊಂದರೆ ಆದಾಗ ಮಾತ್ರ ಕಾಯ್ದೆಗಳನ್ನು ತೋರಿಸುತ್ತಾರೆ. ಅಲ್ಲಿಯವರೆಗೂ ಕಣ್ಮುಚ್ಚಿ ಕುಳಿತು ಕೊಂಡಿರುತ್ತಾರೆ. ಏನಾದ್ರೂ ಅವಘಡ ಆಗಿದ್ದರೆ ಯಾರು ಹೊಣೆ ಎಂದು ಹಾಸನ (Hassan) ಡಿಸಿ ಲತಾಕುಮಾರಿಯವರು (DC Lathakumari) ಅಸಮಾಧಾನ ಹೊರಹಾಕಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅವರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ, ದೇವಿಗೆರೆಯಲ್ಲಿ ಗಣಪತಿ ವಿಸರ್ಜನೆ ಮಾಡುವವರು ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ. ಏನಾದರೂ ಘಟನೆ ಆಗಿದ್ದರೆ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದರು? ಕಾಯ್ದೆಯಲ್ಲಿ ಇರುವುದನ್ನು ಫಾಲೋ ಮಾಡ್ತಿಲ್ಲ. ಏನಾದರೂ ಘಟನೆ ಆದರೆ ಮಾತ್ರ ಕಾನೂನು ಸುವ್ಯವಸ್ಥೆಯ ಮಾತು ಬರುತ್ತದೆ. ತಹಶೀಲ್ದಾರ್ ವರದಿ ಸೂಕ್ಷ್ಮವಾಗಿದೆ. ಅದನ್ನು ಪರಿಶೀಲಿಸಿ ಆದೇಶ ಕೊಡಬೇಕಿತ್ತು ಎಂದಿದ್ದಾರೆ. ಇದೇ ವೇಳೆ, ಕಳೆದ ವರ್ಷ ಮೊಸಳೆಹೊಸಳ್ಳಿಯಲ್ಲಿ ಗಣಪತಿ ಮೆರವಣಿಗೆ ವೇಳೆ ಟ್ರಕ್ ಹರಿದು 11 ಮಂದಿ ಮೃತಪಟ್ಟಿದ್ದನ್ನು ಅವರು ನೆನಪಿಸಿಕೊಂಡರು. ಇದನ್ನೂ ಓದಿ: ಹಾಸನ ದೇವಿಗೆರೆಯಲ್ಲಿ ಪೆಂಡಾಲ್ ಗಣಪತಿ ವಿಸರ್ಜನೆ – ಹಾಸನ ಎಸ್ಪಿಗೆ ಡಿಸಿ ನೋಟಿಸ್
ದೇವಿಗೆರೆ ಕೊಳಕ್ಕೆ ತನ್ನದೇ ಆದ ಇತಿಹಾಸ ಇದೆ. ಧಾರ್ಮಿಕವಾಗಿ ಪ್ರಸಿದ್ಧವಾದ ಸ್ಥಳವಾಗಿದೆ. ವಾರಾಹಿ, ಇಂದ್ರಾಣಿ, ಚಾಮುಂಡಿ ದೇವಿಗೆರೆಯಲ್ಲಿ ನೆಲೆಸಿದ್ದಾರೆ ಎಂಬ ನಂಬಿಕೆ ಇದೆ. ಅಷ್ಟೊಂದು ಪವಿತ್ರ ಸ್ಥಳವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಅದನ್ನು ಬಿಟ್ಟು ಬೇರೆ ಯಾವ ಉದ್ದೇಶವೂ ಇಲ್ಲ. ಮಹಾನಗರಪಾಲಿಕೆ ವತಿಯಿಂದ 35 ವಾರ್ಡ್ಗಳಲ್ಲಿ ಗಣಪತಿ ವಿಸರ್ಜನೆಗೆ ಅವಕಾಶ ಮಾಡಿಕೊಡಲಾಗಿತ್ತು. ಎಲ್ಲಿಯೂ ಸಮಸ್ಯೆ ಆಗಲಿಲ್ಲ ಎಂದು ತಿಳಿಸಿದ್ದಾರೆ.

ದೇವಿಗೆರೆಯಲ್ಲಿ ಗಣಪತಿ ವಿಸರ್ಜನೆ ಮಾಡುತ್ತಿದ್ದಾರೆ ಎಂದು ಅ.3 ರಂದು ತಹಶೀಲ್ದಾರ್ ಪತ್ರ ಬಂದಿತ್ತು. ರಸಾಯನಿಕಯುಕ್ತ, ಪಿಓಪಿ ಗಣಪತಿಗಳನ್ನು ನೀರಿಗೆ ಹಾಕುವಂತಿಲ್ಲ. ನಿಯಮ ಉಲ್ಲಂಘನೆ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ನಾನು ಕಾನೂನು ಅಷ್ಟೇ ಮಾತನಾಡುತ್ತಿದ್ದೇನೆ. ತಹಶೀಲ್ದಾರ್ ಪತ್ರ ನೋಡಿ ನನಗೆ ಬೇಸರ ಆಯ್ತು. ಕ್ರಮ ಕೈಗೊಳ್ಳಲು ಒಂದು ಆದೇಶವನ್ನು ಹೊರಡಿಸಿದೆ. ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೃತ್ಯ ಮಾಡಿಲ್ಲ. ಹಳ್ಳ, ಕೊಳ್ಳ, ಕಲ್ಯಾಣಿ ಉಳಿಸುವುದು ಎಲ್ಲರ ಜವಾಬ್ದಾರಿ ಎಂದು ಸ್ಪಷ್ಟನೆ ನೀಡಿದರು.
