ಪಾಸ್ತಾ ಪ್ರಿಯರಿಗೆ ಹೊಸದೊಂದು ರೆಸಿಪಿ ಟ್ರೈ ಮಾಡಬೇಕು ಅನ್ನಿಸಿದ್ರೆ ಬೇಕ್ಡ್ ಫೆಟಾ ಪಾಸ್ತಾ ಒಮ್ಮೆ ಮಾಡಿ ನೋಡಿ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದ ಈ ರೆಸಿಪಿ ಮಾಡೋದು ತುಂಬಾ ಸುಲಭ. ಹೆಚ್ಚು ಅಡುಗೆ ಅನುಭವ ಇಲ್ಲದವರೂ ಮನೆಯಲ್ಲೇ ಇದನ್ನು ತಯಾರಿಸಬಹುದು.
ಫೆಟಾ ಚೀಸ್, ಚೆರ್ರಿ ಟೊಮೆಟೊ, ಬೆಳ್ಳುಳ್ಳಿ ಮತ್ತು ಗಿಡಮೂಲಿಕೆಗಳ ಫ್ಲೇವರ್‌ನಿಂದ ಈ ಪಾಸ್ತಾ ರುಚಿಯಾಗಿರುತ್ತದೆ. ಲಂಚ್, ಡಿನ್ನರ್ ಅಥವಾ ಸಂಜೆ ಹೊತ್ತಿನಲ್ಲಿ ಕೂಡ ಇದನ್ನು ಸವಿಯಬಹುದು.

ಬೇಕಾಗುವ ಪದಾರ್ಥಗಳು
ಪಾಸ್ತಾ – 200 ಗ್ರಾಂ
ಫೆಟಾ ಚೀಸ್ – 1 ಬ್ಲಾಕ್
ಚೆರ್ರಿ ಟೊಮೆಟೊ – 1 ಕಪ್
ಬೆಳ್ಳುಳ್ಳಿ – 5-6 ಎಸಳು
ಆಲಿವ್ ಆಯಿಲ್ – 2 ಟೇಬಲ್ ಸ್ಪೂನ್
ಒಣಗಿದ ಗಿಡಮೂಲಿಕೆಗಳು – 1 ಟೀ ಸ್ಪೂನ್
ಕರಿಮೆಣಸು ಪುಡಿ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ
ಮೊದಲು ಪಾಸ್ತಾವನ್ನು ಒಂದು ಪಾತ್ರೆಯಲ್ಲಿ ನೀರು ಕುದಿಸಿ, ಸ್ವಲ್ಪ ಉಪ್ಪು ಹಾಕಿ ಬೇಯಿಸಿಕೊಳ್ಳಿ. ಪಾಸ್ತಾ ಸಂಪೂರ್ಣ ಮೆತ್ತಗಾಗದಂತೆ ಸ್ವಲ್ಪ ಗಟ್ಟಿಯಾಗಿರುವಾಗಲೇ ನೀರು ಬಸಿದುಕೊಳ್ಳಿ.
ಈಗ ಒಂದು ಬೇಕಿಂಗ್ ಡಿಶ್ ತೆಗೆದುಕೊಂಡು ಅದರ ಮಧ್ಯದಲ್ಲಿ ಫೆಟಾ ಚೀಸ್ ಬ್ಲಾಕ್ ಇಡಿ. ಅದರ ಸುತ್ತಲೂ ಚೆರ್ರಿ ಟೊಮೆಟೊ ಮತ್ತು ಬೆಳ್ಳುಳ್ಳಿ ಹಾಕಿ. ಮೇಲೆ ಆಲಿವ್ ಆಯಿಲ್, ಒಣಗಿದ ಗಿಡಮೂಲಿಕೆಗಳು ಮತ್ತು ಸ್ವಲ್ಪ ಕರಿಮೆಣಸು ಪುಡಿ ಸಿಂಪಡಿಸಿ.
ನಂತರ ಇದನ್ನು ಸುಮಾರು 400°F (204°C) ಉಷ್ಣಾಂಶದಲ್ಲಿ ಬೇಕ್ ಮಾಡಿ. ಟೊಮೆಟೊಗಳು ಮೆತ್ತಗಾಗಿ, ಫೆಟಾ ಚೀಸ್ ಸಾಫ್ಟ್ ಆದ ಬಳಿಕ ಹೊರತೆಗೆದು ಎಲ್ಲವನ್ನೂ ಚೆನ್ನಾಗಿ ಮ್ಯಾಶ್ ಮಾಡಿ ಮಿಕ್ಸ್ ಮಾಡಿ.
ಕೊನೆಯಲ್ಲಿ ಬೇಯಿಸಿಕೊಂಡ ಪಾಸ್ತಾವನ್ನು ಇದಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಚೀಸ್ ಮತ್ತು ಟೊಮೆಟೊ ಸಾಸ್ ಪಾಸ್ತಾಗೆ ಸಮವಾಗಿ ತಗುಲುವಂತೆ ಟಾಸ್ ಮಾಡಿದರೆ ರುಚಿಯಾದ ಬೇಕ್‌ಡ್ ಫೆಟಾ ಪಾಸ್ತಾ ರೆಡಿ.
ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಈ ಬೇಕ್‌ಡ್ ಫೆಟಾ ಪಾಸ್ತಾ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ. ಕುಟುಂಬದವರೊಂದಿಗೆ ರೆಸ್ಟೋರೆಂಟ್ ಸ್ಟೈಲ್ ರುಚಿಯನ್ನು ಸವಿಯಿರಿ.

