ಪ್ರಕೃತಿಯ ಮಡಿಲಲ್ಲಿ ಅದೆಷ್ಟು ವಿಸ್ಮಯಗಳು ಅಡಗಿ ಕುಳಿತಿವೆಯೋ ಲೆಕ್ಕವಿಲ್ಲ. ಒಂದೆಡೆ ಮುಗಿಲೆತ್ತರದ ಹಿಮಶಿಖರಗಳು ಮೌನ ತಪಸ್ಸಿಗೆ ಕುಳಿತಿದ್ದರೆ, ಇನ್ನೊಂದೆಡೆ ನಿಗೂಢತೆಯನ್ನು ಹೊದ್ದು ಮಲಗಿರುವ ಕಾಡುಗಳು ಮಾನವನ ಕಲ್ಪನೆಗೂ ನಿಲುಕದ ಕೌತುಕಗಳನ್ನು ತೆರೆದಿಡುತ್ತವೆ. ಆದರೆ, ಕಣ್ಣ ಮುಂದೆಯೇ ನೀಲಿ, ಹಸಿರು, ರಕ್ತಕೆಂಪು ಹೀಗೆ ಕ್ಷಣಕ್ಷಣಕ್ಕೂ ಬಣ್ಣ ಬದಲಾಯಿಸುತ್ತಾ ಊಸರವಳ್ಳಿಯಂತೆ ಮೈಬಣ್ಣ ಬದಲಿಸಿಕೊಳ್ಳುವ ಸರೋವರದ ಬಗ್ಗೆ ಎಂದಾದರೂ ಕೇಳಿದ್ದೀರಾ?
ಹೌದು, ಋತುಮಾನಗಳ ಬದಲಾವಣೆಗೆ ತಕ್ಕಂತೆ, ಸೂರ್ಯನ ಬಿಸಿಲು ಹಾಗೂ ಹವಾಮಾನದ ಏರಿಳಿತಗಳಿಗೆ ಮಣಿದು ತನ್ನ ರೂಪ-ಲಾವಣ್ಯವನ್ನು ಬದಲಿಸಿಕೊಳ್ಳುವ ಆ ವಿಸ್ಮಯ ಸರೋವರ ಪ್ರಕೃತಿಯ ಅಪ್ರತಿಮ ಜಾದೂ. ವಿಜ್ಞಾನಕ್ಕೇ ಸವಾಲೆಸೆಯುವಂತೆ ಭಾಸವಾಗುವ ಈ ರಮಣೀಯ ಜಲರಾಶಿ ಕೇವಲ ಪ್ರವಾಸಿಗರ ಕಣ್ಮನ ಸೆಳೆಯುತ್ತಿಲ್ಲ, ಬದಲಿಗೆ ಪ್ರಕೃತಿಯ ರಹಸ್ಯ ಕಲೆಗೆ ಕನ್ನಡಿ ಹಿಡಿದಿದೆ. ಬನ್ನಿ, ಭೂಮಿಯ ಮೇಲಿನ ಈ ಅಚ್ಚರಿಯ ಲೋಕಕ್ಕೆ ಹೆಜ್ಜೆಯಿಟ್ಟು, ಆ ಅದ್ಭುತವನ್ನು ಕಣ್ತುಂಬಿಕೊಳ್ಳೋಣ.

ಭಾರತದಲ್ಲಿ ಹವಾಮಾನ, ಸೂರ್ಯನ ಬೆಳಕು ಹಾಗೂ ಋತುಮಾನಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವ ಅತ್ಯಂತ ಪ್ರಸಿದ್ಧ ಹಾಗೂ ವಿಸ್ಮಯ ಸರೋವರವೆಂದರೆ ಅದು ಲಡಾಖ್ನ ಪ್ಯಾಂಗ್ಯಾಂಗ್ ತ್ಸೋ ಸರೋವರ (Pangong Tso). ಜಾಗತಿಕ ಮಟ್ಟದಲ್ಲೂ ತನ್ನ ಬಣ್ಣ ಬದಲಿಸುವ ಗುಣಕ್ಕೆ ಇದು ಹೆಸರುವಾಸಿ.
