ಭೋಪಾಲ್: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ(Ujjain) ಸೋಮವಾರ ಅಭಿವೃದ್ಧಿ ಕಾಮಗಾರಿ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪ್ರತಿಭಟನಾಕಾರರು ಹಾಗೂ ಪೊಲೀಸರ(Police) ನಡುವೆ ಸಂಘರ್ಷ ನಡೆದಿದೆ.
ರಸ್ತೆ ಅಗಲೀಕರಣ ಕಾಮಗಾರಿಯ ಅಂಗವಾಗಿ ಐತಿಹಾಸಿಕ ಶಾಹಿ ಮಸೀದಿಯ(Shahi Masjid) ಒಂದು ಭಾಗವನ್ನು ತೆರವುಗೊಳಿಸುತ್ತಿದ್ದ ವೇಳೆ ಕೆಲವರು ಕಲ್ಲು ತೂರಾಟ ನಡೆಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗ ಮತ್ತು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಸದ್ಯ ಮುನ್ನೆಚ್ಚರಿಕಾ ಕ್ರಮವಾಗಿ ಶಾಹಿ ಮಸೀದಿ ಆವರಣದ ಸುತ್ತಲೂ ತ್ವರಿತ ಕಾರ್ಯಪಡೆ (RAF) ಸೇರಿದಂತೆ ಭಾರಿ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
2028ರಲ್ಲಿ ನಡೆಯಲಿರುವ ‘ಸಿಂಹಸ್ಥ ಕುಂಭಮೇಳ’ದ ಸಿದ್ಧತೆಗಾಗಿ ಉಜ್ಜಯಿನಿಯಲ್ಲಿ ಬೃಹತ್ ಮೂಲಸೌಕರ್ಯ ಅಭಿವೃದ್ಧಿ ಮತ್ತು ರಸ್ತೆ ಅಗಲೀಕರಣ ಯೋಜನೆಯನ್ನು ಆಡಳಿತ ಮಂಡಳಿ ಕೈಗೆತ್ತಿಕೊಂಡಿದೆ. ಈ ಯೋಜನೆಯ ಅಂಗವಾಗಿ ಶಾಹಿ ಮಸೀದಿಯ ನಿರ್ದಿಷ್ಟ ಭಾಗವನ್ನು ತೆರವುಗೊಳಿಸುವ ವೇಳೆ ನೂರಾರು ಜನರು ಜಮಾಯಿಸಿ ಆಕ್ರೋಶ ಹೊರಹಾಕಿದರು.
ಉಜ್ಜಯಿನಿ ಪೊಲೀಸ್ ವರಿಷ್ಠಾಧಿಕಾರಿ (SP) ಪ್ರದೀಪ್ ಶರ್ಮಾ ಈ ಬಗ್ಗೆ ಮಾಹಿತಿ ನೀಡಿ, ನಗರದ ಎಲ್ಲ ಸಮುದಾಯಗಳು ಅಭಿವೃದ್ಧಿ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುತ್ತಿವೆ. ಇಂದು ಮಸೀದಿ ಸಮಿತಿಯವರೇ ಸ್ವತಃ ಒಪ್ಪಿ ಶಾಹಿ ಮಸೀದಿಯ ತೆರವು ಕಾರ್ಯವನ್ನು ಮುನ್ನಡೆಸುತ್ತಿದ್ದರು. ಮುನ್ನೆಚ್ಚರಿಕೆಯಾಗಿ ಭದ್ರತಾ ಕೋಟೆ ರಚಿಸಿ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿತ್ತು. ಆದರೆ ಕೆಲ ದುಷ್ಕರ್ಮಿಗಳು ಗೊಂದಲ ಸೃಷ್ಟಿಸಲು ಯತ್ನಿಸಿ ಕಲ್ಲು ತೂರಾಟ ನಡೆಸಿದರು. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಲಘು ಬಲಪ್ರಯೋಗ ಮಾಡಬೇಕಾಯಿತು,” ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮನೆಯ ಬಳಿಯ ದೇಗುಲದಿಂದ ಜೋರಾದ ಸಂಗೀತ – ಅಲ್ಲು ಅರ್ಜುನ್ ಸಹೋದರನಿಂದ ದೂರು
🚨💥 BREAKING: MP Police CRACKS DOWN on Ujjain Protestors…
=> They were opposing the demolition of a masjid gate for Simhasth development works.
