ಕಬ್ಜ ಚಿತ್ರದ ನಂತರ ಆರ್.ಚಂದ್ರು ನಿರ್ದೇಶಿಸುತ್ತಿರುವ, ಆರ್ ಸಿ ಸ್ಟುಡಿಯೋಸ್ ನಿರ್ಮಾಣದ ಹಾಗೂ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ (Shivarajkumar) ನಾಯಕರಾಗಿ ನಟಿಸುತ್ತಿರುವ `ಒರಿಜಿನಲ್ ಮಾನ್ ಸ್ಟರ್’ (OM) ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ.
ಭರ್ಜರಿ ಯಶಸ್ಸು ಕಂಡ ಪ್ಯಾನ್ ಇಂಡಿಯಾ ಕಬ್ಜ ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳ ನಿರ್ದೇಶಕ ಆರ್ ಚಂದ್ರು, ಎರಡೂವರೆ ವರ್ಷಗಳ ನಂತರ ಒರಿಜಿನಲ್ ಮಾನ್ ಸ್ಟರ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಆನಂದ್ ಪಂಡಿತ್ ಅರ್ಪಿಸುವ, ಆರ್ ಸಿ ಸ್ಟುಡಿಯೋಸ್ ಲಾಂಛನದಲ್ಲಿ ಯಮುನ ಚಂದ್ರು ಅವರು ನಿರ್ಮಿಸುತ್ತಿರುವ ಹಿಂದಿ ಹಾಗೂ ಕನ್ನಡ ಎರಡು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್; ಮತ್ತೆ 2 ಅರ್ಜಿ ಸಲ್ಲಿಸಿದ ಆರೋಪಿ, ನಟ ದರ್ಶನ್

ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸುತ್ತಿರುವ “ಒರಿಜಿನಲ್ ಮಾನ್ ಸ್ಟರ್” ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ಮುಂಬೈನಲ್ಲಿ ಹಾಗೂ ಮುಹೂರ್ತ ಸಮಾರಂಭ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಈಗ ಬಹುನಿರೀಕ್ಷಿತ ಈ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರಿನಲ್ಲಿ ನಿರ್ಮಿಸಲಾಗಿದ್ದ ಅದ್ದೂರಿ ಸೆಟ್‌ಗಳಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಅಂದುಕೊಂಡ ಹಾಗೆ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣವಾಗಿದ್ದು, ಎರಡನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಅಣಿಯಾಗುತ್ತಿದೆ. ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ತೆಲುಗು ನಟ ಸುನೀಲ್ ಹಾಗೂ ಅನೇಕ ಕಲಾವಿದರು ಈ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.
ಆರ್ ಚಂದ್ರು ಅವರ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರು ನಾಯಕರಾಗಿ ನಟಿಸಿದ್ದ ಮೈಲಾರಿ ಚಿತ್ರ ನೋಡುಗರ ಮೆಚ್ಚುಗೆಗೆ ಪಾತ್ರವಾಗಿ ಭರ್ಜರಿ ಯಶಸ್ಸು ಕಂಡಿತ್ತು. ಆರ್ ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಕಬ್ಜ ಚಿತ್ರದಲ್ಲೂ ಶಿವರಾಜಕುಮಾರ್ ವಿಶೇಷಪಾತ್ರದಲ್ಲಿ ಅಭಿನಯಿಸಿದ್ದರು . ಈಗ ಆರ್ ಚಂದ್ರು ಹಾಗೂ ಶಿವರಾಜಕುಮಾರ್ ಅವರ ಕಾಂಬಿನೇಶನ್ ನಲ್ಲಿ ಚಿತ್ರ ಮೂಡಬರುತ್ತಿದ್ದು, ಈ ಚಿತ್ರ ಆರಂಭದಲ್ಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಹಾಗೂ ಎ ಜೆ ಅವರ ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಎಲ್ಲಾ ಭಾಷೆಗಳ ಜನಪ್ರಿಯ ಕಲಾವಿದರು ಅಭಿನಯಿಸಿಲಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ಆರ್ ಚಂದ್ರು ಹೇಳಿದ್ದಾರೆ.ಇದನ್ನೂ ಓದಿ: ಕೇಳುಗರು ಮೆಚ್ಚಿಕೊಂಡ ರಾಜನಿವಾಸದ `ಅಣ್ಣ ಯಾರು’ ಸಾಂಗ್

