ಬಳ್ಳಾರಿ: ನಗರದಲ್ಲಿ ಮತದಾರರ ಪಟ್ಟಿಯಿಂದ(Voters List) ಕಾಂಗ್ರೆಸ್(Congress) ಪರ ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲು ಷಡ್ಯಂತ್ರ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ(Ballari) ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಬೂತ್ ಮಟ್ಟದ ಏಜೆಂಟ್ (BLA-1) ಹಾಗೂ ಪಾಲಿಕೆ ಅಧಿಕಾರಿಗಳು ಸೇರಿದಂತೆ ಹಲವರ ವಿರುದ್ಧ ತಡರಾತ್ರಿ ಎಫ್‌ಐಆರ್ ದಾಖಲಾಗಿದೆ.
ಕಾಂಗ್ರೆಸ್ BLA ಗೌತಮ್ ನೀಡಿದ ದೂರಿನ ಮೇರೆಗೆ ಬಿಜೆಪಿಯ(BJP) BLA-1 ಶ್ರೀನಿವಾಸ ಮೋತ್ಕರ್, ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತ (AC) ನಂದೀಶ್, ಬಿಎಲ್‌ಒಗಳಾದ (BLO) ಸುಮಲತಾ ಮತ್ತು ಶರಣಬಸವ ಸೇರಿದಂತೆ ಇತರರ ವಿರುದ್ಧ ಬಿಎನ್‌ಎಸ್ (BNS 2023) ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ (U/S 363(2), 61(2), 217, 3(5)) ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಾಂಗ್ರೆಸ್ ಕಿಡಿ
ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ್ ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ 7,561 ಮತದಾರರ ಹೆಸರುಗಳನ್ನು ಪರಿಶೀಲನೆ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಕೈಬಿಡುವಂತೆ ಬಿಜೆಪಿಯ BLA-1 ಶ್ರೀನಿವಾಸ ಮೋತ್ಕರ್ ಚುನಾವಣಾಧಿಕಾರಿಗಳಿಗೆ ಪತ್ರ ನೀಡಿದ್ದಾರೆ. ಈ ಪಟ್ಟಿಯಲ್ಲಿ ಶೇ. 98ರಷ್ಟು ಮುಸ್ಲಿಂ ಸಮುದಾಯದವರ ಹಾಗೂ ಕಾಂಗ್ರೆಸ್ ಪರ ಇರುವ ಮತದಾರರ ಹೆಸರುಗಳಿವೆ. ಅಷ್ಟೇ ಅಲ್ಲದೆ ನನ್ನ ಸ್ವಂತ ಸಹೋದರನ ಹೆಸರನ್ನೂ ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಕೋಮು ಉದ್ದೇಶ ಹಾಗೂ ಕಾಂಗ್ರೆಸ್ ಮತಗಳನ್ನು ಕಡಿಮೆ ಮಾಡುವ ಷಡ್ಯಂತ್ರ ಇದರ ಹಿಂದಿದೆ ಎಂದು ದೂರಿದರು.
ಈ ಷಡ್ಯಂತ್ರದಲ್ಲಿ ಚುನಾವಣಾ ಸಿಬ್ಬಂದಿ ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆ. ಈ ಹಿಂದೆಯೇ ಮತದಾರರು ಅಗತ್ಯ ದಾಖಲೆಗಳನ್ನು ಒದಗಿಸಿದ್ದರೂ, ಮತ್ತೆ ಬಿಎಲ್‌ಒಗಳನ್ನು ಮನೆ ಮನೆಗೆ ಕಳಿಸಿ ದಾಖಲೆ ಕೇಳುವ ಮೂಲಕ ಕಿರುಕುಳ ನೀಡಲಾಗುತ್ತಿದೆ ಎಂದು ಅಲ್ಲಂ ಪ್ರಶಾಂತ್ ಆರೋಪಿಸಿದರು. ಇದನ್ನೂ ಓದಿ: ಪರಿಷ್ಕರಣೆ ಬಳಿಕ 1 ತಿಂಗಳಲ್ಲಿ 1.37 ಲಕ್ಷ ಮತದಾರರ ಹೆಚ್ಚಳ – ರಾಜ್ಯದಲ್ಲಿ 84,900 ಫಾರ್ಮ್ 7 ಸಲ್ಲಿಕೆ
ಠಾಣೆಗೆ ಶಾಸಕ ಭರತ್ ರೆಡ್ಡಿ ದೌಡು
ಕಾಂಗ್ರೆಸ್ ಮುಖಂಡರು ಬ್ರೂಸ್‌ಪೇಟೆ ಠಾಣೆಗೆ ದೂರು ನೀಡಿದರೂ ಪೊಲೀಸರು ಎಫ್‌ಐಆರ್ ದಾಖಲಿಸಲು ವಿಳಂಬ ಧೋರಣೆ ತೋರಿದ್ದರು ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಠಾಣೆಗೆ ದೌಡಾಯಿಸಿ, ಪೊಲೀಸರ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಶಾಸಕರು ಆಗಮಿಸುತ್ತಿದ್ದಂತೆ ಹೆಚ್ಚುವರಿ ಎಸ್ಪಿ ಮತ್ತು ಡಿವೈಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತೀವ್ರ ಪ್ರತಿಭಟನೆಯ ನಂತರ ಪೊಲೀಸರು ತಡರಾತ್ರಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