ಎಲ್ಲಿದೆ ಈ ಸರೋವರ?
ಪ್ಯಾಂಗ್ಯಾಂಗ್ ತ್ಸೋ ಸರೋವರ ಭಾರತದ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ನಲ್ಲಿದೆ. ಟಿಬೆಟಿಯನ್ ಭಾಷೆಯಲ್ಲಿ ‘ತ್ಸೋ’ ಎಂದರೆ ಸರೋವರ, ಪ್ಯಾಂಗ್ಯಾಂಗ್ ಎಂದರೆ ‘ಉದ್ದನೆಯ, ಕಿರಿದಾದ, ಆಕರ್ಷಕ ಸರೋವರ ಎಂದರ್ಥ. ಇದುಸಮುದ್ರ ಮಟ್ಟದಿಂದ ಸುಮಾರು 14,270 ಅಡಿ (4,350 ಮೀಟರ್) ಎತ್ತರದಲ್ಲಿದೆ. ಇದು ಸುಮಾರು 134 ಕಿಲೋಮೀಟರ್ ಉದ್ದವಿದ್ದು, ಭಾರತ ಮತ್ತು ಚೀನಾ (ಟಿಬೆಟ್) ನಡುವೆ ಹಂಚಿಹೋಗಿದೆ. ಇದರ ಸುಮಾರು ಮೂರನೇ ಒಂದು ಭಾಗ (ಶೇ. 33) ಭಾರತದಲ್ಲಿದ್ದರೆ, ಉಳಿದ ಭಾಗ ಚೀನಾದ ನಿಯಂತ್ರಣದಲ್ಲಿದೆ.

ಇದು ಸಂಪೂರ್ಣ ಸಿಹಿ ನೀರಿನ ಸರೋವರವಲ್ಲ, ಉಪ್ಪು ನೀರಿನ ಸರೋವರ. ಹವಾಮಾನ, ಸೂರ್ಯನ ಕಿರಣಗಳ ಕೋನ, ಆಕಾಶದ ಮೋಡಗಳು ಹಾಗೂ ನೀರಿನಲ್ಲಿರುವ ಖನಿಜಗಳ ಕಾರಣದಿಂದಾಗಿ ಇದು ತಿಳಿ ನೀಲಿ, ಗಾಢ ನೀಲಿ, ವೈಡೂರ್ಯ (ಟರ್ಕೋಯಿಶ್), ಹಸಿರು ಮತ್ತು ಕೆಲವೊಮ್ಮೆ ತಿಳಿ ನೇರಳೆ ಬಣ್ಣಕ್ಕೆ ತಿರುಗುತ್ತದೆ.
ಸರೋವರ ಬಣ್ಣ ಬದಲಿಸುವುದು ಯಾಕೆ?
ಪ್ಯಾಂಗ್ಯಾಂಗ್ ಸರೋವರ ಬಣ್ಣ ಬದಲಾಯಿಸುವುದು ಯಾವುದೇ ಪವಾಡ ಅಥವಾ ರಹಸ್ಯವಲ್ಲ; ಬದಲಿಗೆ ಇದು ಭೌತಶಾಸ್ತ್ರದ ಬೆಳಕಿನ ನಿಯಮ, ನೀರಿನಲ್ಲಿರುವ ಲವಣಾಂಶ ಮತ್ತು ಎತ್ತರದ ವಾತಾವರಣದಿಂದಾಗಿ ನೈಸರ್ಗಿಕವಾಗಿ ಬದಲಾಗುತ್ತದೆ.
