ಶಿವಮೊಗ್ಗ: ವನ್ಯಜೀವಿ ಸಂರಕ್ಷಣೆ- ಪ್ರವಾಸಿಗರ ಸುರಕ್ಷತೆ ವಿಚಾರಕ್ಕೆ ಹಲವು ಮಾರ್ಗಸೂಚಿಗಳನ್ನ ಜಾರಿ ಮಾಡುತ್ತಿರುವ ರಾಜ್ಯ ಸರ್ಕಾರ, ಈವರೆಗೆ ವಾರದ ಎಲ್ಲಾ ದಿನ ಪ್ರವಾಸಿಗರಿಗೆ ಮುಕ್ತವಾಗಿರುತ್ತಿದ್ದ ಸಕ್ರೆಬೈಲು ಆನೆ ಬಿಡಾರಕ್ಕೆ (Sakrebyle Elephant Camp) ಅರಣ್ಯ ಇಲಾಖೆ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ಕರ್ನಾಟಕ ಸಾಕಾನೆ ಶಿಬಿರ ಸುರಕ್ಷತಾ ವಿಧಾನದ ಅಡಿಯಲ್ಲಿ ವಾರದಲ್ಲಿ ಒಂದು ದಿನ ಶಿಬಿರಕ್ಕೆ ರಜೆ ಘೋಷಿಸಬೇಕು ಎಂಬ ನಿಯಮವನ್ನ ಅರಣ್ಯ ಇಲಾಖೆ ಜಾರಿಗೊಳಿಸಿದೆ.
ಅದರಂತೆ, ಶಿವಮೊಗ್ಗ ತಾಲೂಕಿನ ಸಕ್ರೆಬೈಲು ಆನೆ ಬಿಡಾರಕ್ಕೆ ಇನ್ಮುಂದೆ ಪ್ರತಿ ಬುಧವಾರ ರಜೆ ಘೋಷಣೆ ಮಾಡಲಾಗಿದ್ದು, ಸಾರ್ವಜನಿಕರ ವೀಕ್ಷಣೆಗೆ ಯಾವುದೇ ಅವಕಾಶವಿರುವುದಿಲ್ಲ. 2026ರ ಮೇ 18ರಂದು ದುಬಾರೆ ಆನೆ ಶಿಬಿರದಲ್ಲಿ ನಡೆದ ದುರ್ಘಟನೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಆನೆ ಶಿಬಿರಗಳನ್ನ ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಪ್ರವಾಸಿಗರ ಸುರಕ್ಷತೆಯನ್ನ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಚಿಸಿದ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಅಳವಡಿಸಿದ ಬಳಿಕ ಒಂದೊಂದೆ ಬಿಡಾರವನ್ನ ಪುನರಾರಂಭಿಸಲಾಗುತ್ತಿದೆ. ಶಿವಮೊಗ್ಗದ ಸಕ್ರೇಬೈಲು ಆನೆ ಬಿಡಾರ ಕೂಡ ಕಳೆದ ಮೂರು ದಿನದ ಹಿಂದೆಯಷ್ಟೇ ಸೆ.26ರಂದು ಪ್ರವಾಸಿಗರಿಗೆ ಮುಕ್ತವಾಗಿತ್ತು. ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಸಾಲಕ್ಕೆ ಕಡಿತ ಬೇಡ: ಬ್ಯಾಂಕುಗಳಿಗೆ ಸೂಚಿಸಲು ಮುಖ್ಯ ಕಾರ್ಯದರ್ಶಿಗೆ ಸಿಎಂ ಆದೇಶ
ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯ ಸುರಕ್ಷತಾ ಕ್ರಮಗಳ ಜೊತೆ ಪ್ರವಾಸಿಗರ ಜಾಗೃತಿಗಾಗಿ ಬಿಡಾರದ ವಿವಿಧೆಡೆ ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಪ್ರವಾಸಿಗರು ಈ ಹೊಸ ನಿಯಮ ಹಾಗೂ ವಾರದ ರಜೆಯ (ಪ್ರತಿ ಬುಧವಾರ) ದಿನವನ್ನ ಗಮನದಲ್ಲಿಟ್ಟುಕೊಂಡು ಸಕ್ರೆಬೈಲು ಆನೆ ಬಿಡಾರಕ್ಕೆ ಭೇಟಿ ನೀಡುವಂತೆ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಾರವಾರ | ಉಡ ಬೇಟೆಯಾಡಿದ್ದ ತಂದೆ-ಮಗನ ಬಂಧನ

