– ಡಿಕೆಶಿ ಆಸ್ತಿ ದಿಢೀರ್ ಏರಿಕೆಗೆ ನೈಸ್ ಅಕ್ರಮ ಕಾರಣ
– ಸುರೇಶ್ಗೆ 2,000 ಕೋಟಿ ರೂ. ಮೌಲ್ಯದ 400 ಫ್ಲ್ಯಾಟ್ ಸಿಕ್ಕಿವೆ
ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ (DK Shivakumar) ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ನಡುವೆ ನೈಸ್ ವಾರ್ ತಾರಕಕ್ಕೇರಿದೆ. ನೈಸ್ ಯೋಜನೆಗೆ(NICE Project) ಸಹಿ ಹಾಕಿದ್ದೇ ದೇವೇಗೌಡರು (Devegowda) ಎಂದು ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಹೇಳಿದ್ದ ಸಿಎಂ ಡಿಕೆಶಿಗೆ ಕುಮಾರಸ್ವಾಮಿ ದಾಖಲಾತಿ ಸಮೇತ ಕೌಂಟರ್ ಕೊಟ್ಟಿದ್ದಾರೆ.
ನೈಸ್ ಯೋಜನೆ 3 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತದ ಬೃಹತ್ ಹಗರಣವಾಗಿದ್ದು(Scam) ಇದು 2ಜಿ ತರಂಗಾಂತರ ಮತ್ತು ಕಲ್ಲಿದ್ದಲು ಹಗರಣಕ್ಕಿಂತಲೂ ದೊಡ್ಡ ಅಕ್ರಮ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ (DK Suresh) ಕುಟುಂಬವು ನೈಸ್ ಜಮೀನಿನಲ್ಲಿ ಭಾರಿ ಅಕ್ರಮ ಎಸಗಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ನೈಸ್ ಯೋಜನೆಗೆ ದೇವೇಗೌಡರೇ ಸಹಿ ಹಾಕಿದ್ರು ಎಂಬ ಸಿಎಂ ಆರೋಪಕ್ಕೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ನೈಸ್ ಯೋಜನೆಯ ಫ್ರೇಮ್ ವರ್ಕ್ ಅಗ್ರಿಮೆಂಟ್ ಬದಲಾವಣೆ ಮಾಡಿದ್ದೇ ಡಿಕೆ ಶಿವಕುಮಾರ್ ಎಂಬುದಾಗಿ ದಾಖಲಾತಿ ರಿಲೀಸ್ ಮಾಡಿದ್ದಾರೆ. ನೈಸ್ ಯೋಜನೆ ಭೂಮಿಯಲ್ಲಿ ಡಿಕೆಶಿವಕುಮಾರ್, ಡಿಕೆ ಸುರೇಶ್ ಕುಟುಂಬ ಭೂಮಿ ಖರೀದಿ ಮಾಡಿದ್ದಾರೆ. ಅದನ್ನ ಉಳಿಸಿಕೊಳ್ಳಲು ನೈಸ್ ಯೋಜನೆ ವ್ಯಕ್ತಿಪರ ನಿಂತಿದ್ದಾರೆ ಅಂತ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ ಅವರು ನೈಸ್ ಯೋಜನೆಯ ಇತಿಹಾಸ ಮತ್ತು ನಡೆದಿರುವ ಅಕ್ರಮಗಳ ಕುರಿತು ವಿವರವಾದ ಅಂಶಗಳನ್ನು ಮುಂದಿಟ್ಟಿದ್ದಾರೆ.
ಹೆಚ್ಡಿಕೆ ಹೇಳಿದ್ದೇನು?
