– ಸರ್ಕಾರ, ಆಯೋಗದ ಮುಂದೆ ಐದು ಬೇಡಿಕೆಯಿಟ್ಟ ಕಾಂಗ್ರೆಸ್
ನವದೆಹಲಿ: ದೇಶದಲ್ಲಿ ಎಸ್ಐಆರ್ (SIR) ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ ಚುನಾವಣಾ ಆಯೋಗದಲ್ಲಿ (Election Commission) ಭಿನ್ನಾಭಿಪ್ರಾಯದ ಸುದ್ದಿ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೇ ದೇಶದ್ಯಾಂತ ಹೋರಾಟ ನಡೆಸಲು ಕಾಂಗ್ರೆಸ್ ಸಜ್ಜುಗೊಂಡಿದ್ದು, ಈ ಬಗ್ಗೆ ಚರ್ಚಿಸಲು ಇಂದು CWC ಸಭೆ ನಡೆಸಿದೆ. ಸಭೆಯಲ್ಲಿ ಪ್ರಧಾನಿ ಮೋದಿ, ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ‘ಕೈ’ ನಾಯಕರು ಆಗ್ರಹಿಸಿದ್ದು, ಐದು ಷರತ್ತುಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಚುನಾವಣಾ ಆಯೋಗದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಬಟಾಬಯಲಾಗಿದೆ. ಎಸ್ಐಆರ್ ವಿಚಾರದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಏಕಪಕ್ಷೀಯವಾಗಿ ನಡೆದುಕೊಂಡಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಇದೇ ವಿಚಾರಗಳನ್ನಿಟ್ಟುಕೊಂಡು ದೇಶಾದ್ಯಂತ ಹೋರಾಟ ರೂಪಿಸಲು ಮುಂದಾಗಿರುವ ಕಾಂಗ್ರೆಸ್ ಇಂದು ಈ ಬಗ್ಗೆ ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿದೆ. ಇದನ್ನೂ ಓದಿ: ವಿವಾದ ಭುಗಿಲೆದ್ದ ಬಳಿಕ ಚುನಾವಣಾ ಆಯೋಗದ ಮೊದಲ ಸಭೆ; ಮೂವರು ಚುನಾವಣಾ ಆಯುಕ್ತರೂ ಭಾಗಿ
ದೆಹಲಿಯಲ್ಲಿ ಕಾಂಗ್ರೆಸ್ ತನ್ನ ಅತ್ಯುನ್ನತ ನಿರ್ಣಯ ಸಮಿತಿಯಾಗಿರುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಕರೆದಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ.ವೇಣುಗೋಪಾಲ್, ಜೈರಾಮ್ ರಮೇಶ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ನಾಸೀರ್ ಹುಸೇನ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಈ ಸಭೆಯಲ್ಲಿ ಕಾಂಗ್ರೆಸ್ ನಾಯಕರು ಐದು ಬೇಡಿಕೆಗಳನ್ನು ಆಯೋಗದ ಮಂದೆ ಇಟ್ಟಿದ್ದಾರೆ.
ಬೇಡಿಕೆಗಳೇನು?
1. ಮತದಾರರ ಪಟ್ಟಿಯಲ್ಲಿ ನಡೆಯುವ ಪ್ರತಿಯೊಂದು ದೊಡ್ಡ ಬದಲಾವಣೆಯ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕಗೊಳಿಸಬೇಕು.
2. ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲಾದವರಿಗೆ ಸಂಪೂರ್ಣ ಮಾಹಿತಿ ನೀಡಿ, ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಬೇಕು.
3. ರಾಜಕೀಯ ಪಕ್ಷಗಳಿಗೆ ಮತದಾರರ ಪಟ್ಟಿ ಹಾಗೂ ಅದಕ್ಕೆ ಸಂಬಂಧಿಸಿದ ಅಗತ್ಯ ಮಾಹಿತಿಯನ್ನು ಸರಳ ಸ್ವರೂಪದಲ್ಲಿ, ಸಮಯಕ್ಕೆ ಸರಿಯಾಗಿ ಒದಗಿಸಬೇಕು.
4. ಗಂಭೀರ ಅಕ್ರಮಗಳ ಅಥವಾ ವ್ಯತ್ಯಾಸಗಳ ಸಾಕ್ಷ್ಯಗಳು ಎದುರಾದಲ್ಲಿ ಸ್ವತಂತ್ರ ಹಾಗೂ ಸಮಯಬದ್ಧ ತನಿಖೆ ನಡೆಸಬೇಕು.
5. ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಮುಖ ಮಾಹಿತಿ ಮತ್ತು ನಿರ್ಧಾರಗಳಲ್ಲಿ ಪಾರದರ್ಶಕತೆ ಇರಬೇಕು. ಯಾವುದೇ ಪಕ್ಷವೂ ಮಾಹಿತಿ ಮುಚ್ಚಿಡಲಾಗುತ್ತಿದೆ ಎಂದು ಹೇಳಲು ಅವಕಾಶ ಇರಬಾರದು ಎಂದು ಆಯೋಗದ ಮುಂದೆ ಕಾಂಗ್ರೆಸ್ ಬೇಡಿಕೆ ಇಟ್ಟಿದೆ.

