ನಗೋಯಾ: ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್(Asian Games) ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಹೊರಬಿದ್ದ ಭಾರತದ ತಾರಾ ಆಟಗಾರ್ತಿ ಪಿ.ವಿ. ಸಿಂಧು (PV Sindhu) ಕ್ರೀಡಾಕೂಟದ ಆಯೋಜಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿರಂತರ ಪಂದ್ಯಗಳ ವೇಳಾಪಟ್ಟಿ ತಮ್ಮ ದೈಹಿಕ ಸಾಮರ್ಥ್ಯದ ಮೇಲೆ ಭಾರಿ ಹೊಡೆತ ನೀಡಿತು ಹಾಗೂ ಮಹತ್ವದ ಪಂದ್ಯದಲ್ಲಿ ವಿಡಿಯೋ ರಿವ್ಯೂ ಸೌಲಭ್ಯ ಇಲ್ಲದಿರುವುದು ಹಿನ್ನಡೆಗೆ ಕಾರಣವಾಯಿತು ಎಂದು ಅವರು ಬೇಸರ ಹೊರಹಾಕಿದ್ದಾರೆ.
ಭಾನುವಾರ ನಡೆದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ವಿಶ್ವದ ನಾಲ್ಕನೇ ಶ್ರೇಯಾಂಕಿತ ಆಟಗಾರ್ತಿ ಚೀನಾದ ಚೆನ್ ಯುಫೆಯಿ ವಿರುದ್ಧ ಸಿಂಧು 21-11, 18-21, 10-21 ಅಂತರದಲ್ಲಿ ಆಘಾತಕಾರಿ ಸೋಲು ಅನುಭವಿಸಿದರು. ಮೊದಲ ಗೇಮ್ ಅನ್ನು 21-11 ರಿಂದ ಸುಲಭವಾಗಿ ಗೆದ್ದುಕೊಂಡಿದ್ದ ಸಿಂಧು, ಎರಡನೇ ಗೇಮ್‌ನಲ್ಲಿ 18-18 ಸಮಬಲ ಸಾಧಿಸಿ ಗೆಲುವಿನ ಸಮೀಪದಲ್ಲಿದ್ದರು. ಆದರೆ ಸತತ ಮೂರು ಅಂಕಗಳನ್ನು ಕಸಿದುಕೊಂಡ ಚೆನ್, ನಂತರ ಮೂರನೇ ಗೇಮ್‌ನಲ್ಲೂ ಸಂಪೂರ್ಣ ಪ್ರಾಬಲ್ಯ ಮೆರೆದು ಪಂದ್ಯವನ್ನು ಗೆದ್ದುಕೊಂಡರು.
ಪಂದ್ಯದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿರುವ ಸಿಂಧು, “ನನ್ನ ಏಷ್ಯನ್ ಗೇಮ್ಸ್ ಅಭಿಯಾನ ಅಂತ್ಯಗೊಂಡಿದ್ದು, ಈ ಸೋಲು ಅಪಾರ ನೋವುಂಟುಮಾಡಿದೆ. ಸೆಮಿಫೈನಲ್ ತಲುಪಲು ಕೇವಲ ಮೂರೇ ಮೂರು ಅಂಕಗಳಷ್ಟೇ ಬಾಕಿ ಇತ್ತು. ಆ ಮೂರು ಅಂಕಗಳೇ ನನ್ನ ಮನಸ್ಸಿನಲ್ಲಿ ಪದೇಪದೆ ಕಾಡುತ್ತಿವೆ” ಎಂದು ಬರೆದುಕೊಂಡಿದ್ದಾರೆ.
