– ಹಿಂದಿನ ಶುಲ್ಕವನ್ನೇ ಮುಂದುವರಿಸಲು ಪರಮೇಶ್ವರ್ ಸೂಚನೆ
ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರ (Droght) ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ರೈತರ ಹಿತಾಸಕ್ತಿಯನ್ನು ಪರಿಗಣಿಸಿ, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಮೋಜಿಣಿ (Mojini) ವ್ಯವಸ್ಥೆಯಡಿ ಸಾರ್ವಜನಿಕರಿಂದ ಸ್ವೀಕರಿಸಲಾಗುವ ವಿವಿಧ ಅಳತೆ ಅರ್ಜಿಗಳ ಪರಿಷ್ಕೃತ ಶುಲ್ಕವನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ (G Parameshwar) ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸರ್ಕಾರದ ಆದೇಶ ಸಂಖ್ಯೆ ಕಂಇ 170 ಎಸ್‌ಎಸ್‌ಸಿ 2026, ಬೆಂಗಳೂರು, 2026ರ ಸೆ.19ರ ಅನ್ವಯ, ಮೋಜಿಣಿ ವ್ಯವಸ್ಥೆಯಡಿ ಸ್ವೀಕರಿಸಲಾಗುವ ವಿವಿಧ ರೀತಿಯ ಅಳತೆ ಅರ್ಜಿಗಳ ಶುಲ್ಕ ಹಾಗೂ ಪರವಾನಗಿ ಪಡೆದ ಭೂಮಾಪಕರ ಸೇವಾ ಶುಲ್ಕವನ್ನು ಪರಿಷ್ಕರಿಸಿ, ಅ.1ರಿಂದ ಜಾರಿಗೆ ಬರುವಂತೆ ಆದೇಶಿಸಲಾಗಿತ್ತು. ಆದರೆ, ಪ್ರಸ್ತುತ ರಾಜ್ಯದ ವಿವಿಧ ಭಾಗಗಳಲ್ಲಿ ತೀವ್ರ ಬರ ಪರಿಸ್ಥಿತಿ ಇರುವುದರಿಂದ ರೈತರು ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಭೂಮಾಪನ ಮತ್ತು ಕಂದಾಯ ಸೇವೆಗಳ ಶುಲ್ಕ ಹೆಚ್ಚಳದಿಂದ ರೈತರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಬಾರದು ಎಂಬ ಉದ್ದೇಶದಿಂದ ಪರಿಷ್ಕೃತ ಶುಲ್ಕವನ್ನು ತಾತ್ಕಾಲಿಕವಾಗಿ ತಡೆಹಿಡಿಯುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಏಷ್ಯನ್ ಗೇಮ್ಸ್ ಪದಕ ವಿಜೇತೆ ಪೂವಮ್ಮಗೆ ಹೆಚ್‌ಡಿಕೆ ಸನ್ಮಾನ
ಮುಂದಿನ ಆದೇಶ ಹೊರಡಿಸುವವರೆಗೆ ಮೋಜಿಣಿ ಸೇವೆಗಳಿಗೆ ಸಂಬಂಧಿಸಿದಂತೆ ಅ.1ಕ್ಕೂ ಮೊದಲು ಚಾಲ್ತಿಯಲ್ಲಿದ್ದ ಶುಲ್ಕವೇ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಬರದಂತಹ ಸಂಕಷ್ಟದ ಸಂದರ್ಭದಲ್ಲಿ ರೈತರ ಹಿತಾಸಕ್ತಿಯೇ ಸರ್ಕಾರದ ಮೊದಲ ಆದ್ಯತೆ. ಈಗಾಗಲೇ ಹಲವು ರೀತಿಯ ಆರ್ಥಿಕ ಒತ್ತಡ ಎದುರಿಸುತ್ತಿರುವ ರೈತರ ಮೇಲೆ ಕಂದಾಯ ಇಲಾಖೆಯ ಸೇವೆಗಳ ಮೂಲಕ ಹೆಚ್ಚುವರಿ ಹೊರೆ ಬೀಳಬಾರದು. ಅದಕ್ಕಾಗಿ ಪರಿಷ್ಕೃತ ಶುಲ್ಕವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 4 ಗಂಟೆ, 51 ನಿಮಿಷ ಆಗಸದಲ್ಲೇ ಗಿರಕಿ – 30 ಟನ್ ಇಂಧನ ಖಾಲಿ ಮಾಡಿ ಬ್ರಿಟಿಷ್ ಏರ್‌ವೇಸ್ ವಿಮಾನ ಸೇಫ್ ಲ್ಯಾಂಡಿಂಗ್!
ರಾಜ್ಯದ ಬರ ಪರಿಸ್ಥಿತಿ ಹಾಗೂ ರೈತರ ಆರ್ಥಿಕ ಸ್ಥಿತಿಯನ್ನು ಮುಂದಿನ ದಿನಗಳಲ್ಲಿ ನಿರಂತರವಾಗಿ ಅವಲೋಕಿಸಲಾಗುವುದು. ಪರಿಸ್ಥಿತಿ ಸುಧಾರಿಸಿದ ಬಳಿಕ ಸೂಕ್ತ ಸಮಯದಲ್ಲಿ ಶುಲ್ಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಮರು ಆದೇಶ ಹೊರಡಿಸಲಾಗುವುದು. ರೈತರ ಹಿತಾಸಕ್ತಿ ಮತ್ತು ಸಾರ್ವಜನಿಕ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡೇ ಕಂದಾಯ ಇಲಾಖೆಯ ಎಲ್ಲಾ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಗಂಗೆಯಲ್ಲಿ ಪವಿತ್ರ ಸ್ನಾನ, ವೇದ ಮಂತ್ರ ಘೋಷ – ಮುಸ್ಲಿಂ ಧರ್ಮದ 6 ಮಂದಿ ಹಿಂದೂ ಧರ್ಮ ಸ್ವೀಕಾರ

