ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ (Ramya) ಅವರನ್ನು ಸಿನಿಮಾ ರಂಗಕ್ಕೆ ಮತ್ತೆ ಕರೆತರುವ ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೆ, ಅವರು ಮಾತ್ರ ಜಪ್ಪಯ್ಯ ಅನ್ನುತ್ತಿಲ್ಲ. ಈಗಾಗಲೇ ಹಲವಾರು ಪ್ರಯತ್ನಗಳು ನಡೆದರೂ, ರಮ್ಯಾ ಮಾತ್ರ ಯಾರ ಕೈಗೂ ಸಿಗುತ್ತಿಲ್ಲ. ಇದೀಗ ಮತ್ತೊಂದು ಬಿಗ್ ಆಫರ್ ರಮ್ಯಾಗಾಗಿ ಕಾಯುತ್ತಿದೆ. ಸಿದ್ಲಿಂಗು ಸಿನಿಮಾ ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ಅವರು ರಮ್ಯಾಗಾಗಿಯೇ ವಿಶೇಷ ಕಥೆಯನ್ನು ರೆಡಿ ಮಾಡಿದ್ದಾರಂತೆ. ಈ ಕುರಿತು ಅವರು ಓಪನ್ ಆಗಿಯೇ ಬರೆದುಕೊಂಡಿದ್ದಾರೆ. ರಮ್ಯಾ ಒಪ್ಪೋದಾದರೆ, ಇಡೀ ಸ್ಕ್ರಿಪ್ಟ್ ಕೊಡುವ ಮಾತುಗಳನ್ನೂ ಅವರು ಆಡಿದ್ದಾರೆ.
ದಶಕಗಳ ಕಾಲ ಕನ್ನಡ ಸಿನಿಮಾ ರಂಗವನ್ನು ಆಳಿರುವ ಸ್ಯಾಂಡಲ್‌ವುಡ್ ನಟಿ ರಮ್ಯಾ, ಕೆಲವು ವರ್ಷಗಳಿಂದ ಬಣ್ಣದ ಪ್ರಪಂಚದಿಂದ ದೂರವಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ರಮ್ಯಾ ಮತ್ತೆ ಸಿನಿಮಾ ರಂಗಕ್ಕೆ ಪ್ರವೇಶಿಸುತ್ತಾರೆ ಎನ್ನುವುದು ದೊಡ್ಡ ಸುದ್ದಿ ಆಗಿತ್ತು. ಎರಡು ಚಿತ್ರಗಳನ್ನೂ ಅವರು ಒಪ್ಪಿಕೊಂಡರು ಅಂತಾನೂ ಹೇಳಲಾಗಿತ್ತು. ಆದರೆ, ಎರಡೂ ಸಿನಿಮಾಗಳಿಂದಲೂ ರಮ್ಯಾ ಹಿಂದೆ ಸರಿದರು. ಅಭಿಮಾನಿಗಳಿಗೆ ಸಹಜವಾಗಿಯೇ ನಿರಾಸೆ ಆಗಿತ್ತು. ಇದೀಗ ಅಭಿಮಾನಿಗಳು ಖುಷಿ ಪಡುವಂಥ ಸುದ್ದಿಯೊಂದು ತೇಲಿ ಬಂದಿದೆ. ರಮ್ಯಾ ಮನಸ್ಸು ಮಾಡಬೇಕಷ್ಟೆ. ಇದನ್ನೂ ಓದಿ: ‘ಆನಂದ್’ ಮೂಲಕ ಶಿವಣ್ಣ ಪರಿಚಯಿಸಿದ್ದ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ನಿಧನ