ಸೂರ್ಯ ಉದಯಿಸಿ, ನಡುನೆತ್ತಿಗೆ ಬಂದು, ಮುಳುಗುವವರೆಗೆ ನೀರಿನ ಮೇಲೆ ಬೀಳುವ ಬೆಳಕಿನ ಕೋನ ಬದಲಾಗುತ್ತಿರುತ್ತದೆ. ಬೆಳಕಿನ ವಕ್ರೀಭವನ ಮತ್ತು ಪ್ರತಿಫಲನದ (Reflection) ಆಧಾರದ ಮೇಲೆ ನೀರು ಬೇರೆ ಬೇರೆ ಬಣ್ಣವಾಗಿ ಗೋಚರಿಸುತ್ತದೆ. ಇದು ಸಿಹಿ ನೀರಿನ ಸರೋವರವಲ್ಲ, ಉಪ್ಪು ನೀರಿನ ಸರೋವರ. ನೀರಿನಲ್ಲಿ ಕ್ಯಾಲ್ಸಿಯಂ ಕಾರ್ಬೊನೇಟ್ ಮತ್ತು ಇತರ ಲವಣಾಂಶಗಳು ಕರಗಿರುತ್ತವೆ. ಈ ಖನಿಜ ಕಣಗಳು ಸೂರ್ಯನ ನೀಲಿ ಮತ್ತು ಹಸಿರು ತರಂಗಾಂತರಗಳನ್ನು ಚದುರಿಸುತ್ತವೆ

ಈ ಸರೋವರದಲ್ಲಿ ಮೀನುಗಳಾಗಲಿ ಅಥವಾ ಜಲಸಸ್ಯಗಳಾಗಲಿ ಇಲ್ಲ. ನೀರು ಅತಿ ಶುದ್ಧವಾಗಿದ್ದು, ಆಳವಾದ ಭಾಗದಲ್ಲಿ ಬೆಳಕು ಗಾಢ ಬಣ್ಣ ನೀಡುತ್ತದೆ. ಲಡಾಖ್ನ ವಾತಾವರಣದಲ್ಲಿ ಮಾಲಿನ್ಯವಿಲ್ಲದೆ ಆಕಾಶ ಅಚ್ಚ ನೀಲಿಯಾಗಿರುತ್ತದೆ. ಆಕಾಶದ ಪ್ರತಿಬಿಂಬ, ಸುತ್ತಲಿನ ಹಿಮ ಬೆಟ್ಟಗಳ ನೆರಳು ಹಾಗೂ ತೇಲುವ ಮೋಡಗಳು ನೀರಿನ ಬಣ್ಣವನ್ನು ತಕ್ಷಣವೇ ಬದಲಿಸುತ್ತವೆ.
ಒಂದೇ ದಿನದಲ್ಲಿ ಹಲವು ಬಣ್ಣಗಳು:
ದಿನದ 24 ಗಂಟೆಗಳಲ್ಲಿ ಸೂರ್ಯನ ಗತಿಗೆ ತಕ್ಕಂತೆ ಸರೋವರದ ಬಣ್ಣ ರೂಪಾಂತರಗೊಳ್ಳುತ್ತದೆ.
ಸೂರ್ಯನ ಮೊದಲ ಕಿರಣಗಳು ಬಿದ್ದಾಗ ನೀರು ತಿಳಿ ನೀಲಿ ಮತ್ತು ಬೆಳ್ಳಿಯಂತೆ ಹೊಳೆಯುತ್ತದೆ. ಹಿಮಬೆಟ್ಟಗಳ ಪ್ರತಿಬಿಂಬದಿಂದಾಗಿ ಕೆಲವೊಮ್ಮೆ ತಿಳಿ ಗುಲಾಬಿ ಅಥವಾ ಚಿನ್ನದ ಛಾಯೆ ಕಾಣಿಸುತ್ತದೆ. ಸೂರ್ಯ ಮೇಲೆ ಬಂದಂತೆ ನೀರು ಕ್ರಮೇಣ ಹಸಿರು ಮಿಶ್ರಿತ ನೀಲಿ ಬಣ್ಣಕ್ಕೆ ತಿರುಗುತ್ತದೆ.

