ಬೆಂಗಳೂರು: ಬೆಂಗಳೂರಿನ ಮೆಟ್ರೋ (Namma Metro) ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಈಗಿರುವ ನಮ್ಮ ಮೆಟ್ರೋ ಮಾರ್ಗಗಳನ್ನು ಮತ್ತಷ್ಟು ವಿಸ್ತರಿಸಲು ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಒಟ್ಟು 6 ಮಾರ್ಗಗಳ ವಿಸ್ತರಣೆಗೆ ಯೋಜನೆ ರೂಪಿಸಲಾಗುತ್ತಿದೆ.
ಈ ಮಾರ್ಗಗಳ ವಿಸ್ತರಣೆಯಿಂದ ನಗರದ ಹೊರವಲಯಗಳು, ಕೈಗಾರಿಕಾ ಪ್ರದೇಶಗಳು ಹಾಗೂ ಬೆಳೆಯುತ್ತಿರುವ ಸ್ಯಾಟಲೈಟ್ ಪಟ್ಟಣಗಳಿಗೆ ಮೆಟ್ರೋ ಸಂಪರ್ಕ ಮತ್ತಷ್ಟು ವಿಸ್ತರಣೆಯಾಗಲಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಈಗ ಹಲವು ಮಾರ್ಗಗಳ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸುತ್ತಿದೆ.
ಯಾವೆಲ್ಲ ಮಾರ್ಗಗಳ ವಿಸ್ತರಣೆಗೆ ಪ್ರಸ್ತಾವನೆ?
1. ಚಲ್ಲಘಟ್ಟ-ಬಿಡದಿ:
ಸುಮಾರು 15 ಕಿ.ಮೀ ಉದ್ದದ ಈ ಮಾರ್ಗದ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸುವ ಹಂತದಲ್ಲಿದೆ.
2. ಸಿಲ್ಕ್ ಇನ್ಸ್ಟಿಟ್ಯೂಟ್-ಹಾರೋಹಳ್ಳಿ:
ಸುಮಾರು 24 ಕಿ.ಮೀ ಉದ್ದದ ಮಾರ್ಗ ಇದಾಗಿದ್ದು, ಸದ್ಯ ಕಾರ್ಯಸಾಧ್ಯತಾ ವರದಿ ಹಂತದಲ್ಲಿದೆ.
3. ಬೊಮ್ಮಸಂದ್ರ-ಅತ್ತಿಬೆಲೆ:
ಸುಮಾರು 11 ಕಿ.ಮೀ ಉದ್ದದ ಈ ಮಾರ್ಗಕ್ಕೂ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲಾಗುತ್ತಿದೆ.
4. ಕಾಳೇನ ಅಗ್ರಹಾರ-ಕಾಡುಗೋಡಿ ಟ್ರೀ ಪಾರ್ಕ್:
ಸುಮಾರು 68 ಕಿ.ಮೀ ಉದ್ದದ ಈ ಮಾರ್ಗ ಪ್ರಸ್ತಾವಿತ ವಿಸ್ತರಣೆಗಳ ಪೈಕಿ ಅತಿ ಉದ್ದದ ಮಾರ್ಗವಾಗಿದೆ. ಇದೂ ಕಾರ್ಯಸಾಧ್ಯತಾ ವರದಿ ಹಂತದಲ್ಲಿದೆ.
5. ಮಾದವರ-ತುಮಕೂರು:
ಸುಮಾರು 60 ಕಿ.ಮೀ ಉದ್ದದ ಈ ಮಾರ್ಗ ಸದ್ಯ ಡಿಪಿಆರ್ ಹಂತದಲ್ಲಿದೆ.
6. ಕೆ.ಆರ್. ಪುರಂ-ಹೊಸಕೋಟೆ:
ಬೂದಿಗೆರೆ ಕ್ರಾಸ್ ಮೂಲಕ ಸಂಪರ್ಕ ಕಲ್ಪಿಸುವ ಈ ಮಾರ್ಗ ಸುಮಾರು 16 ಕಿ.ಮೀ ಉದ್ದವಿರಲಿದೆ. ಸದ್ಯ ಕಾರ್ಯಸಾಧ್ಯತಾ ವರದಿ ಹಂತದಲ್ಲಿದೆ.
ಈ ಯೋಜನೆಯ ಪ್ರಮುಖ ಪ್ರಯೋಜನಗಳೇನು ?
ಈ ಹೊಸ ಮಾರ್ಗಗಳು ಜಾರಿಗೆ ಬಂದರೆ ಬೆಂಗಳೂರಿನ ಹೊರವಲಯ ಹಾಗೂ ಬೆಂಗಳೂರಿನ ಸುತ್ತಮುತ್ತ ಬೆಳೆಯುತ್ತಿರುವ ಪ್ರದೇಶಗಳಿಗೆ ಮೆಟ್ರೋ ಸಂಪರ್ಕ ಮತ್ತಷ್ಟು ಹೆಚ್ಚಾಗಲಿದೆ.
ಸ್ಯಾಟಲೈಟ್ ಪಟ್ಟಣಗಳು ಮತ್ತು ಬೆಳವಣಿಗೆಯ ಕಾರಿಡಾರ್ಗಳಿಗೆ ಸಂಪರ್ಕ ಸಿಗಲಿದೆ. ಕೈಗಾರಿಕಾ ಪ್ರದೇಶಗಳಿಗೆ ಮೆಟ್ರೋ ಸಂಪರ್ಕ ಹೆಚ್ಚುವುದರಿಂದ ಆರ್ಥಿಕ ಚಟುವಟಿಕೆಗಳಿಗೂ ಸಹಾಯವಾಗಲಿದೆ.
ಅದೇ ರೀತಿ, ನಗರದಲ್ಲಿ ಪ್ರಯಾಣದ ಸಮಯ ಕಡಿಮೆಯಾಗುವುದರ ಜೊತೆಗೆ ವಾಹನ ದಟ್ಟಣೆಯನ್ನೂ ಕಡಿಮೆ ಮಾಡಲು ಮೆಟ್ರೋ ವಿಸ್ತರಣೆ ಸಹಕಾರಿಯಾಗುವ ನಿರೀಕ್ಷೆಯಿದೆ. ಇದನ್ನೂ ಓದಿ: ಸ್ಕೂಟಿ, ಲಾರಿ ನಡುವೆ ಮುಖಾಮುಖಿ ಡಿಕ್ಕಿ – ಯುವಕ ಸ್ಥಳದಲ್ಲೇ ಸಾವು
ಉದ್ಯೋಗ ಮತ್ತು ಶಿಕ್ಷಣ ಕೇಂದ್ರಗಳಿಗೆ ಜನರು ಸುಲಭವಾಗಿ ತಲುಪಲು ಅನುಕೂಲವಾಗಲಿದೆ. ಈಗಿರುವ ಮೆಟ್ರೋ ಜಾಲದ ಜೊತೆಗೆ ಭವಿಷ್ಯದಲ್ಲಿ ನಿರ್ಮಾಣವಾಗುವ ಮಾರ್ಗಗಳನ್ನೂ ಸಂಪರ್ಕಿಸಲು ಇದು ಸಹಾಯ ಮಾಡಲಿದೆ. ಇದನ್ನೂ ಓದಿ: ಮೈಸೂರು | ಶಾಲಾ ವಾಹನ ಹರಿದು ಒಂದೂವರೆ ವರ್ಷದ ಮಗು ಸಾವು