1995ರ ನವೆಂಬರ್ 20 ರಂದು ಅಂದಿನ ಮುಖ್ಯಮಂತ್ರಿ ಹೆಚ್.ಡಿ. ದೇವೇಗೌಡರು ಮತ್ತು ಅಮೆರಿಕಾದ ಗವರ್ನರ್ ನಡುವೆ ಒಡಂಬಡಿಕೆ (MOU) ಆಗಿತ್ತು. ಮೂಲತಃ ಈ ಯೋಜನೆ ಸಿಕ್ಕಿದ್ದು ನೈಸ್ ಸಂಸ್ಥೆಗಲ್ಲ. ಬದಲಿಗೆ ವಿಹೆಚ್ಬಿ ಕಂಪನಿ, ಕಲ್ಯಾಣಿ ಗ್ರೂಪ್ ಮತ್ತು ಸ್ಲ್ಯಾಬ್ ಎಂಜಿನಿಯರಿಂಗ್ ಸಂಸ್ಥೆಗಳ ಒಕ್ಕೂಟಕ್ಕೆ. ದೇವೇಗೌಡರ ಸಂಪುಟದಲ್ಲಿ ಚರ್ಚಿಸಿ 7 ಟೌನ್ಶಿಪ್ಗಳನ್ನು 5ಕ್ಕೆ ಇಳಿಸಲಾಗಿತ್ತು ಹಾಗೂ ಖಾಸಗಿ ಕಂಪನಿಗಳೇ ಸಂಪೂರ್ಣ ಹಣ ಖರ್ಚು ಮಾಡಿ 30 ವರ್ಷಗಳ ಟೋಲ್ ಸಂಗ್ರಹದ ಮೂಲಕ ಭರಿಸಿಕೊಳ್ಳಬೇಕು ಎಂಬ ಕರಾರಿತ್ತು. ನಂತರ ಜೆ.ಹೆಚ್. ಪಟೇಲ್ ಅವರ ಅವಧಿಯಲ್ಲಿ 20,193 ಎಕರೆಗೆ ಕೆಐಎಡಿಬಿ ಅಧಿಸೂಚನೆ ಹೊರಡಿಸಿ, 1997ರಲ್ಲಿ ಫ್ರೇಮ್ವರ್ಕ್ ಅಗ್ರಿಮೆಂಟ್ಗೆ ಒಪ್ಪಿಗೆ ನೀಡಲಾಯಿತು.
1998ರಲ್ಲಿ ಹಿಂದಿನ ಕಂಪನಿಗಳು ಹೊರಹೋಗಿ ಅಶೋಕ್ ಖೇಣಿ ಅವರ ನೈಸ್ ಜೊತೆ ಒಪ್ಪಂದವಾಯಿತು. 2002ರಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರು ಬಿಎಂಐಸಿಪಿಎ (BMICPA) ಅಧ್ಯಕ್ಷರಾಗಿದ್ದರು. 2004ರ ಫೆಬ್ರವರಿ 12 ರಂದು ಕ್ಯಾಬಿನೆಟ್ನಲ್ಲಿ ಯಾವುದೇ ತೀರ್ಮಾನವಾಗದಿದ್ದರೂ, ಡಿ.ಕೆ. ಶಿವಕುಮಾರ್ ಅವರು ಒಡಿಪಿ (ODP) ಪ್ಲ್ಯಾನ್ನಲ್ಲಿ ಮೂಲ ಫ್ರೇಮ್ವರ್ಕ್ ಅಗ್ರಿಮೆಂಟ್ ಬದಲಾವಣೆಗೆ ಒಪ್ಪಿಗೆ ನೀಡಿದರು. ಇಲ್ಲಿಂದಲೇ ಅಸಲಿ ಅಕ್ರಮ ಆರಂಭವಾಯಿತು.
2003ರಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ಪ್ರಕಾರ ಡಿ.ಕೆ. ಶಿವಕುಮಾರ್ ಅವರ ಆಸ್ತಿ 4 ಕೋಟಿ ರೂ. ಇತ್ತು, ಆದರೆ 2023ರ ವೇಳೆಗೆ ಅದು 1,413 ಕೋಟಿ ರೂ.ಗೆ ಏರಿಕೆಯಾಗಿದೆ. ನೈಸ್ ಒಡಿಪಿಯಿಂದ ಬಂದ ಹಣವೇ ಈ ಭಾರೀ ಏರಿಕೆಗೆ ಕಾರಣ. ನೈಸ್ ಯೋಜನೆಗೆ ಅಧಿಸೂಚನೆಯಾಗಿದ್ದ ಜಮೀನಿನಲ್ಲಿ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್, ಅವರ ತಾಯಿ ಮತ್ತು ಮಕ್ಕಳ ಹೆಸರಿನಲ್ಲಿ 150 ರಿಂದ 200 ಎಕರೆ ಭೂಮಿಯನ್ನು ಖರೀದಿಸಲಾಗಿದೆ. ಇದನ್ನು ಪತ್ತೆಹಚ್ಚಲು ಡ್ರೋನ್ ಸರ್ವೆ ನಡೆಸಬೇಕು.
