ಬೆಂಗಳೂರು: ಉಳಿಕೆ ಮೂಲ ವೃಂದದ ಭೂಮಾಪಕರು (Land Surveyor) ಹಾಗೂ ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳಿಗೆ ಕ್ರಮವಾಗಿ ಅ.2 ಮತ್ತು 4ರಂದು ಲಿಖಿತ ಪರೀಕ್ಷೆ ನಡೆಸುತ್ತಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಅ.2ರಂದು ನಡೆಯುವ ಭೂಮಾಪಕರ ಹುದ್ದೆಗೆ 92,701 ಹಾಗೂ ಅ.4ರಂದು ನಡೆಯುವ ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ 4,11,656 ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಭೂಮಾಪಕರ ಪರೀಕ್ಷೆ ಒಟ್ಟು 225 ಕೇಂದ್ರ ಹಾಗೂ ಗ್ರಾಮ ಆಡಳಿತಾಧಿಕಾರಿ ಪರೀಕ್ಷೆಯನ್ನು 505 ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಅಕ್ರಮಗಳಿಗೆ ಅವಕಾಶ ಇಲ್ಲದಂತೆ ನಿಗಾ ವಹಿಸಲು ಕ್ಯಾಮರಾ ಕಣ್ಗಾವಲು ಅಲ್ಲದೆ ಇತರ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಪರೀಕ್ಷೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ವೆಬ್ ಕಾಸ್ಟಿಂಗ್ ಮೂಲಕ ನಿಗಾ ವಹಿಸಲು ಕೆಇಎ ಪ್ರಧಾನ ಕಚೇರಿಯಲ್ಲಿ ಕಮಾಂಡ್ ಸೆಂಟರ್ ಸ್ಥಾಪಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಪರೀಕ್ಷೆ ಮುಗಿದ ತಕ್ಷಣವೇ ಅಭ್ಯರ್ಥಿಗಳ ಒಎಂಆರ್ ಪ್ರತಿಗಳನ್ನು ಸ್ಕ್ಯಾನ್ ಮಾಡಿ ವೆಬ್ ಸೈಟ್ ಗೆ ಅಪ್ ಲೋಡ್ ಮಾಡಲು ಬೆಂಗಳೂರು ಅಲ್ಲದೆ, ಕಲ್ಬುರ್ಗಿ, ರಾಯಚೂರು, ಧಾರವಾಡ, ಬಳ್ಳಾರಿ, ವಿಜಯಪುರ, ದಾವಣಗೆರೆ ಮತ್ತು ಮೈಸೂರು ನಗರದಲ್ಲಿ ವಿಶೇಷವಾದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್ ಕೂಡ ಅಳವಡಿಸಲಾಗುತ್ತದೆ. ಮುಖ ಚಹರೆ ಪತ್ತೆ ತಂತ್ರಜ್ಞಾನದ ಮೂಲಕವೇ ಅಭ್ಯರ್ಥಿಗಳನ್ನು ತಪಾಸಣೆ ಮಾಡಿ, ಪರೀಕ್ಷಾ ಕೇಂದ್ರದೊಳಗೆ ಬಿಡಲಾಗುತ್ತದೆ. ತಪಾಸಣೆಯ ಉಸ್ತುವಾರಿಗೆ ಸ್ಥಳೀಯ ಪೊಲೀಸ್ ಅಲ್ಲದೆ ಗೃಹ ರಕ್ಷಕ ದಳದ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

