ತಿರುವನಂತಪುರಂ: ಚುನಾವಣಾ ಆಯೋಗದ (Election Commission of India) ವಿವಾದದ ನಡುವೆಯೇ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (CEC Gyanesh Kumar) ವಿರುದ್ಧದ 20 ವರ್ಷಗಳ ಹಿಂದಿನ ಪ್ರಕರಣವೊಂದರ ತನಿಖೆಗೆ ಕೇರಳಂನ (Keralam) ಕಾಂಗ್ರೆಸ್ (Congress) ಸರ್ಕಾರ ಆದೇಶಿಸಿದೆ.
ಮಲೇಷ್ಯಾ ಪ್ರಜೆಯ 20 ವರ್ಷಗಳ ಹಿಂದಿನ ಆತ್ಮಹತ್ಯೆ ಪ್ರಕರಣವನ್ನು ಕೇರಳಂ ಸರ್ಕಾರ ಕೆದಕಿದ್ದು, ಜ್ಞಾನೇಶ್ ಕುಮಾರ್ ವಿರುದ್ಧ ವಿಜಿಲೆನ್ಸ್ ತನಿಖೆಗೆ ಗೃಹ ಸಚಿವ ರಮೇಶ್ ಚೆನ್ನಿತ್ತಲ ಆದೇಶಿಸಿದ್ದಾರೆ. ಈ ವಿಚಾರವಾಗಿ, 20 ವರ್ಷಗಳ ಹಿಂದೆ ನಡೆಸಿದ್ದ ವಿಜಿಲೆನ್ಸ್ ತನಿಖೆಗೆ ಸಂಬಂಧಿಸಿದ ಕಡತಗಳ ಮಾಹಿತಿಯನ್ನು ಗೃಹ ಇಲಾಖೆ ಕೋರಿದೆ. ಇದನ್ನೂ ಓದಿ: ಜ್ಞಾನೇಶ್ ಕುಮಾರ್ ರಿಸೈನ್ ಮಾಡದಿದ್ದರೆ ಮೋದಿ ರಾಜೀನಾಮೆಗೆ ದೇಶವ್ಯಾಪಿ ಹೋರಾಟ: ಅಭಿಜಿತ್ ದೀಪ್ಕೆ
ಮಲೇಷ್ಯಾದ ಇಂಜಿನಿಯರ್ ಲೀ ಸೀ ಬೀನ್ (Malaysian engineer Lee See Been) ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ 2006ರಲ್ಲಿ ಜಾಗೃತ ದಳವು (Vigilance) ನಡೆಸಿದ ಪ್ರಾಥಮಿಕ ತನಿಖೆಗೆ ಸಂಬಂಧಿಸಿದ ಮಾಹಿತಿಯನ್ನು ಕೋರಲಾಗಿದೆ. ಈ ಪ್ರಕರಣದ ಮರು ತನಿಖೆ ನಡೆಸುವಂತೆ ಕೋರಿ ಕೆಪಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಎಂ.ವೇಣುಗೋಪಾಲ್ ಅವರು ದೂರು ಸಲ್ಲಿಸಿದ್ದರು.
2006ರ ಘಟನೆ ಏನು?
2006ರಲ್ಲಿ ಜ್ಞಾನೇಶ್ ಕುಮಾರ್ ಕೇರಳಂನ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಈ ವೇಳೆ ಎಂಸಿ ರಸ್ತೆ ಮೇಲ್ದರ್ಜೆಗೇರಿಸುವ ಅಭಿವೃದ್ಧಿ ಯೋಜನೆಯನ್ನು ಕೈಗೊಂಡಿದ್ದ PATI-BEL Consortium ಕಂಪನಿಯ ಮುಖ್ಯ ಯೋಜನಾ ವ್ಯವಸ್ಥಾಪಕ ಲೀ ಸೀ ಬೀನ್ ಮಲೇಷ್ಯಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸೂಸೈಡ್ ನೋಟ್‌ನಲ್ಲಿ ಯೋಜನೆಗೆ ಅನುದಾನ ಮಂಜೂರಾತಿಗೆ ಸಂಬಂಧಿಸಿದಂತೆ ಸರ್ಕಾರಿ ಅಧಿಕಾರಿಗಳಿಂದ ಎದುರಿಸಿದ ತೀವ್ರ ಒತ್ತಡವೇ ತನ್ನ ಸಾವಿಗೆ ಕಾರಣವೆಂದು ಬರೆದುಕೊಂಡಿದ್ದರು. ಇಲಾಖಾ ಕಾರ್ಯದರ್ಶಿ ಜ್ಞಾನೇಶ್ ಕುಮಾರ್ ಅವರ ಹೆಸರನ್ನೂ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.