ಸೂರ್ಯನ ಕಿರಣಗಳು ನೇರವಾಗಿ ನೀರಿನ ಆಳಕ್ಕೆ ಇಳಿದಾಗ ಸರೋವರವು ಅತ್ಯಂತ ರಮಣೀಯವಾದ ಗಾಢ ನೀಲಿ ಅಥವಾ ರಾಯಲ್ ಬ್ಲೂ ಬಣ್ಣಕ್ಕೆ ಬದಲಾಗುತ್ತದೆ. ಮೋಡ ಆವರಿಸಿದಾಗ ಅಥವಾ ತಣ್ಣನೆಯ ಗಾಳಿಯಿಂದ ನೀರಿನ ಅಲೆಗಳು ಎದ್ದಾಗ ನೀರು ಹಸಿರು ಅಥವಾ ಬೂದು ಮಿಶ್ರಿತ ಹಸಿರು ಬಣ್ಣಕ್ಕೆ ಬದಲಾಗುತ್ತದೆ.
ಸಂಜೆಯ ಕೆಂಬಿಸಿಲಿಗೆ ನೀರು ನೇರಳೆ ಮಿಶ್ರಿತ ನೀಲಿ ಅಥವಾ ರಕ್ತಕೆಂಪು/ಕಿತ್ತಳೆ ಬಣ್ಣದ ಹೊಳಪನ್ನು ಪಡೆದುಕೊಂಡು ಕತ್ತಲಾಗುತ್ತಿದ್ದಂತೆ ಗಾಢ ಕಪ್ಪಿನ ಛಾಯೆಗೆ ಜಾರುತ್ತದೆ.
ತಿಂಗಳುಗಳಿಗೆ ತಕ್ಕಂತೆ ಬಣ್ಣ ಬದಲು:
ತಿಂಗಳುಗಳು ಉರುಳಿದಂತೆ ತಾಪಮಾನ ಮತ್ತು ಹವಾಮಾನ ಬದಲಾಗುವುದರಿಂದ ಸರೋವರದ ರೂಪವೇ ಸಂಪೂರ್ಣ ಬದಲಾಗುತ್ತದೆ.

ಮೇ – ಜೂನ್:
ಸರೋವರದ ಅತ್ಯಂತ ಸುಂದರ ರೂಪ ಕಾಣಸಿಗುವುದು ಇದೇ ಸಮಯದಲ್ಲಿ. ಬಿಸಿಲು ತೀಕ್ಷ್ಣವಾಗಿದ್ದು, ನೀರು ಏಕಕಾಲದಲ್ಲಿ ಕರಾವಳಿಯ ಬಳಿ ತಿಳಿ ಹಸಿರು, ಮಧ್ಯದಲ್ಲಿ ಹಸಿರು ಮಿಶ್ರಿತ ನೀಲಿ ಬಣ್ಣ ಮತ್ತು ಆಳದ ಭಾಗದಲ್ಲಿ ಗಾಢ ರಾಯಲ್ ಬ್ಲೂ ಆಗಿ ಪದರ-ಪದರವಾಗಿ ಕಂಗೊಳಿಸುತ್ತದೆ.
ಜುಲೈ – ಆಗಸ್ಟ್:
ಈ ತಿಂಗಳುಗಳಲ್ಲಿ ನೀರು ಸ್ಫಟಿಕದಂತಹ ತಿಳಿ ನೀಲಿ ಬಣ್ಣದಲ್ಲಿರುತ್ತದೆ. ಸುತ್ತಲಿನ ಬೆಟ್ಟಗಳಲ್ಲಿ ಉಳಿದಿರುವ ಹಿಮದ ಬಿಳುಪು ನೀರಿನಲ್ಲಿ ಪ್ರತಿಫಲಿಸುತ್ತದೆ.
