ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ (Mandya) ಆಣೆ-ಪ್ರಮಾಣ ರಾಜಕೀಯ ಶುರುವಾಗಿದೆ. ನಾಗಮಂಗಲದ (Nagamangala) ಬಗರ್‌ಹುಕುಂ ಭೂಮಿ (Bagar-Hukum Land) ಮಂಜೂರಾತಿ ರದ್ದು ಪ್ರಕರಣ ಈಗ ಕೈ-ದಳ ನಾಯಕರ ನಡುವಿನ ಸಮರಕ್ಕೆ ನಾಂದಿ ಹಾಡಿದೆ. ಸಚಿವ ಚಲುವರಾಯಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿರುವ ಮಾಜಿ ಶಾಸಕ ಸುರೇಶ್ ಗೌಡ, ಧಮ್ ಇದ್ರೆ ಅಜ್ಜಯ್ಯನ ಮೇಲೆ ಆಣೆ ಮಾಡುವಂತೆ ಬಹಿರಂಗ ಸವಾಲು ಹಾಕಿದ್ದಾರೆ. ಅಲ್ಲದೇ ರೈತರಿಂದ ಒಂದು ರೂಪಾಯಿ ಲಂಚ ಪಡೆದಿರುವುದು ಸಾಬೀತಾದರೆ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಚಾಲೆಂಜ್ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲ ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ನಾಯಕರ ಫೈಟ್ ಮತ್ತೊಂದು ಮಜಲು ಪಡೆದುಕೊಂಡಿದೆ. ಜೆಡಿಎಸ್‌ನ ಸುರೇಶ್ ಗೌಡ (Suresh Gowda) ಅವರು ಶಾಸಕರಾಗಿದ್ದ ಅವಧಿಯಲ್ಲಿ ಬಗರ್‌ಹುಕುಂ ಯೋಜನೆಯಡಿ ರೈತರಿಗೆ ನೀಡಲಾಗಿದ್ದ ಸಾಗುವಳಿ ಪತ್ರಗಳನ್ನು ಜಿಲ್ಲಾಡಳಿತ ದಿಢೀರ್ ರದ್ದುಗೊಳಿಸಿರುವುದಕ್ಕೆ ಸಚಿವ ಚಲುವರಾಯಸ್ವಾಮಿ (N Chaluvaraya Swamy) ಅವರೇ ಕಾರಣ ಎಂದು ಜೆಡಿಎಸ್ ಆರೋಪ ಮಾಡುತ್ತಿದೆ. ಸಚಿವರ ದ್ವೇಷದ ರಾಜಕೀಯದಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಶುಕ್ರವಾರ ನಾಗಮಂಗಲದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಮತ್ತೊಂದೆಡೆ ಸಚಿವರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿರುವ ಸುರೇಶ್ ಗೌಡ ಆಣೆ ಪ್ರಮಾಣಕ್ಕೂ ಬಹಿರಂಗ ಆಹ್ವಾನ ನೀಡಿದ್ದಾರೆ. ಇದನ್ನೂ ಓದಿ: ಪ್ರೆಟ್ರೋಲ್ ಬಂಕ್‌ನಲ್ಲಿ ವಿದ್ಯುತ್ ಸ್ಪರ್ಶಿಸಿ ಯುವಕ ದುರ್ಮರಣ