ಮುಜರಾಯಿ ತಹಶೀಲ್ದಾರ್, ತಹಶೀಲ್ದಾರ್, ಯಾವ ಅಧಿಕಾರಿಯಿಂದ ಅವರು ಅನುಮತಿ ಪಡೆದಿದ್ದಾರೆ? ಹೆಚ್ಚಿನ ಎತ್ತರದ ಗಣಪತಿಗಳನ್ನು ವಿಸರ್ಜನೆ ಮಾಡಲಾಗಿದೆ. ಯಾರಿಂದಲೂ ಅನುಮತಿ ಪಡೆದಿಲ್ಲ. ಗಣೇಶಮೂರ್ತಿ ಎಷ್ಟು ಎತ್ತರ, ಅಗಲ, ಯಾವುದರ ಬಗ್ಗೆ ಮಾಹಿತಿ ಹೇಳಿಲ್ಲ. ಗಣಪತಿ ಮೂರ್ತಿ ರಸಾಯನಿಕಯುಕ್ತ ಬಣ್ಣದಿಂದ ಕೂಡಿತ್ತು ಎಂದು ಹೇಳಿದ್ದಾರೆ.
ಇದು ಆಡಳೀತಾತ್ಮಕ ವಿಚಾರ. ಅವರು ಒಬ್ಬರು ಅಧಿಕಾರಿ, ಅವರದ್ದೇ ಆದ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಯಾವ ಅಧಿಕಾರಿಯ ಮೇಲೂ ನನಗೆ ವೈಯಕ್ತಿಕ ದ್ವೇಷ ಇಲ್ಲ. ಅವರ ಕೆಲಸ ಅವರು ಮಾಡಬೇಕು. ಭಿನ್ನಾಭಿಪ್ರಾಯ ಇರಲ್ಲ, ನಾನು ಆದೇಶ ಹೊರಡಿಸಿದ್ದನ್ನು ತಹಶೀಲ್ದಾರ್ ಆಗಲಿ ಇನ್ನೊಬ್ಬರಾಗಲಿ ಪಾಲನೆ ಮಾಡಬೇಕು ಎಂದು ಎಸ್ಪಿ ಶುಭನ್ವಿತಾ ಅವರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಅವಘಡ ಸಂಭವಿಸಿದಾಗ ಜನಪ್ರತಿನಿಧಿಗಳನ್ನು ದೂರುತ್ತಿದ್ದರೋ, ಅಧಿಕಾರಿಗಳನ್ನು ದೂರುತ್ತಿದ್ದರೋ? ಮೊದಲು ಅವರ ಪರ, ಇವರ ಪರ ನಿಲ್ತಿವಿ ಅಂತಾರೆ ಬರೀ ಮೌಖಿಕವಾಗಿ ಮಾತನಾಡಿದರೆ ಆಗಲ್ಲ. ಅವಘಡ ಸಂಭವಿಸಿದಾಗ ಅವರು ಯಾರದಾದರೂ ಪರ ಬರ್ತಾರಾ? ಲಿಖಿತವಾಗಿಯೇ ಕ್ರಮ ಕೈಗೊಳ್ಳಬೇಕು. ಸುರಕ್ಷತೆ ಬಗ್ಗೆ ಯಾರು ಕ್ರಮ ತೆಗೆದುಕೊಳ್ಳುತ್ತಿದ್ದರು ಎಂದು ಶಾಸಕ ಹೆಚ್.ಪಿ.ಸ್ವರೂಪ್ಪ್ರಕಾಶ್ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ.
ಹಾಸನ ಎಸ್ಪಿಗೆ ಡಿಸಿ ನೋಟಿಸ್
ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಗಣಪತಿ ವಿಸರ್ಜನೆಗೆ(Ganesha Immersion) ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ(SP Shubhanwita) ಅವರಿಗೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ(DC Lathakumari) ಕಠಿಣ ಪದಗಳನ್ನು ಬಳಸಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಈ ಬೆಳವಣಿಗೆ ಜಿಲ್ಲಾ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಯಾರಿಗೂ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ, ಬಡವರ ಪರವಾಗಿ ಕೆಲಸ ಮಾಡಮ್ಮ – ಹಾಸನ ಡಿಸಿ ಬೆಂಬಲಕ್ಕೆ ನಿಂತ ಡಿಕೆಶಿ