ಸೆಪ್ಟೆಂಬರ್ – ಅಕ್ಟೋಬರ್:
ಆಕಾಶ ಸಂಪೂರ್ಣ ತಿಳಿಯಾಗಿರುತ್ತದೆ, ಗಾಳಿಯ ವೇಗ ಹೆಚ್ಚಿರುತ್ತದೆ. ಈ ಸಮಯದಲ್ಲಿ ಸರೋವರವು ಅತಿ ಹೆಚ್ಚು ಗಾಢ ನೇರಳೆ ಮಿಶ್ರಿತ ನೀಲಿ ಬಣ್ಣವನ್ನು ಪ್ರದರ್ಶಿಸುತ್ತದೆ.
ನವೆಂಬರ್ – ಏಪ್ರಿಲ್:
ತಾಪಮಾನವು ಮೈನಸ್ 20 ರಿಂದ 30 ಡಿಗ್ರಿ ಸೆಲ್ಸಿಯಸ್ಗೆ ಕುಸಿಯುತ್ತದೆ. ಈ ಸಮಯದಲ್ಲಿ ಸರೋವರವು ತನ್ನ ಎಲ್ಲಾ ಬಣ್ಣಗಳನ್ನು ಕಳೆದುಕೊಂಡು ಸಂಪೂರ್ಣವಾಗಿ ಬಿಳಿ ಮಂಜುಗಡ್ಡೆಯ ಹಾಳೆಯಾಗಿ ಮಾರ್ಪಡುತ್ತದೆ.

ಸರೋವರಕ್ಕೆ ತಲುಪುವುದು ಹೇಗೆ?
ಪ್ಯಾಂಗ್ಯಾಂಗ್ ತಲುಪಲು ಲಡಾಖ್ನ ರಾಜಧಾನಿ ಲೇಹ್ (Leh) ಮುಖ್ಯ ಕೇಂದ್ರ. ಲೇಹ್ನಿಂದ ಪ್ಯಾಂಗ್ಯಾಂಗ್ ಸರೋವರಕ್ಕೆ ಸುಮಾರು 140 ರಿಂದ 160 ಕಿ.ಮೀ ದೂರವಿದ್ದು, ತಲುಪಲು 5 ರಿಂದ 6 ಗಂಟೆಗಳ ಪ್ರಯಾಣ ಬೇಕಾಗುತ್ತದೆ.
ವಿಮಾನದ ಮೂಲಕ ಪ್ರಯಾಣಿಸುವುದಾದರೆ ಲೇಹ್ನಲ್ಲಿರುವ ಕುಶೋಕ್ ಬಕುಲಾ ರಿಂಪೋಚಿ ವಿಮಾನ ನಿಲ್ದಾಣಕ್ಕೆ ದೆಹಲಿ ಅಥವಾ ಪ್ರಮುಖ ನಗರಗಳಿಂದ ನೇರ ವಿಮಾನಗಳಿವೆ.ಅಲ್ಲಿಂದ ಟ್ಯಾಕ್ಸಿ, ಕಾರು ಅಥವಾ ಬೈಕ್ ಬಾಡಿಗೆಗೆ ಪಡೆದು ಪ್ರಯಾಣಿಸಬಹುದು. ಈ ಪ್ರಯಾಣವು ವಿಶ್ವದ ಅತಿ ಎತ್ತರದ ಮೋಟಾರು ರಸ್ತೆಗಳಲ್ಲಿ ಒಂದಾದ ಚಾಂಗ್ ಲಾ (Chang La Pass) ಮೂಲಕ ಸಾಗುತ್ತದೆ.
ಇನ್ನೂ ಲಡಾಖ್ನ ಲೇಹ್ ಅಥವಾ ಪ್ಯಾಂಗ್ಯಾಂಗ್ ಸರೋವರಕ್ಕೆ ನೇರ ರೈಲು ಸಂಪರ್ಕವಿಲ್ಲ. ಆದರೆ, ರೈಲಿನ ಮೂಲಕ ಪ್ರಯಾಣಿಸಲು ಬಯಸುವವರು ಲಡಾಖ್ಗೆ ಹತ್ತಿರವಿರುವ ಜಮ್ಮು ತಾವಿ, ಉಧಮ್ಪುರ, ಚಂಡೀಗಢ ರೈಲ್ವೆ ನಿಲ್ದಾಣಗಳನ್ನು ತಲುಪಿ, ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಲೇಹ್ಗೆ ಹೋಗಬಹುದು.