ಹೌದು, ಸಿನಿಮಾ ರಂಗಕ್ಕೆ ರಮ್ಯಾ ಬರುತ್ತಾರೆ ಅಂತ ಹೇಳಿದಾಗ, ಅವರ ಅಭಿಮಾನಿಗಳು ಸಂಭ್ರಮದಿಂದ ಸ್ವಾಗತಿಸಿದ್ದರು. ಆದರೆ, ಅವರು ಬಣ್ಣ ಹಚ್ಚಲಿಲ್ಲ. ಬದಲಾಗಿ ಸಿನಿಮಾ ನಿರ್ಮಾಣ ಮಾಡಿದರು. ಈಗಲೂ ರಮ್ಯಾ ಅವರನ್ನು ತೆರೆಯ ಮೇಲೆ ನೋಡೋಕೆ ಅಸಂಖ್ಯಾತ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಆ ಅಭಿಮಾನಿಗಳ ಆಸೆಯನ್ನು ಈಡೇರಿಸುವುದಕ್ಕಾಗಿಯೇ ಸಿದ್ಲಿಂಗು ಸಿನಿಮಾ ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ರೆಡಿಯಾಗಿದ್ದಾರೆ. ರಮ್ಯಾ ಅವರಿಗಾಗಿಯೇ ವಿಶೇಷ ಸ್ಕ್ರಿಪ್ಟ್ ಒಂದನ್ನು ರೆಡಿ ಮಾಡಿದ್ದಾರಂತೆ. ಅವರು ರಮ್ಯಾರ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ. ರಮ್ಯಾ ಗ್ರೀನ್ ಸಿಗ್ನಲ್ ಕೊಟ್ಟರೆ, ಇಡೀ ಕಥೆಯನ್ನು ಒಪ್ಪಿಸೋದಾಗಿ ವಿಜಯ್ ಪ್ರಸಾದ್ ಬರೆದುಕೊಂಡಿದ್ದಾರೆ.

ರಮ್ಯಾ ಅವರು ಹಲವಾರು ಚಿತ್ರಗಳನ್ನು ಮಾಡಿದ್ದರೂ, ಅವರ ವೃತ್ತಿ ಬದುಕಿನ ವಿಶೇಷ ಸಿನಿಮಾಗಳಲ್ಲಿ `ಸಿದ್ಲಿಂಗು’ ಕೂಡ ಒಂದು. ಆವರೆಗೂ ಮಾಡದೇ ಇರುವಂಥ ಪಾತ್ರದಲ್ಲಿ ರಮ್ಯಾ ಕಾಣಿಸಿಕೊಂಡಿದ್ದರು. ಮಂಗಳಾ ಟೀಚರ್ ಹೆಸರಿನ ಪಾತ್ರದಲ್ಲಿ ಮಿಂಚಿದ್ದರು. ರಮ್ಯಾ ಅವರಿಗೆ ದೊಡ್ಡ ಅಭಿಮಾನಿಯಾಗಿದ್ದ ಲೂಸ್ ಮಾದ ಯೋಗೀಶ್ ಅವರು ಆ ಚಿತ್ರದ ನಾಯಕ. ಈ ಕಾಂಬಿನೇಷನ್ನೇ ಸ್ಪೆಷಲ್ ಆಗಿತ್ತು. ಈ ವಿಶೇಷ ಜೋಡಿಯನ್ನಿಟ್ಟುಕೊಂಡು ವಿಜಯ್ ಪ್ರಸಾದ್ ಸಿದ್ಲಿಂಗು ಚಿತ್ರ ಮಾಡಿದ್ದರು. ಚಿತ್ರ ಸೂಪರ್ ಹಿಟ್ ಕೂಡ ಆಗಿತ್ತು. ಆನಂತರ ನೀರ್ದೋಸೆ ಸಿನಿಮಾ ಘೋಷಣೆ ಮಾಡಿದರು.