ಅರ್ಜಿ ಹಾಕಿದ್ದ ರೈತರ ಅರ್ಹತೆ ಹಾಗೂ ಅನುಭವದಲ್ಲಿರುವುದನ್ನ ಪರಿಶೀಲಿಸಿ, ಪಕ್ಷ ಭೇದ ಮಾಡದೇ ಸಾಗುವಳಿ ಪತ್ರ ನೀಡಲಾಗಿತ್ತು. ಆದರೆ, ಸಚಿವ ಚಲುವರಾಯಸ್ವಾಮಿ ಅವರು ದುರುದ್ದೇಶದಿಂದ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಸಾಗುವಳಿ ಪತ್ರ ವಜಾ ಮಾಡಿಸಿದ್ದಾರೆ ಎಂಬುದು ಸುರೇಶ್ ಗೌಡ ಗಂಭೀರ ಆರೋಪ ಮಾಡಿದ್ದಾರೆ. ರೈತರಿಂದ ನಾನು ಒಂದೇ ಒಂದು ರೂಪಾಯಿ ಲಂಚ ತೆಗೆದುಕೊಂಡಿರೋದನ್ನ ಸಾಬೀತು ಮಾಡಿದರೆ ಅಥವಾ ಜಮೀನು ಮಂಜೂರಾತಿ ವಿಚಾರದಲ್ಲಿ ನಾನು ತಪ್ಪು ಮಾಡಿದ್ರೆ ಸಾರ್ವಜನಿಕವಾಗಿ ಕತ್ತು ಕೊಯ್ದುಕೊಂಡು ಸೂಸೈಡ್ ಮಾಡಿಕೊಳ್ಳುವೆ. ಚಲುವರಾಯಸ್ವಾಮಿಗೆ ತಾಕತ್ತಿದ್ದರೆ, ತಾನು ತಪ್ಪು ಮಾಡಿಲ್ಲ, ಅನ್ನೋದಾದರೆ ಅಜ್ಜಯ್ಯನ ಮೇಲೆ ಪ್ರಮಾಣ ಮಾಡಲಿ. ಅವರು ಹೇಳಿದ ಕಡೆ ನಾನು ಬಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಇಂದು ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ
ಇನ್ನು ಮಂಜೂರಾತಿ ರದ್ದು ಮಾಡಿರುವ ಆದೇಶವನ್ನು ವಾಪಸ್ ಪಡೆಯಲು 10 ದಿನದ ಗಡುವು ನೀಡಿದ್ದಾರೆ. 10 ದಿನದೊಳಗೆ ಆದೇಶ ವಾಪಸ್ ಪಡೆಯಬೇಕು. ಸಣ್ಣಪುಟ್ಟ ವ್ಯತ್ಯಾಸಗಳಿದ್ದರೆ ವಾದ ಮಂಡಿಸಲು ರೈತರಿಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಅಮರಣಾಂತ ಉಪವಾಸ ಕೂರುವುದಾಗಿ ಹೇಳಿದ ಸುರೇಶ್ ಗೌಡ, ರೈತರಿಗಾಗಿ ಯಾವ ಹಂತದ ಹೋರಾಟಕ್ಕೂ ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮಂಡ್ಯ | ಕೇಂದ್ರದ ಬರ ಅಧ್ಯಯನ ತಂಡದಿಂದ ಕೆಆರ್‌ಎಸ್, ಬರಪೀಡಿತ ಹಳ್ಳಿಗಳ ಪರಿಶೀಲನೆ
ಒಟ್ಟಿನಲ್ಲಿ ಬಗರ್ ಹುಕುಂ ಜಮೀನು ವಿಚಾರ ಸಕ್ಕರೆ ನಾಡಿನಲ್ಲಿ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ. ಸುರೇಶ್ ಗೌಡ ಅವರ 10 ದಿನಗಳ ಡೆಡ್ ಲೈನ್‌ಗೆ ಸಚಿವ ಚಲುವರಾಯಸ್ವಾಮಿ ಹಾಗೂ ಜಿಲ್ಲಾಡಳಿತ ಹೇಗೆ ಪ್ರತಿಕ್ರಿಯಿಸುತ್ತದೆ? ಅಜ್ಜಯ್ಯನ ಪ್ರಮಾಣ ಸವಾಲನ್ನು ಸಚಿವರು ಸ್ವೀಕರಿಸುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: Asian Games 2026: ಗಾಲ್ಫ್‌ನಲ್ಲಿ ಐತಿಹಾಸಿಕ ಚಿನ್ನ ಗೆದ್ದ ಮೈಸೂರಿನ ಪ್ರಣವಿ ಅರಸ್

