ಮಡಿಕೇರಿ: ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಸುಮಾರು 19 ವರ್ಷದ ಗಂಡಾನೆಯೊಂದು ಮೃತಪಟ್ಟಿದೆ.
ಕಾದಾಟದಲ್ಲಿ ಗಾಯಗೊಂಡು, ಮುರಿದ ದಂತದೊಂದಿಗೆ ಶಿಬಿರಕ್ಕೆ ಬಂದಿದ್ದ ಆನೆಗೆ ಅರಣ್ಯ ಇಲಾಖೆ ಕಳೆದ ಐದು ತಿಂಗಳಿಗೂ ಹೆಚ್ಚು ಕಾಲ ನಿರಂತರ ಚಿಕಿತ್ಸೆ ನೀಡಿತ್ತು. ತಜ್ಞ ವೈದ್ಯರ ತಂಡದಿಂದಲೂ ಚಿಕಿತ್ಸೆ ನೀಡಲಾಗಿತ್ತು. ಆದರೆ, ಇಂದು ಬೆಳಗ್ಗೆ ಆನೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ.
ಆನೆಯನ್ನು ಪ್ರತ್ಯೇಕವಾಗಿಟ್ಟು, ಯಾವುದೇ ರೀತಿಯ ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ಆರೈಕೆ ಮಾಡಲಾಗಿತ್ತು. ಪ್ರತಿದಿನ ಆ್ಯಂಟಿಬಯೋಟಿಕ್ಸ್, ನೋವು ನಿವಾರಕ ಔಷಧಿ, ಗಾಯಗಳಿಗೆ ಚಿಕಿತ್ಸೆ ಹಾಗೂ ಅಗತ್ಯ ಪೋಷಕಾಂಶಗಳನ್ನು ನೀಡಲಾಗುತ್ತಿತ್ತು.
ಹೆಚ್ಚಿನ ತಜ್ಞ ಚಿಕಿತ್ಸೆಗೆ ವೈಲ್ಡ್ಲೈಫ್ ಎಸ್ಒಎಸ್ ಸಂಸ್ಥೆಯ ನುರಿತ ವನ್ಯಜೀವಿ ಪಶುವೈದ್ಯರ ತಂಡವನ್ನೂ ಕರೆಸಿ ಜಂಟಿಯಾಗಿ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಈ ವೇಳೆ ನಡೆಸಿದ ಡಿಜಿಟಲ್ ಎಕ್ಸ್-ರೇ ಪರೀಕ್ಷೆಯಲ್ಲಿ ಆನೆಯ ಎಡ ಮೊಣಕೈ ಮೂಳೆಯಲ್ಲಿ ಬಿರುಕು ಇರುವುದು ಪತ್ತೆಯಾಗಿತ್ತು. ತಜ್ಞ ವೈದ್ಯರ ಸಲಹೆಯಂತೆ ಸುಧಾರಿತ ಚಿಕಿತ್ಸೆಯನ್ನು ಮುಂದುವರಿಸಲಾಗಿತ್ತು. ಇದನ್ನೂ ಓದಿ: ಏನೇ ಭಿನ್ನಾಭಿಪ್ರಾಯಗಳಿದ್ದರೂ ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಿಕೊಳ್ಳುತ್ತೇವೆ: ಪ್ರದೀಪ್ ಈಶ್ವರ್
ಕಾಲಿನ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಆನೆಯನ್ನು ಕ್ರಾಲ್ನಿಂದ ಹೊರಗೆ ಬಿಡಲಾಗಿತ್ತು. ಜೊತೆಗೆ, ಗಾಯಗೊಂಡ ಕಾಲನ್ನು ಸ್ಥಿರವಾಗಿಡಲು ಸೆ. 27ರಂದು ತಜ್ಞರ ಮೂಲಕ ಫೈಬರ್ಗ್ಲಾಸ್ ಬ್ಯಾಂಡೇಜ್ ಅಳವಡಿಸಲಾಗಿತ್ತು.ಆದರೆ, ಇಂದು ಬೆಳಗ್ಗೆ 9:50ರ ಸುಮಾರಿಗೆ ಆನೆ ಏಕಾಏಕಿ ಕುಸಿದು ಬಿದ್ದಿದೆ. ಕೂಡಲೇ ತುರ್ತು ಗ್ಲುಕೋಸ್ ಹಾಗೂ ಐವಿ ಚಿಕಿತ್ಸೆ ಸೇರಿದಂತೆ ತೀವ್ರ ನಿಗಾ ವಹಿಸಿದರೂ, ಚಿಕಿತ್ಸೆ ಫಲಿಸದೆ ಆನೆ ಕೊನೆಯುಸಿರೆಳೆದಿದೆ.
ಸದ್ಯ ಆನೆಯ ಸಾವಿನ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ದೀರ್ಘಕಾಲದ ಮೂಳೆ ಮುರಿತದ ಸಮಸ್ಯೆ, ನಿರಂತರ ಅನಾರೋಗ್ಯ ಹಾಗೂ ದೈಹಿಕ ದೌರ್ಬಲ್ಯದಿಂದಾಗಿ ಆನೆ ಮೃತಪಟ್ಟಿರಬಹುದು ಎಂದು ಪ್ರಾಥಮಿಕ ಪಶುವೈದ್ಯಕೀಯ ವರದಿಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ದ್ರಾವಿಡರ ಶಿವ ಬಡವ, ಆರ್ಯರ ರಾಮ ಶ್ರೀಮಂತ: ರೇವಂತ್ ರೆಡ್ಡಿ ವಿವಾದಾತ್ಮಕ ಹೇಳಿಕೆ
ದುಬಾರೆ ಆನೆ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡಾನೆಯ ಸಾವು ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಪ್ರಿಯರಲ್ಲಿ ಬೇಸರ ಮೂಡಿಸಿದೆ.