ಆ ಸಮಯದಲ್ಲಿ ಅಧಿಕಾರದಲ್ಲಿದ್ದ ಎಲ್‌ಡಿಎಫ್ ಸರ್ಕಾರವು ಈ ಯೋಜನೆಯಲ್ಲಿನ ಅಕ್ರಮಗಳ ಕುರಿತು ವಿಜಿಲೆನ್ಸ್ ತನಿಖೆಗೆ ಆದೇಶಿಸಿತ್ತು. ವಿಜಿಲೆನ್ಸ್ ಪ್ರಾಥಮಿಕ ತನಿಖೆಯನ್ನು ನಡೆಸಿದ್ದರೂ ಮುಂದಿನ ಕ್ರಮ ಕೈಗೊಂಡಿರಲಿಲ್ಲ. ಲೀ ಆತ್ಮಹತ್ಯೆಯಲ್ಲಿ ಜ್ಞಾನೇಶ್ ಕುಮಾರ್ ಪಾತ್ರವಿತ್ತು ಎಂದು ಎಲ್‌ಡಿಎಫ್ ಸರ್ಕಾರದಲ್ಲಿದ್ದ ಮಾಜಿ ಹಣಕಾಸು ಸಚಿವ ಡಾ. ಥಾಮಸ್ ಐಸಾಕ್, ಇತ್ತೀಚೆಗೆ ಬಹಿರಂಗಪಡಿಸಿದ್ದರು.
ಈಗ್ಯಾಕೆ ತನಿಖೆ ಎಂದ ಬಿಜೆಪಿ
20 ವರ್ಷ ಹಿಂದಿನ ಪ್ರಕರಣ ವಿಚಾರಣೆ ಈಗ್ಯಾಕೆ ಎಂದು ಬಿಜೆಪಿ ಪ್ರಶ್ನಿಸಿದೆ. ತನಿಖೆಗೆ ಆದೇಶಿಸಿದ ʻಟೈಮಿಂಗ್ʼ ಅಂದರೆ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ಹೋರಾಟದ ವೇಳೆಯೇ ತನಿಖೆ ಯಾಕೆ ಎಂದು ಬಿಜೆಪಿ ಪ್ರಶ್ನಿಸಿದೆ.
ಕೇಸ್ ಕ್ಲೋಸ್ ಎಂದಿದ್ದ ವಿಜಿಲೆನ್ಸ್ ಬ್ಯೂರೋ
ಈ ವರ್ಷದ ಜನವರಿಯಲ್ಲಿ ಆರ್‌ಟಿಐ ಅಡಿ ನೀಡಿದ ಉತ್ತರದಲ್ಲಿ ಯಾವುದೇ ಅಕ್ರಮಗಳು ಕಂಡುಬರದ ಕಾರಣ ಜ್ಞಾನೇಶ್ ಕುಮಾರ್ ವಿರುದ್ಧ ಪ್ರಕರಣ ಕ್ಲೋಸ್ ಆಗಿದೆ ಎಂದು ಕೇರಳಂನ ವಿಜಿಲೆನ್ಸ್ ಬ್ಯೂರೋ ತಿಳಿಸಿತ್ತು. ಇದನ್ನೂ ಓದಿ: ಜ್ಞಾನೇಶ್ ಕುಮಾರ್ ಅಮಾನತು ಕೋರಿ ಅರ್ಜಿ- ವಿಚಾರಣೆಗೆ ಸುಪ್ರೀಂ ಸಮ್ಮತಿ