ಜಮ್ಮು ತಾವಿ ರೈಲ್ವೆ ನಿಲ್ದಾಣದಿಂದ ಶ್ರೀನಗರಕ್ಕೆ ತಲುಪಿ ಶ್ರೀನಗರದಿಂದ ಸೋನ್ಮಾರ್ಗ್, ಕಾರ್ಗಿಲ್ ಮಾರ್ಗವಾಗಿ ಸುಂದರ ಹೆದ್ದಾರಿಯ ಮೂಲಕ ಲೇಹ್ ತಲುಪಬಹುದು. ಜೊತೆಗೆ ರೈಲಿನ ಮೂಲಕ ಚಂಡೀಗಢ ತಲುಪಿ, ಅಲ್ಲಿಂದ ಮನಾಲಿ ಕಡೆಗೆ ರಸ್ತೆ ಮಾರ್ಗವಾಗಿ ತೆರಳಬಹುದು.
ಯಾವುದೇ ರೈಲ್ವೆ ನಿಲ್ದಾಣದಿಂದ ಲೇಹ್ ತಲುಪಿದ ನಂತರ, ಅಲ್ಲಿಂದ ಪ್ಯಾಂಗ್ಯಾಂಗ್ ಸರೋವರಕ್ಕೆ ರಸ್ತೆ ಮಾರ್ಗವಾಗಿ ಮಾತ್ರ ತೆರಳಲು ಸಾಧ್ಯ.
ಪ್ರಯಾಣಕ್ಕೆ ಏನೆಲ್ಲಾ ಅಗತ್ಯ?
ಇನ್ನರ್ ಲೈನ್ ಪರ್ಮಿಟ್ (ILP):
ಪ್ಯಾಂಗ್ಯಾಂಗ್ ಗಡಿ ನಿಯಂತ್ರಣ ರೇಖೆಯ (LAC) ಬಳಿ ಇರುವುದರಿಂದ ಭಾರತೀಯ ಪ್ರವಾಸಿಗರಿಗೆ ಇನ್ನರ್ ಲೈನ್ ಪರ್ಮಿಟ್ (Inner Line Permit) ಕಡ್ಡಾಯ. ಇದನ್ನು ಲೇಹ್ ತಲುಪಿದ ನಂತರ ಆನ್ಲೈನ್ನಲ್ಲಿ (lahdclehpermit.in) ಅಥವಾ ಸ್ಥಳೀಯ ಟ್ರಾವೆಲ್ ಏಜೆನ್ಸಿಗಳ ಮೂಲಕ ಸುಲಭವಾಗಿ ಪಡೆಯಬಹುದು. (ಆಧಾರ್ ಕಾರ್ಡ್ ಅಗತ್ಯ).

ಏನಿದು?
ಭಾರತದ ಅಂತಾರಾಷ್ಟ್ರೀಯ ಗಡಿ ಭಾಗಗಳಿಗೆ ಹತ್ತಿರವಿರುವ ನಿರ್ದಿಷ್ಟ ಪ್ರದೇಶಗಳಿಗೆ ಪ್ರವೇಶಿಸಲು ಭಾರತೀಯ ಪ್ರಜೆಗಳಿಗೆ ಸರ್ಕಾರ ನೀಡುವ ಅಧಿಕೃತ ಪ್ರಯಾಣ ಪರವಾನಗಿ ಪತ್ರವೇ ಇನ್ನರ್ ಲೈನ್ ಪರ್ಮಿಟ್. ಇದು ಭಾರತದ ಹೊರಗಿನ ಪ್ರದೇಶಗಳಿಗೆ ಹೋಗಲು ನೀಡುವ ವೀಸಾದಂತೆಯೇ, ದೇಶದೊಳಗಿನ ರಕ್ಷಿತ ಪ್ರದೇಶಗಳಿಗೆ ಪ್ರವೇಶಿಸಲು ನೀಡುವ ತಾತ್ಕಾಲಿಕ ಅನುಮತಿ.