ರಮ್ಯಾ ಅವರನ್ನು ವಿಶೇಷ ಪಾತ್ರಗಳಲ್ಲಿ ತೋರಿಸಬೇಕು ಅನ್ನುವ ತುಡಿತ ವಿಜಯ್ ಪ್ರಸಾದ್ ಅವರಿಗೆ ಯಾವತ್ತಿಗೂ ಇದ್ದೇ ಇದೆ. ಈ ಕಾರಣಕ್ಕಾಗಿಯೇ ನೀರ್ದೋಸೆ ಸಿನಿಮಾ ಕೈಗೆತ್ತಿಕೊಂಡರು. ಪಾತ್ರವನ್ನು ಅಪಾರವಾಗಿ ಮೆಚ್ಚಿಕೊಂಡಿದ್ದ ರಮ್ಯಾ, ಕೆಲವು ದಿನಗಳ ಕಾಲ ಚಿತ್ರೀಕರಣದಲ್ಲೂ ಭಾಗಿಯಾಗಿದ್ದರು. ಆನಂತರ ಚುನಾವಣೆ ಕಾರಣ ಕೊಟ್ಟು ಸಿನಿಮಾದಿಂದ ಹೊರಗುಳಿದರು. ಇದು ಕೆಲವು ಕಾಲ ಗೊಂದಲಕ್ಕೂ ಕಾರಣವಾಗಿತ್ತು. ಕೊನೆಗೂ ಆ ಪಾತ್ರವನ್ನು ಹರಿಪ್ರಿಯ ಮಾಡಬೇಕಾಯಿತು. ಇದೀಗ ಮತ್ತೆ ರಮ್ಯಾರ ಕನಸು ಕಾಣುತ್ತಿದ್ದಾರೆ ವಿಜಯ್ ಪ್ರಸಾದ್. ಸ್ಯಾಂಡಲ್‌ವುಡ್ ಕ್ವೀನ್‌ಗಾಗಿಯೇ ಕಥೆ ಬರೆದಿರೋದಾಗಿ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಫಾದರ್ ರಿಲೀಸ್ ಡೇಟ್ ಫಿಕ್ಸ್ – ಮತ್ತೆ ಮೋಡಿ ಮಾಡೋಕೆ ಡಾರ್ಲಿಂಗ್ ಕೃಷ್ಣ ರೆಡಿ
ರಮ್ಯಾರ ಹೊಸ ಸಿನಿಮಾ ಕುರಿತಂತೆ ಪೋಸ್ಟ್ ಮಾಡಿರುವ ವಿಜಯ್ ಪ್ರಸಾದ್, `ಇದು ನನ್ನ ಅಸಹಾಯಕತೆಯೂ ಅಲ್ಲ, ದೌರ್ಬಲ್ಯವೂ ಅಲ್ಲ. ಒಬ್ಬ ಬರಹಗಾರನ ಮತ್ತು ನಿರ್ದೇಶಕನ ಆತ್ಮವಿಶ್ವಾಸ. ನೀವು ಕಾಗೆ ಹಾರಿಸುವಲ್ಲಿ ನಿಸ್ಸೀಮರು ಎಂದು ಜಗತ್ತು ಹೇಳಿದರೂ ನಾನು ಹಾರಾಡಲೂ ಸಿದ್ಧ ಎಂದು ಬರೆದುಕೊಂಡಿದ್ದಾರೆ. `ಚಿತ್ರರಂಗಕ್ಕೆ ನೀವು ಮರಳುವುದಾದರೆ ತಿಳಿಸಿ, ಸಂಪೂರ್ಣ ಚಿತ್ರಕಥೆ ನಿಮ್ಮ ಮುಂದೆ ಇಡಲು ಸಿದ್ಧ. ದೋಣಿ ಸಾಗಲಿ, ಮುಂದೆ ಹೋಗಲಿ’ ಅಂತ ಬರೆದು ಆಹ್ವಾನಿಸಿದ್ದಾರೆ. ಈ ಆಹ್ವಾನವನ್ನು ಒಪ್ಪಿಕೊಂಡು ರಮ್ಯಾ ಅವರು ಸಿನಿಮಾ ಮಾಡಬೇಕು ಅನ್ನೋದು ಅನೇಕರು ಆಗ್ರಹ ಕೂಡ ಆಗಿದೆ.

