ಬಾಗಲಕೋಟೆ: ಕೃಷ್ಣಾ, ಮಲಪ್ರಭಾ ಮತ್ತು ಘಟಪ್ರಭಾ – ಈ ಮೂರು ಪ್ರಮುಖ ನದಿಗಳು ಮೈದುಂಬಿ ಹರಿಯುತ್ತಿರುವ ಜಿಲ್ಲೆ ಬಾಗಲಕೋಟೆ. ಪ್ರವಾಹದ ಭೀತಿ ಎದುರಾಗಿ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಪರರಾಜ್ಯಗಳ ಪಾಲಾಗುತ್ತಿದ್ದರೂ, ಜಿಲ್ಲೆಯ ಕೆರೆ(Lake) ಹಾಗೂ ಕಾಲುವೆಗಳು ಮಾತ್ರ ಹನಿ ನೀರಿಲ್ಲದೆ (Water) ಬಿರುಕು ಬಿಟ್ಟಿವೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ “ಉಂಡ ಮನೆಗೆ ಊಟವಿಲ್ಲ” ಎನ್ನುವಂತಾಗಿದೆ ಜಿಲ್ಲೆಯ ರೈತರ ಪರಿಸ್ಥಿತಿ.
ಬಾಗಲಕೋಟೆ(Bagalkote) ಜಿಲ್ಲೆಯಲ್ಲಿ ಒಟ್ಟು 266ಕ್ಕೂ ಅಧಿಕ ಕೆರೆಗಳಿದ್ದು, ಇವುಗಳಲ್ಲಿ ಬಹುತೇಕ ಕೆರೆಗಳು ಕಣ್ಣೀರಿನ ಕಥೆ ಹೇಳುತ್ತಿವೆ. ಒಟ್ಟು 160 ಕೆರೆಗಳ ಪೈಕಿ ಕೇವಲ 28 ಕೆರೆಗಳು ಶೇ. 50 ರಿಂದ 90ರಷ್ಟು ಭರ್ತಿಯಾಗಿವೆ. 33 ಕೆರೆಗಳು ಶೇ. 30 ರಿಂದ 50ರಷ್ಟು, 53 ಕೆರೆಗಳು ಶೇ. 30ಕ್ಕಿಂತ ಕಡಿಮೆ ಭರ್ತಿಯಾಗಿದ್ದರೆ, ಬರೋಬ್ಬರಿ 49 ಕೆರೆಗಳು ಸಂಪೂರ್ಣ ಖಾಲಿಯಾಗಿವೆ.
ಸಣ್ಣ ನೀರಾವರಿ ವ್ಯಾಪ್ತಿ ಯಲ್ಲಿ ಒಟ್ಟು 76 ಕೆರೆಗಳಿದ್ದು, ಇವುಗಳಲ್ಲಿ ಒಂದೂ ಕೆರೆ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿಲ್ಲ. 30 ಕೆರೆಗಳು ಒಣಗಿ ನಿಂತಿವೆ. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 30 ಕೆರೆಗಳಿದ್ದು, ಇವುಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ.

ರೈತರ ಜಮೀನುಗಳಿಗೆ ನೀರುಣಿಸಲು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಹೊಲಗಾಲುವೆಗಳು ನೀರಿಲ್ಲದೆ ಶಿಥಿಲಾವಸ್ಥೆಗೆ ತಲುಪಿವೆ. ನದಿಗಳಲ್ಲಿ ಅಪಾರ ನೀರಿದ್ದರೂ ಕಾಲುವೆಗಳಿಗೆ ಹರಿಸದ ಕಾರಣ ಕಾಲುವೆಗಳಲ್ಲಿ ಗಿಡಗಂಟಿಗಳು, ಮುಳ್ಳಿನ ಪೊದೆಗಳು ಬೆಳೆದು ನಿಂತಿವೆ. ಇದನ್ನೂ ಓದಿ: ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿ – ಸಕ್ರೆಬೈಲು ಆನೆ ಬಿಡಾರಕ್ಕೆ ಇನ್ಮುಂದೆ ಪ್ರತಿ ಬುಧವಾರ ರಜೆ
ರೈತರ ಆಕ್ರೋಶ
ನದಿಗಳು ತುಂಬಿ ಹರಿಯುವ ಸಂದರ್ಭದಲ್ಲೇ ಕಾಲುವೆಗಳ ಮೂಲಕ ಕೆರೆಗಳನ್ನು ಭರ್ತಿ ಮಾಡಿದರೆ ಅಂತರ್ಜಲ ಮಟ್ಟ ಸುಧಾರಿಸಿ ಬೋರ್‌ವೆಲ್‌ಗಳು ರೀಚಾರ್ಜ್ ಆಗುತ್ತವೆ. ಮುಂದೆ ಬರಗಾಲ ಎದುರಾದರೂ ಬೆಳೆ ಉಳಿಸಿಕೊಳ್ಳಲು ಮತ್ತು ಜನ-ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಲು ಕೆರೆ ನೀರು ಆಸರೆಯಾಗುತ್ತದೆ. ಆದರೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ನೀರು ಹರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಭಾರತೀಯ ಕಿಸಾನ್ ಸಂಘದ ಮುಖಂಡ ವಿರೂಪಾಕ್ಷಯ್ಯ ಹಿರೇಮಠ ಸೇರಿದಂತೆ ಸ್ಥಳೀಯ ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರರಾಜ್ಯಕ್ಕೆ ಹರಿದು ಹೋಗುವ ನೀರನ್ನು ಸದ್ಬಳಕೆ ಮಾಡಿಕೊಂಡು ಜಿಲ್ಲೆಯ ಎಲ್ಲಾ ಕೆರೆ-ಕಾಲುವೆಗಳನ್ನು ತುರ್ತಾಗಿ ಭರ್ತಿ ಮಾಡಲು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಇನ್ನು ಮುಂದಾದರೂ ಎಚ್ಚೆತ್ತು ಕ್ರಮ ಕೈಗೊಳ್ಳಬೇಕಿದೆ.

