ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್(Gyanesh Kumar) ಅವರನ್ನು ಅಮಾನತುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ (Supreme Court) ಸಮ್ಮತಿಸಿದೆ.
ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಉಳಿದ ಇಬ್ಬರು ಚುನಾವಣಾ ಆಯುಕ್ತರ ಸಲಹೆಗಳನ್ನು ಕಡೆಗಣಿಸಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂಬ ಮಾಧ್ಯಮ ವರದಿಯ ಹಿನ್ನೆಲೆಯಲ್ಲಿ ಅಮಾನತುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು.
ಅರ್ಜಿದಾರ ರಾಕೇಶ್ ಕುಮಾರ್ ಸಿಂಗ್ ಪರವಾಗಿ ಹಾಜರಾದ ಹಿರಿಯ ವಕೀಲ ವಿಕಾಸ್ ಸಿಂಗ್ ಅವರು ವಿಷಯವನ್ನು ಪ್ರಸ್ತಾಪಿಸಿ ತುರ್ತು ವಿಚಾರಣೆಗೆ ಕೋರಿದರು. ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರು ಅರ್ಜಿಯನ್ನು ಪಟ್ಟಿ ಮಾಡಲು ಒಪ್ಪಿಗೆ ಸೂಚಿಸಿದರು. ಆದರೆ ವಿಚಾರಣೆಗೆ ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸಿಲ್ಲ.
ಚುನಾವಣಾ ಆಯೋಗದ ವ್ಯಾಪ್ತಿಗೆ ಬರುವ ಯಾವುದೇ ನಿರ್ಧಾರಗಳನ್ನು ಸಿಇಸಿ ಏಕಪಕ್ಷೀಯವಾಗಿ ತೆಗೆದುಕೊಳ್ಳುವಂತಿಲ್ಲ ಎಂದು ಘೋಷಿಸಬೇಕೆಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗಿದೆ. ಬಹು-ಸದಸ್ಯ ಆಯೋಗದ ಉದ್ದೇಶವೇ ಸರ್ವಾನುಮತ ಅಥವಾ ಬಹುಮತದ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುವುದಾಗಿದೆ. ಆದರೆ ಈ ಬೃಹತ್ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ಪೂರ್ಣ ಆಯೋಗದ ಅನುಮೋದನೆ ಇದೆಯೇ ಎಂಬ ಬಗ್ಗೆ ಗಂಭೀರ ಸಂಶಯಗಳಿವೆ ಎಂದು ವಕೀಲ ವಿಕಾಸ್ ಸಿಂಗ್ ನ್ಯಾಯಪೀಠದ ಮುಂದೆ ವಾದಿಸಿದರು. ಇದನ್ನೂ ಓದಿ: SIRನಲ್ಲಿ ಗೋಲ್ಮಾಲ್ ಆರೋಪ; ದೇಶಾದ್ಯಂತ ಹೋರಾಟಕ್ಕೆ ‘ಕೈ’ ಸಜ್ಜು
ಉಳಿದ ಇಬ್ಬರು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರ ವಿರೋಧದ ನಡುವೆಯೂ ಚುನಾವಣಾ ಆಯೋಗದ ಹೆಸರಿನಲ್ಲಿ ಹಲವು ನಿರ್ಧಾರಗಳನ್ನು ಏಕಪಕ್ಷೀಯವಾಗಿ ಕೈಗೊಳ್ಳಲಾಗಿದೆ. ಅಕ್ಟೋಬರ್ 2025 ರಿಂದ ಆಗಸ್ಟ್ 2026 ರ ನಡುವೆ ಪೂರ್ಣ ಆಯೋಗದ ಅನುಮೋದನೆಯಿಲ್ಲದೆ ಕೈಗೊಳ್ಳಲಾದ ಆಡಳಿತಾತ್ಮಕ ಕ್ರಮಗಳು ಮತ್ತು ನಿರ್ಧಾರಗಳ ಕುರಿತು ಇಬ್ಬರು ಆಯುಕ್ತರು ಕನಿಷ್ಠ 14 ಆಕ್ಷೇಪಗಳನ್ನು ದಾಖಲಿಸಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಈ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿರುವ ಎರಡನೇ ಅರ್ಜಿ ಇದಾಗಿದ್ದು, ಹಿಂದಿನ ಅರ್ಜಿಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕುಮಾರ್ ವಿರುದ್ಧ ಕ್ರಿಮಿನಲ್ ಪ್ರಾಸಿಕ್ಯೂಷನ್‌ಗೆ ಕೋರಲಾಗಿತ್ತು. ಈ ವಿಷಯವು ಮುಂದಿನ ವಾರ ವಿಚಾರಣೆಗೆ ಬರುವ ನಿರೀಕ್ಷೆಯಿದೆ.
ಭಿನ್ನಾಭಿಪ್ರಾಯಗಳು ಸಾಂಸ್ಥಿಕ ಸಮಾಲೋಚನೆಗಳ ಸಾಮಾನ್ಯ ಭಾಗವಾಗಿದ್ದು, ಕಳೆದ ಒಂದು ವರ್ಷದಲ್ಲಿ ಹೊರಡಿಸಲಾದ ಎಲ್ಲಾ ಆದೇಶಗಳನ್ನು ಪೂರ್ಣ ಆಯೋಗದ ಸರ್ವಾನುಮತದ ನಿರ್ಧಾರದಿಂದಲೇ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

