– ಕೆಂಪೇಗೌಡ ಏರ್ಪೋರ್ಟ್ನಲ್ಲಿ ಅದ್ಧೂರಿ ಸ್ವಾಗತ
ಬೆಂಗಳೂರು: ಏಷ್ಯನ್ ಗೇಮ್ಸ್ನಲ್ಲಿ (Asian Games 2026) ಚಿನ್ನದ ಪದಕ ವಿಜೇತ ಮಹಿಳಾ ಹಾಕಿ ತಂಡ (Women’s Hockey Team) ಬೆಂಗಳೂರಿಗೆ (Bengaluru) ಆಗಮಿಸಿದ್ದು, ಅದ್ಧೂರಿ ಸ್ವಾಗತ ಕೋರಲಾಗಿದೆ.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಹಿಳಾ ಹಾಕಿ ತಂಡಕ್ಕೆ ಕ್ರೀಡಾ ಇಲಾಖೆ ಮತ್ತು ಎಸ್ಎಐ ನವರು ಭರ್ಜರಿಯಾಗಿ ಸ್ವಾಗತ ಕೋರಿದರು. 44 ವರ್ಷಗಳ ಬಳಿಕ ಭಾರತಕ್ಕೆ ಏಷ್ಯನ್ ಗೇಮ್ಸ್ ಚಿನ್ನದ ಪದಕ ತಂದುಕೊಟ್ಟ ತಂಡದ ಮಹಿಳಾಮಣಿಗಳಿಗೆ ಪುಷ್ಪವೃಷ್ಠಿ ಮಾಡಿ ಅಭಿಮಾನಿಗಳು ಸ್ವಾಗತಿಸಿದರು. ಇದನ್ನೂ ಓದಿ: 44 ವರ್ಷದ ಬಳಿಕ ಇತಿಹಾಸ ಸೃಷ್ಟಿ – ಚಿನ್ನಕ್ಕೆ ಮುತ್ತಿಟ್ಟ ಭಾರತ, ಒಲಿಂಪಿಕ್ಸ್ಗೆ ಅರ್ಹತೆ
ಕ್ರೀಡಾಪಟುಗಳಿಗೆ ಹೂವಿನ ಮಾಲೆ ಹಾಕಿ, ಸಾಂಸ್ಕೃತಿಕ ಡೊಳ್ಳು ಕುಣಿತದ ಮೂಲಕ ಅದ್ಧೂರಿ ಸ್ವಾಗತ ಕೋರಲಾಯಿತು. ಏರ್ಪೋರ್ಟ್ನಲ್ಲಿ ಚಪ್ಪಾಳೆ ತಟ್ಟಿ, ಭಾರತ್ ಮಾತಾ ಕಿ ಜೈ ಎಂದು ಜೈಕಾರ ಹಾಕಿ ಸಂಭ್ರಮಿಸಲಾಯಿತು.
ತಂಡದ ನಾಯಕಿ ಸಲೀಮಾ ಟೇಟೆ ಮಾತನಾಡಿ, ಬಹಳ ಸಂತೋಷವಾಗಿದೆ. ಕೋಟ್ಯಂತರ ಭಾರತೀಯರ ಆಸೆ ಚಿನ್ನ ಗೆಲ್ಲೋದು. ನಾವು ಅದಕ್ಕಾಗಿ ಬಹಳ ಎಫೆಕ್ಟ್ ಹಾಕಿದ್ವಿ. ಬೆಂಗಳೂರಿನಲ್ಲಿ ಟ್ರೈನಿಂಗ್ ಪಡೆಯುವಾಗಲೇ ಚಿನ್ನ ಗೆಲ್ಲಲೇಬೇಕು ಅನ್ನೋ ಛಲವಿತ್ತು. ಬೆಂಗಳೂರಿನಲ್ಲಿ ಉತ್ತಮ ಅಭ್ಯಾಸ ಮಾಡಿದ್ವಿ. ನಮ್ಮ ತಂಡ ಚಿನ್ನ ಗೆದ್ದಿದ್ದು, ಬಹಳ ಸಂತೋಷವಾಗಿದೆ. ನಮ್ಮ ಮುಂದಿನ ಗುರಿ ಒಲಿಂಪಿಕ್ಸ್ನಲ್ಲಿ ಚಿನ್ನ ಗೆಲ್ಲೋದು. ಮುಂದಿನ ಸಲ ಒಲಿಂಪಿಕ್ಸ್ನಲ್ಲಿ ನಮ್ಮ ಭಾರತ ತಂಡ ಚಿನ್ನ ಗೆಲ್ಲುತ್ತೆ ಎಂದು ಭರವಸೆಯ ನುಡಿಯನ್ನಾಡಿದ್ದಾರೆ.

