ನವದೆಹಲಿ: 2,000 ರೂ.ಗಿಂತ ಹೆಚ್ಚಿನ ಯುಪಿಐ (UPI) ವಹಿವಾಟುಗಳಿಗೆ ಅನ್ವಯವಾಗುವ ಹೊಸ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಚೌಕಟ್ಟಿಗೆ ತಡೆ ನೀಡಲು ಸುಪ್ರೀಂ ಕೋರ್ಟ್(Supreme Court) ಸೋಮವಾರ ನಿರಾಕರಿಸಿದೆ.
ಈ ಹೊಸ ನಿಯಮಾವಳಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ಭಾರತೀಯ ರಾಷ್ಟ್ರೀಯ ಪಾವತಿ ನಿಗಮಕ್ಕೆ (NPCI) ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ಕೇಳಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ವಕೀಲ ಅಂಜನ್ ದತ್ತಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. ಇದನ್ನೂ ಓದಿ: ದರ್ಶನ್ಗೆ ಶಾಕ್ ಮೇಲೆ ಶಾಕ್ – ಪ್ರದೋಷ್ ಮಾಫಿ ಸಾಕ್ಷಿ ದಾಖಲು ಮುಂದೂಡಲು ಸಲ್ಲಿಸಿದ್ದ ಅರ್ಜಿ ವಜಾ

ಭಾರತದ ಅತಿ ದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆಯ ಕಾರ್ಯವೈಖರಿಯ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆಯಿರುವ ಈ ಪ್ರಕರಣದಲ್ಲಿ, ಸರ್ಕಾರವೇ ಈ ಹಣವನ್ನು ಸಂಗ್ರಹಿಸದೇ ಇದ್ದರೆ, ಈ ಶುಲ್ಕ ವಿಧಿಸಲು ಇರುವ ಕಾನೂನಾತ್ಮಕ ಆಧಾರವೇನು? ಎಂಬ ಪ್ರಶ್ನೆಯನ್ನು ನ್ಯಾಯಾಲಯ ಎತ್ತಿದೆ.
ವಿಚಾರಣೆ ವೇಳೆ ಪೀಠವು ಈ ಶುಲ್ಕದ ಸ್ವರೂಪದ ಕುರಿತು ಸ್ಪಷ್ಟನೆ ಕೋರಿತು. ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್. ವೆಂಕಟರಮಣ್, ಈ ಎಂಡಿಆರ್ ಶುಲ್ಕವು ಸರ್ಕಾರ ಸಂಗ್ರಹಿಸುವ ತೆರಿಗೆಯೂ ಅಲ್ಲ ಅಥವಾ ಯಾವುದೇ ರೀತಿಯ ಶುಲ್ಕವೂ ಅಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಈ ಹಣವು ಸಂಪೂರ್ಣವಾಗಿ ಪಾವತಿ ವ್ಯವಸ್ಥೆಯೊಳಗೇ ಉಳಿಯಲಿದ್ದು, ಯುಪಿಐ ವಹಿವಾಟು ಪ್ರಕ್ರಿಯೆಯಲ್ಲಿ ತೊಡಗಿರುವ ಬ್ಯಾಂಕ್ಗಳು, ಪಾವತಿ ಸೇವಾ ಪೂರೈಕೆದಾರರು (PSP) ಮತ್ತು ಇತರ ಮಧ್ಯವರ್ತಿ ಸಂಸ್ಥೆಗಳ ನಡುವೆ ಹಂಚಿಕೆಯಾಗಲಿದೆ ಎಂಬುದು ಕೇಂದ್ರ ಸರ್ಕಾರದ ನಿಲುವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ವಿವರಣೆ ನೀಡುವಂತೆ ಕೇಂದ್ರ ಸರ್ಕಾರ, ಆರ್ಬಿಐ ಹಾಗೂ ಎನ್ಪಿಸಿಐಗೆ ನಿರ್ದೇಶಿಸಿರುವ ಸುಪ್ರೀಂ ಕೋರ್ಟ್, ತಮ್ಮ ಉತ್ತರವನ್ನು ನಾಲ್ಕು ವಾರಗಳಲ್ಲಿ ಸಲ್ಲಿಸುವಂತೆ ಸೂಚಿಸಿದೆ.