1997-98ರಲ್ಲಿ ಅಧಿಸೂಚನೆಯಾಗಿದ್ದ 10 ಎಕರೆ ಜಾಗವನ್ನು 2004ರಲ್ಲಿ ಡಿ.ಕೆ. ಸುರೇಶ್ ಖರೀದಿಸಿದ್ದರು. 2008ರಲ್ಲಿ ಕನ್ವರ್ಷನ್ಗೆ ಅರ್ಜಿ ಹಾಕಿ, 2011ರಲ್ಲಿ ಶೋಭಾ ಡೆವಲಪರ್ಸ್ ಜೊತೆ ಒಪ್ಪಂದ ಮಾಡಿಕೊಳ್ಳಲಾಯಿತು. ಬಳಿಕ 2015ರಲ್ಲಿ ನೈಸ್ ಸಂಸ್ಥೆಯು ‘ಈ ಜಾಗ ನಮಗೆ ಬೇಡ’ ಎಂದು ಎನ್ಒಸಿ ನೀಡಿತು. ಪ್ರತಿಯಾಗಿ ಡಿ.ಕೆ. ಸುರೇಶ್ ಅವರಿಗೆ 2,000 ಕೋಟಿ ರೂ. ಮೌಲ್ಯದ 400 ಫ್ಲ್ಯಾಟ್ಗಳು ಸಿಕ್ಕಿವೆ. ಸಿದ್ದಗಂಗಾ ಮಠಕ್ಕೆ ಎನ್ಒಸಿ ನೀಡದ ನೈಸ್ ಸಂಸ್ಥೆ, ಡಿಕೆಶಿ-ಡಿಕೆಸು ಕುಟುಂಬ ಸೇರಿ 420 ಜನರಿಗೆ ಎನ್ಒಸಿ ನೀಡಿದೆ. ತಮ್ಮ ಕುಟುಂಬದ ಭೂಮಿಯನ್ನು ಉಳಿಸಿಕೊಳ್ಳುವ ಸಲುವಾಗಿಯೇ ಸರ್ಕಾರ ನೈಸ್ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ.
1997ರಲ್ಲಿ ಆರಂಭವಾದ ಯೋಜನೆಯಲ್ಲಿ 2026ರವರೆಗೂ ಕೇವಲ 5 ಕಿ.ಮೀ ರಸ್ತೆ ಮಾತ್ರ ನಿರ್ಮಾಣವಾಗಿದ್ದು, ಇನ್ನೂ 98 ಕಿ.ಮೀ ಬಾಕಿ ಉಳಿದಿದೆ. ಮುಂದಿನ ವರ್ಷಕ್ಕೆ ಯೋಜನೆಯ ಅವಧಿ ಮುಕ್ತಾಯಗೊಳ್ಳಲಿದೆ. ಖೇಣಿ ಸ್ವಂತ ಹಣ ಖರ್ಚು ಮಾಡದೆ ಸರ್ಕಾರದ ಭೂಮಿಯನ್ನೇ ಬಳಸಿಕೊಂಡಿದ್ದಾರೆ. ಹೈಕೋರ್ಟ್ ಮತ್ತು ಟಿ.ಬಿ. ಜಯಚಂದ್ರ ನೇತೃತ್ವದ ಸದನ ಸಮಿತಿ ಅಕ್ರಮವನ್ನು ಎತ್ತಿಹಿಡಿದಿದ್ದರೂ ಸರ್ಕಾರಗಳು ಕಠಿಣ ಕ್ರಮ ಕೈಗೊಂಡಿಲ್ಲ. ತಕ್ಷಣವೇ ಸಾರ್ವಜನಿಕರಿಂದ ಅಕ್ರಮವಾಗಿ ವಸೂಲಿ ಮಾಡುತ್ತಿರುವ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು.
ನೈಸ್ ಯೋಜನೆಯಲ್ಲಿ ನಡೆದಿರುವ ಬೃಹತ್ ಹಗರಣದ ವಿರುದ್ಧ ತಾವು ಕೈಗೊಂಡಿರುವ ಕಾನೂನು ಹಾಗೂ ರಾಜಕೀಯ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಹೆಚ್.ಡಿ. ಕುಮಾರಸ್ವಾಮಿ ಗುಡುಗಿದ್ದಾರೆ.

