ಪುಣೆ: ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ (Pune Murder Case) ತನಿಖೆಯಲ್ಲಿ ಹಲವು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. ಪುಣೆ ಪೊಲೀಸರು ಸಲ್ಲಿಸಿರುವ 5,053 ಪುಟಗಳ ಆರೋಪಪಟ್ಟಿಯಲ್ಲಿ, ಕೇತನ್ನನ್ನು ಕೊಲ್ಲುವ ಪ್ಲ್ಯಾನ್ಗೂ ಮುನ್ನ ಆತನ ಕೈಕಾಲು ಮುರಿಸಲು ಬೆಂಗಳೂರಿಗೆ ಕರೆತರುವ ಯೋಜನೆ ಮಾಡಲಾಗಿತ್ತು ಎಂದು ಉಲ್ಲೇಖಿಸಲಾಗಿದೆ.
ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ರಿತೇಶ್ ಹಾಂಗೆ ಬೆಂಗಳೂರಿನಲ್ಲಿರುವ ತನ್ನ ಸ್ನೇಹಿತನೊಂದಿಗೆ ಈ ಬಗ್ಗೆ ಚರ್ಚಿಸಿದ್ದ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.
ಕೊಲೆಗೆ ಮುನ್ನ ಹಲವು ಪ್ಲ್ಯಾನ್
25 ವರ್ಷದ ಕೇತನ್ ಅಗರ್ವಾಲ್ ಅವರನ್ನು ಅವರ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಪುಣೆಯ ಲೋಹಗಢ ಕೋಟೆಯಿಂದ ಕಂದಕಕ್ಕೆ ತಳ್ಳಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ವರದಿಯಲ್ಲಿ ತಿಳಿದುಬಂದಿದೆ. ಪ್ರಕರಣದಲ್ಲಿ ರಿತೇಶ್ ಹಾಂಗೆ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಕೇತನ್ ಮತ್ತು ಸಿಯಾ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನವೆಂಬರ್ನಲ್ಲಿ ಜೈಪುರದಲ್ಲಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಸಿಯಾಗೆ ಕೇತನ್ನನ್ನು ಮದುವೆಯಾಗಲು ಇಷ್ಟವಿರಲಿಲ್ಲ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಕೇತನ್ನನ್ನು ಕೊಲೆ ಮಾಡುವ ಮೊದಲು ಆತನನ್ನು ಬೆಂಗಳೂರಿಗೆ ಕರೆಸಿ ಕೈಕಾಲು ಮುರಿಸಬೇಕೆಂದು ಪ್ಲ್ಯಾನ್ ಮಾಡಲಾಗಿತ್ತು. ಚೇತನ್ ಸ್ನೇಹಿತ ರಿತೇಶ್ ಹಾಂಗೆ ಬೆಂಗಳೂರಿನಲ್ಲಿರುವ ತನ್ನ ಸ್ನೇಹಿತನೊಂದಿಗೆ ಈ ವಿಚಾರದ ಕುರಿತು ಮಾತುಕತೆ ಕೂಡ ಆಗಿತ್ತು. ಆದರೆ ಬೆಂಗಳೂರಿನಲ್ಲಿರುವ ಸ್ನೇಹಿತ ಈ ಪ್ಲ್ಯಾನ್ಗೆ ಒಪ್ಪಿಕೊಂಡಿರಲಿಲ್ಲ. ಅದಾದ ನಂತರ ಲೋಹಗಢಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಲು ಫ್ಲ್ಯಾನ್ ಮಾಡಲಾಗಿತ್ತು ಎಂದು ಚಾರ್ಜ್ಶೀಟ್ನಲ್ಲಿ ದಾಖಲಿಸಲಾಗಿದೆ. ಇದನ್ನೂ ಓದಿ: ಸೌಜನ್ಯ ಕೇಸ್: SITಯಿಂದ ನನ್ನ ಕೈಬಿಡಿ ಅಂತ ಎಎಸ್ಪಿ ಪತ್ರ
ಕೊಲೆಯ ಯೋಜನೆ ರೂಪಿಸುವ ವೇಳೆ ಆರೋಪಿಗಳು ಕೊಲೆಗೆ ಸಂಬಂಧಿಸಿದ ಸಿನಿಮಾಗಳನ್ನು ವೀಕ್ಷಿಸಿದ್ದರು. ಅಲ್ಲದೆ, ಪೊಲೀಸರಿಂದ ಪತ್ತೆಯಾಗುವುದನ್ನು ತಪ್ಪಿಸುವ ಕುರಿತು ಪಾಡ್ಕಾಸ್ಟ್ಗಳನ್ನು ಕೇಳಿದ್ದರು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.ಇದನ್ನೂ ಓದಿ: ಉಪ್ಪು, ಸಕ್ಕರೆ ಬಳಿಕ ಈಗ ಅಡುಗೆ ಎಣ್ಣೆ ಬಳಕೆಗೆ ಮಾರ್ಗಸೂಚಿ