ಪಂದ್ಯದ ವೇಳೆ ತೀರ್ಪುಗಾರರ ತಪ್ಪು ನಿರ್ಧಾರಗಳನ್ನು ಪ್ರಶ್ನಿಸಲು ವಿಡಿಯೋ ರಿವ್ಯೂ ಇಲ್ಲದಿರುವುದು ತಮ್ಮ ನಿರಾಶೆಯನ್ನು ಇನ್ನಷ್ಟು ಹೆಚ್ಚಿಸಿತು ಎಂದು ಮಾಜಿ ವಿಶ್ವ ಚಾಂಪಿಯನ್ ಹೇಳಿದ್ದಾರೆ. ಏಷ್ಯನ್ ಗೇಮ್ಸ್‌ನ ಕೋರ್ಟ್ 1 ಮತ್ತು 2 ರಲ್ಲಿ ಮಾತ್ರ ವಿಡಿಯೋ ರೆಫರಲ್ ಸೌಲಭ್ಯವಿದ್ದು, ನಾನು ಆಡಿದ ಕೋರ್ಟ್ 4 ರಲ್ಲಿ ಈ ವ್ಯವಸ್ಥೆ ಇರಲಿಲ್ಲ. ಲೈನ್ ಕಾಲ್‌ಗಳ ಸಂದರ್ಭದಲ್ಲಿ ಈ ಸೌಲಭ್ಯ ಲಭ್ಯವಿದ್ದಿದ್ದರೆ ಫಲಿತಾಂಶ ಮತ್ತು ಪಂದ್ಯದ ಗತಿಯೇ ಬದಲಾಗುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವಿಶ್ರಾಂತಿಗೆ ಕಿಂಚಿತ್ತೂ ಸಮಯ ನೀಡದ ವೇಳಾಪಟ್ಟಿಯ ಬಗ್ಗೆಯೂ ಸಿಂಧು ಅಸಮಾಧಾನ ತೋಡಿಕೊಂಡಿದ್ದಾರೆ. ಸರಿಸುಮಾರು 18 ಗಂಟೆಗಳ ಅಂತರದಲ್ಲಿ ಅವರು ಮೂರು ಸಿಂಗಲ್ಸ್ ಪಂದ್ಯಗಳನ್ನು ಆಡಬೇಕಾಯಿತು. ಜಪಾನ್‌ನ ತೋಮೊಕಾ ಮಿಯಾಜಾಕಿ ವಿರುದ್ಧದ ಮೂರನೇ ಸುತ್ತಿನ ಪಂದ್ಯವು ಭಾನುವಾರ ಬೆಳಗಿನ ಜಾವ 1:30 ರ ಸುಮಾರಿಗೆ ಮುಗಿದಿತ್ತು. ಅದಾಗಿ ಕೇವಲ 12 ಗಂಟೆಗಳ ಒಳಗಾಗಿ, ಅಂದರೆ ಬೆಳಿಗ್ಗೆಯೇ ಅವರು ಚೆನ್ ವಿರುದ್ಧದ ಕ್ವಾರ್ಟರ್ ಫೈನಲ್‌ಗೆ ಅಂಕಣಕ್ಕಿಳಿಯಬೇಕಾಯಿತು.
I needed a little time to put this into words. My Asian Games campaign is over, and I’m hurting. Three points from closing out that quarterfinal. I keep coming back to those three points. Like in China, long, demanding rallies at the most critical moments turned the match. I had… pic.twitter.com/xD2IBNWyQi
— PV Sindhu (@Pvsindhu1) September 27, 2026
ಕೇವಲ 18 ಗಂಟೆಗಳಲ್ಲಿ 3 ಪಂದ್ಯಗಳು. ಕೊಠಡಿಗೆ ಮರಳುವಾಗ ಬೆಳಗಿನ ಜಾವ 3 ಗಂಟೆಯಾಗಿತ್ತು, ಮತ್ತೆ ಬೆಳಿಗ್ಗೆ 8:30ಕ್ಕೇ ಅಂಕಣಕ್ಕೆ ಬರಬೇಕಾಯಿತು. ಇದು ದೈಹಿಕವಾಗಿ ತೀವ್ರ ದಣಿವು ತಂದಿತು ಎಂದು ಸಿಂಧು ವಿವರಿಸಿದ್ದಾರೆ. ಇದನ್ನೂ ಓದಿ: Asian Games 2026 | ಭಾರತಕ್ಕೆ ಮತ್ತೊಂದು ಪದಕ – ಬೆಳ್ಳಿಗೆ ಇಶಾ ಶೂಟ್
ಸೋಲಿನ ಕಹಿಯ ನಡುವೆಯೂ ತಮ್ಮ ನಾಲ್ಕನೇ ಏಷ್ಯನ್ ಗೇಮ್ಸ್ ಭಾಗವಹಿಸುವಿಕೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಸಿಂಧು 2014ರ ನನ್ನ ಮೊದಲ ಏಷ್ಯನ್ ಗೇಮ್ಸ್‌ನಿಂದ ಹಿಡಿದು ಈಗಿನ 4ನೇ ಕೂಟದವರೆಗೆ, ಭಾರತಕ್ಕಾಗಿ ಸರ್ವಸ್ವವನ್ನೂ ಧಾರೆಯೆರೆದ 12 ವರ್ಷಗಳ ಸುದೀರ್ಘ ಪಯಣವಿದು. ಒಂದು ಕಹಿ ಫಲಿತಾಂಶವು ಈ ಅರ್ಥಪೂರ್ಣ ಪಯಣವನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಕ್ರೀಡಾ ಬದುಕನ್ನು ಮುಂದುವರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