CM Mohan Yadav’s own ancestral property was also affected by the development drive, he happily agreed…
The CM had made it clear:… pic.twitter.com/7l1HSnlXHq
— The Analyzer (News Updates🗞️) (@Indian_Analyzer) September 28, 2026
ಇಡೀ ಪ್ರದೇಶವನ್ನು ಸಿಸಿಟಿವಿ ಮತ್ತು ಡ್ರೋನ್‌ಗಳ ಮೂಲಕ ಕಣ್ಗಾವಲಿನಲ್ಲಿಡಲಾಗಿದೆ. ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳನ್ನು ಗುರುತಿಸಿ ಕಠಿಣ ಎಫ್‌ಐಆರ್ ದಾಖಲಿಸಲಾಗುವುದು. ಕೆಲ ಮಹಿಳೆಯರು ರಸ್ತೆ ತಡೆಗೆ ಯತ್ನಿಸಿದರಾದರೂ, ಪರಿಸ್ಥಿತಿ ಮನವರಿಕೆ ಮಾಡಿದ ನಂತರ ಪ್ರತಿಭಟನೆ ಹಿಂಪಡೆದಿದ್ದು, ರಸ್ತೆ ಸಂಚಾರ ಮುಕ್ತವಾಗಿದೆ. ಮುಸ್ಲಿಂ ಸಮುದಾಯದ ಮುಖಂಡರೂ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.
ಮಸೀದಿ ಭಾಗದ ತೆರವು ಕಾರ್ಯಾಚರಣೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್‌ಗಢಿ, ಮಧ್ಯಪ್ರದೇಶ ಸರ್ಕಾರ ಜನರ ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು ಎಂದು ಒತ್ತಾಯಿಸಿದ್ದಾರೆ. ರಸ್ತೆ ಅಗಲೀಕರಣದ ನೆಪದಲ್ಲಿ 600 ವರ್ಷಗಳ ಪುರಾತನ ಪಾರಂಪರಿಕ ತಾಣವನ್ನು ಕೆಡವುವುದು ದ್ವೇಷದ ಪರಮಾವಧಿ. ಪ್ರಕರಣ ನ್ಯಾಯಾಲಯದಲ್ಲಿರುವಾಗ ಆಡಳಿತ ಪದೇಪದೆ ಮಸೀದಿಗೆ ಮುತ್ತಿಗೆ ಹಾಕಿ ಯಾವ ಸಂದೇಶ ನೀಡಲು ಹೊರಟಿದೆ? ರಸ್ತೆ ಅಗಲೀಕರಣಕ್ಕೆ ಬೇರೆ ದಿಕ್ಕಿನ ಜಮೀನನ್ನು ಬಳಸಿಕೊಳ್ಳಬಹುದಿತ್ತು. ಇಂತಹ ಐತಿಹಾಸಿಕ ತಾಣವನ್ನು ಧ್ವಂಸಗೊಳಿಸುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
#WATCH | Madhya Pradesh: Police use tear gas shells to control a crowd in Ujjain as stone pelting occurred when a large group of people clashed with them at the spot where a portion of Shahi Masjid is planned to be demolished for a road-widening project. Rapid Action Force (RAF)… pic.twitter.com/zRLlSzgXoj
— ANI (@ANI) September 28, 2026
2028ರ ಸಿಂಹಸ್ಥ ಕುಂಭಮೇಳದ ಪೂರ್ವಭಾವಿಯಾಗಿ ಉಜ್ಜಯಿನಿ ನಗರದಲ್ಲಿ ಒಟ್ಟು 272 ಕಟ್ಟಡಗಳನ್ನು ತೆರವುಗೊಳಿಸಲು ಗುರುತಿಸಲಾಗಿದೆ. ಈ ಬೃಹತ್ ಅಭಿವೃದ್ಧಿ ಯೋಜನೆಗೆ ಸ್ವತಃ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರೇ ತಮ್ಮ ಪೂರ್ವಜರ ಮನೆಯ ಭಾಗವನ್ನು ತೆರವುಗೊಳಿಸಲು ಬಿಟ್ಟುಕೊಡುವ ಮೂಲಕ ಮಾದರಿಯಾಗಿದ್ದರು. ತಮ್ಮ ಆಸ್ತಿಯನ್ನು ಬಿಟ್ಟುಕೊಡುವುದು ಭಾವನಾತ್ಮಕವಾಗಿ ಕಷ್ಟವಾದರೂ ನಗರದ ಸಮಗ್ರ ಹಿತದೃಷ್ಟಿಯಿಂದ ಅನಿವಾರ್ಯ ಎಂದು ಅವರು ಈ ಹಿಂದೆ ಹೇಳಿದ್ದರು. ಸದ್ಯ ಉಜ್ಜಯಿನಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಬಿಗಿ ಪೊಲೀಸ್ ಭದ್ರತೆ ಮುಂದುವರಿದಿದೆ.