ಗಡಿ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಗಳ ಸಮೀಪವಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಅನಧಿಕೃತ ಓಡಾಟವನ್ನು ತಡೆಯುವುದು ಮತ್ತು ಭದ್ರತೆಯನ್ನು ಕಾಪಾಡುವುದು. ಇದರ ಮುಖ್ಯ ಉದ್ದೇಶವಾಗಿದೆ.
ಲಡಾಖ್ನ ಲೇಹ್ ನಗರಕ್ಕೆ ಭೇಟಿ ನೀಡಲು ಯಾವುದೇ ಪರ್ಮಿಟ್ ಅಗತ್ಯವಿಲ್ಲ. ಆದರೆ, ಚೀನಾ ಗಡಿಗೆ ಹೊಂದಿಕೊಂಡಿರುವ ಪ್ಯಾಂಗ್ಯಾಂಗ್ ಸರೋವರ, ನುಬ್ರಾ ಕಣಿವೆ (Nubra Valley), ತ್ಸೋ ಮೊರಿರಿ (Tso Moriri) ಮತ್ತು ಖರ್ದುಂಗ್ ಲಾನಂತಹ ಸೂಕ್ಷ್ಮ ಗಡಿ ಪ್ರದೇಶಗಳಿಗೆ ಹೋಗಲು ಭಾರತೀಯ ಪ್ರಜೆಗಳು ಈ ಪರ್ಮಿಟ್ ಪಡೆಯುವುದು ಕಡ್ಡಾಯ.

ಭಾರತೀಯ ನಾಗರಿಕರು ತಮ್ಮ ಅಧಿಕೃತ ಗುರುತಿನ ಚೀಟಿ (ಆಧಾರ್ ಕಾರ್ಡ್, ವೋಟರ್ ಐಡಿ) ನೀಡಿ ಆನ್ಲೈನ್ ಪೋರ್ಟಲ್ ಮೂಲಕ ಅಥವಾ ಲೇಹ್ನ ಜಿಲ್ಲಾಧಿಕಾರಿ ಕಚೇರಿಯ ಮೂಲಕ ನಿಗದಿತ ಶುಲ್ಕ ಪಾವತಿಸಿ ಸುಲಭವಾಗಿ ಇದನ್ನು ಪಡೆಯಬಹುದು.
ಪ್ರಕೃತಿಯ ಸೌಂದರ್ಯಕ್ಕೆ ಗಡಿಗಳಿಲ್ಲ ಎಂಬುದಕ್ಕೆ ಲಡಾಖ್ನ ಈ ಪ್ಯಾಂಗ್ಯಾಂಗ್ ಸರೋವರವೇ ಜೀವಂತ ಸಾಕ್ಷಿ. ವಿಜ್ಞಾನದ ಬೆಳಕಿನ ವಕ್ರೀಭವನ, ನೀರಿನಲ್ಲಿರುವ ಲವಣಾಂಶ ಮತ್ತು ಎತ್ತರದ ವಾತಾವರಣ ಕ್ಷಣಕ್ಷಣಕ್ಕೂ ಬಣ್ಣ ಬದಲಿಸುವ ಈ ಜಲರಾಶಿ ಪ್ರತಿಯೊಬ್ಬ ಪ್ರವಾಸಿಗನಿಗೂ ಕಣ್ಣಿಗೆ ಹಬ್ಬ.ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಿ ಕಣ್ತುಂಬಿಕೊಳ್ಳಲೇಬೇಕಾದ ಭೂಮಿಯ ಮೇಲಿನ ಅಪ್ರತಿಮ ವಿಸ್ಮಯವಿದು.

