ಬೆಂಗಳೂರು: ರಾಜ್ಯದಲ್ಲಿ(Karnataka) ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಕರಡು ಪ್ರಕಟಣೆಗೆ ಕೇವಲ ನಾಲ್ಕು ದಿನ ಬಾಕಿ ಉಳಿದಿದ್ದು, ರಾಜಕೀಯ ಸಂಘರ್ಷ ತಾರಕಕ್ಕೇರಿದೆ. ಮತದಾರರ ಹೆಸರು ಕೈಬಿಡುವ ‘ಫಾರ್ಮ್-7’ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ರಾಜ್ಯ ಚುನಾವಣಾ ಆಯೋಗದ ಮೆಟ್ಟಿಲೇರಿದ್ದರೆ, ಬಿಜೆಪಿ ಪೊಲೀಸ್ ಕಮಿಷನರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಡಳಿತ ಪಕ್ಷದ ವಿರುದ್ಧ ಆಕ್ರೋಶ ಹೊರಹಾಕಿದೆ.
ಕಾಂಗ್ರೆಸ್(Congress) ಶಾಸಕರ ಕ್ಷೇತ್ರಗಳಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿರುವ ಬೆನ್ನಲ್ಲೇ, ಪ್ರಕರಣಗಳ ಸಮಗ್ರ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.
ಮಂಗಳವಾರ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಎಸ್‌ಐಆರ್ ವಿವಾದದ ಕುರಿತು ಸಚಿವರೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ, ಅಲ್ಲಿಯವರೆಗೆ ರಾಜ್ಯಾದ್ಯಂತ ದಾಖಲಾಗುವ ದೂರು ಹಾಗೂ ಪ್ರಕರಣಗಳ ಸಮಗ್ರ ಮಾಹಿತಿ ಒದಗಿಸುವಂತೆ ಮುಖ್ಯಮಂತ್ರಿಗಳು ಗೃಹ ಮತ್ತು ಕಂದಾಯ ಇಲಾಖೆಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಎಸ್‌ಐಟಿ ರಚನೆ ಚಿಂತನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, “ಮುಖ್ಯಮಂತ್ರಿಗಳು ಪೊಲೀಸ್ ಬಲ ಪ್ರಯೋಗಿಸಿ ಗೂಂಡಾಗಿರಿ ಮತ್ತು ದಾದಾಗಿರಿ ನಡೆಸಲು ಹೊರಟಿದ್ದಾರೆ” ಎಂದು ಕಿಡಿಕಾರಿದ್ದಾರೆ. ಈ ವದಂತಿಗಳಿಗೆ ತೆರೆ ಎಳೆಯಲು ಯತ್ನಿಸಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್, “ಸದ್ಯಕ್ಕೆ ರಾಜ್ಯ ಸರ್ಕಾರದಿಂದ ಯಾವುದೇ ಪ್ರತ್ಯೇಕ ತನಿಖೆ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: SIR ಪಾಲಿಟಿಕ್ಸ್ – ಪೇದೆಗೆ ಬೆಳಗಾವಿ ಶಾಸಕ ಅಭಯ್ ಪಾಟೀಲ್ ಕ್ಯಾಮೆರಾ ಮುಂದೆಯೇ ಕ್ಲಾಸ್
ಎಸ್‌ಐಟಿಗೆ ತೊಡಕು?
ರಾಜಕೀಯ ಪಕ್ಷಗಳು ಅಥವಾ ಕಾರ್ಯಕರ್ತರು ನೀಡುವ ದೂರನ್ನು ಆಧರಿಸಿ ರಾಜ್ಯ ಸರ್ಕಾರವು ನೇರವಾಗಿ ಎಸ್‌ಐಟಿ ರಚಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಕಾನೂನು ತಜ್ಞರು ಹಾಗೂ ಹಿರಿಯ ಅಧಿಕಾರಿಗಳು ಸರ್ಕಾರಕ್ಕೆ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.
ಮತದಾರರ ಪಟ್ಟಿಗೆ ಸಂಬಂಧಿಸಿದ ಯಾವುದೇ ಅಕ್ರಮ ಅಥವಾ ತಪ್ಪು ಮಾಹಿತಿಯ ವಿರುದ್ಧ ಬೂತ್ ಮಟ್ಟದ ಅಧಿಕಾರಿಗಳು (BLO) ಅಧಿಕೃತವಾಗಿ ದೂರು ದಾಖಲಿಸುವುದು ಕಡ್ಡಾಯ. ಬಿಎಲ್‌ಒ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿ, ಆಯೋಗವು ಶಿಫಾರಸು ಮಾಡಿದರೆ ಮಾತ್ರ ಉನ್ನತ ಮಟ್ಟದ ಅಥವಾ ಎಸ್‌ಐಟಿ ತನಿಖೆ ನಡೆಸಲು ಸಾಧ್ಯ.
ಮತದಾರರ ಪಟ್ಟಿ ಪರಿಷ್ಕರಣೆಯ ಸಂಪೂರ್ಣ ನಿಯಂತ್ರಣ ಸಾಂವಿಧಾನಿಕವಾಗಿ ಚುನಾವಣಾ ಆಯೋಗದ (ECI) ಸುಪರ್ದಿಯಲ್ಲಿರುತ್ತದೆ. ಇದರಲ್ಲಿ ಲೋಪ ಕಂಡುಬಂದರೆ ರಾಜ್ಯ ಸರ್ಕಾರವು ತನ್ನದೇ ತನಿಖಾ ಸಂಸ್ಥೆಗಳ ಮೂಲಕ ನೇರ ತನಿಖೆಗೆ ಆದೇಶಿಸುವಂತಿಲ್ಲ. ಬದಲಿಗೆ, ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ನಿರ್ದೇಶನ ಪಡೆಯಬೇಕಾಗುತ್ತದೆ.

